ಸಾವು ಗೆದ್ದು ಬಂದ ಖ್ಯಾತ ನಟಿಗೆ ಮದುವೆಯ ಸಂಭ್ರಮ ; ರಾಕಿ ಜತೆ ಸಪ್ತಪದಿಯಿಟ್ಟ ಹೀನಾ ಖಾನ್​

ASC
Published on

ಹಿಂದಿ ಕಿರುತೆರೆಯ ಸ್ಟಾರ್​ ಎನಿಸಿಕೊಂಡವರು ನಟಿ ಹೀನಾ ಖಾನ್​. ಭಾರತೀಯ ಕಿರುತೆರೆ ಇತಿಹಾಸದಲ್ಲಿಯೇ ಸುದೀರ್ಘವಾಗಿ ಪ್ರಸಾರವಾದ ಧಾರಾವಾಹಿಗಳ ಪೈಕಿ 4755 ಸಂಚಿಕೆ ಪೂರ್ಣಗೊಳಿಸಿರುವ "ಯೇ ರಿಷ್ತಾ ಕ್ಯಾ ಕೆಹಲಾತಾ ಹೈ'ನಲ್ಲಿ ಅಕ್ಷರಾ ಮಹೇಶ್ವರಿ ಸಿಂಘಾನಿಯಾ ಪಾತ್ರದಲ್ಲಿ ನಟಿಸಿ, ಮನೆ ಮಾತಾಗಿದ್ದವರು ಅವರು. ಕ್ರಮೇಣ ರಿಯಾಲಿಟಿ ಶೋ, ಬಾಲಿವುಡ್​ ಸಿನಿಮಾ ಜತೆಗೆ ವೆಬ್​ಸರಣಿ, ಮ್ಯೂಸಿಕ್​ ವಿಡಿಯೋ ಆಲ್ಬಂಗಳಲ್ಲೂ ಮಿಂಚಿದ್ದಾರೆ.

2009ರಿಂದ 2016ರವರೆಗೆ "ಯೇ ರಿಷ್ತಾ ಕ್ಯಾ...' ಧಾರಾವಾಹಿಯಲ್ಲಿ ನಟಿಸಿದ್ದ ಹೀನಾಗೆ, ಅದೇ ಸೀರಿಯಲ್​ ನಿರ್ಮಾಣ ತಂಡದಲ್ಲಿದ್ದ ರಾಕಿ ಜೈಸ್ವಾಲ್​ ಪರಿಚಯವಾಗಿತ್ತು. 2012ರಿಂದ ಇಬ್ಬರೂ ಪರಸ್ಪರ ಪ್ರೀತಿಸತೊಡಗಿದ್ದರು. ಅವರ ಸಂಬಂಧ ಗಾಢವಾದಂತೆ ನಿರ್ಮಾಣ ಸಂಸ್ಥೆ, ಪ್ರತಿಭಾನ್ವೇಷಣೆ ನಡೆಸಲು ಒಂದು ಆ್ಯಪ್​, ಡಿಸೈನರ್​ ಉಡುಗೆಗಳ  ಬ್ರ್ಯಾಂಡ್​ ಅಂತ ಇಬ್ಬರೂ ಸೇರಿ ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿ ಉದ್ಯಮದಲ್ಲೂ ಕೈಜೋಡಿಸಿದರು.

ಇನ್ನೇನು ಈ ಜೋಡಿ ಮದುವೆಯಾಗಬೇಕು ಎನ್ನುವಷ್ಟರಲ್ಲಿ ಕಳೆದ 2024ರ ಜೂನ್​ನಲ್ಲಿ ಹೀನಾಗೆ ಸ್ಟೇಜ್​ 3 ಸ್ತನ ಕ್ಯಾನ್ಸರ್​ ಇರುವುದು ಗೊತ್ತಾಯಿತು. ಕೀಮೋಥೆರಪಿ, ಚಿಕಿತ್ಸೆ ಅಂತ ಎಲ್ಲ ಕೆಲಸಗಳಿಂದ ದೂರ ಸರಿದ ಅವರು, ಇದೀಗ ಗುಣಮುಖರಾಗಿ ವಾಪಸ್ಸಾಗಿದ್ದಾರೆ. ಆ ಖುಷಿಯನ್ನು ಹೀನಾ, ರಾಕಿ ಜೋಡಿ ಮದುವೆಯ ಮೂಲಕ ಆಚರಿಸಿದೆ. 13 ವರ್ಷಗಳ ಸುದೀರ್ಘ ಪ್ರೀತಿಯ ಬಳಿಕ ಬುಧವಾರ ಕುಟುಂಬದವರು, ಸಂಬಂಧಿಕರು, ಬಾಲಿವುಡ್​ನ ಕೆಲವೇ ಆಪ್ತರ ಸಮ್ಮುಖದಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಸದ್ಯ ಹೀನಾ "ಕಂಟ್ರಿ ಆಫ್​ ಬ್ಲೈಂಡ್​​​' ಎಂಬ ಹಿಂದಿ-ಇಂಗ್ಲೀಷ್​ ದ್ವಿಭಾಷಾ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net