

ಬೆಂಗಳೂರು: ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ದಂಪತಿಯ ವಿರಾಜಪೇಟೆಯ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ತಾರಾಜೋಡಿಯು ತಮ್ಮ ಮುದ್ದಾದ ಹೆಣ್ಣು ಮಗುವಿಗೆ ಶನಿವಾರ ‘ತ್ರಿದೇವಿ ಪೊನ್ನಕ್ಕ’ ಎಂದು ನಾಮಕರಣ ಮಾಡಿದ್ದಾರೆ. ಆಧುನಿಕ ಯುಗದಲ್ಲಿಯೂ ಮಗಳಿಗೆ ಸಾಂಪ್ರದಾಯಿಕವಾಗಿ ದೇವಿಯ ಹೆಸರು ಇಟ್ಟಿರುವುದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಮಕರಣ ಶಾಸದಲ್ಲಿ ಕುಟುಂಬದವರು, ಆಪ್ತರು, ಬಂಧು ಬಳಗದವರು ಆಗಮಿಸಿ ತ್ರಿದೇವಿಗೆ ಆಶೀರ್ವದಿಸಿದ್ದಾರೆ. ಕೊಡವ ಸಂಪ್ರದಾಯದಂತೆ ಸಮಾರಂಭ ನಡೆದಿದ್ದು, ಮಗಳ ಜತೆಗಿನ ಫೋಟೋವನ್ನು ಹರ್ಷಿಕಾ ದಂಪತಿ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಕೊಡವ ಅಭಿಮಾನಿಗಳು, ಚಿತ್ರ ನಟ-ನಟಿಯರು ಹರ್ಷಿಕಾ ದಂಪತಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಹರ್ಷಿಕಾ, ಭುವನ್ ಜೋಡಿ 2023ರ ಆಗಸ್ಟ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕಳೆದ ಜೂನ್‌ನಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಘೋಷಿಸಿದ್ದರು. ಈ ಸಂದರ್ಭದಲ್ಲಿ ನಟಿ ಹರ್ಷಿಕಾ ಕೊಡವ ಸಂಪ್ರದಾಯ ಹಾಗೂ ರವಿವರ್ಮ ಪೇಂಟಿಂಗ್ ಶೈಲಿ ಸೇರಿ, ವಿಭಿನ್ನ, ವಿಶೇಷ ಥೀಮ್ ಫೋಟೋಶೂಟ್ ಮೂಲಕ ಬೇಬಿ-ಬಂಪ್‌ನಲ್ಲಿ ಮಿಂಚಿದ್ದರು. ಅಂತೆಯೇ ಕಳೆದ ಅ.3ರಂದು ನವರಾತ್ರಿಯ ಮೊದಲ ದಿನವೇ ಹರ್ಷಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ಹೆಸರಿಗೆ ಮೂರರ ನಂಟು: ನಟಿ ಹರ್ಷಿಕಾ ಹಾಗೂ ಭುವನ್ ಪೊನ್ನಣ್ಣ ದಂಪತಿ ಸಾಕಷ್ಟು ಹುಡುಕಾಡಿ ಮಗಳಿಗೆ ಅರ್ಥಪೂರ್ಣ ಹೆಸರನ್ನಿಟ್ಟಿದ್ದಾರೆ. ‘ತ್ರಿದೇವಿ’ ಹೆಸರಿನ ಕುರಿತು, ‘ಹಿಂದು ಧರ್ಮದಲ್ಲಿ ಸರಸ್ವತಿ, ಲಕ್ಷ್ಮೀ ಹಾಗೂ ಪಾರ್ವತಿ ದೇವತೆಯರನ್ನು ‘ತ್ರಿದೇವಿ’ ಎಂದು ಕರೆಯುತ್ತೇವೆ. ಹಾಗೆಯೇ ‘ಬ್ರಹ್ಮ, ವಿಷ್ಣು, ಮಹೇಶ್ವರ’ರನ್ನು ‘ತ್ರಿಮೂರ್ತಿ’ ಎನ್ನುತ್ತೇವೆ. ಇವರು ಜ್ಞಾನ, ಆರೋಗ್ಯ, ಹಾಗೂ ಪ್ರೀತಿಯನ್ನು ಪ್ರತಿನಿಧಿಸುತ್ತಾರೆ. ಹಾಗೆಯೇ ನಮ್ಮ ಮಗಳು ಅ.3ರಂದು ಜನಿಸಿರುವ ಕಾರಣಕ್ಕಾಗಿ ಮೂರು ಸಂಖ್ಯೆ ನಮಗೆ ವಿಶೇಷ ಎನಿಸುತ್ತದೆ. ಅಂದು ನವರಾತ್ರಿ ಮೊದಲ ದಿನವಾದ ಕಾರಣ ಮೂಕಾಂಬಿಕಾ ದೇವಿಯ ಅನುಗ್ರಹ ನಮ್ಮ ಮೇಲಿದೆ ಎಂದು ನಾವು ಮಗಳಿಗೆ ‘ತ್ರಿದೇವಿ’ಎಂದು ನಾಮಕರಣ ಮಾಡಿದ್ದೇವೆ. ಪೊನ್ನಣ್ಣ ಹೆಸರಿನ ಎರಡು ಅಕ್ಷರ, ಹರ್ಷಿಕಾ ಹೆಸರಿನ ಕೊನೆಯ ಅಕ್ಷರವನ್ನು ಸೇರಿಸಿ ‘ಪೊನ್ನಕ್ಕ’ ಎಂದು ಸರ್‌ನೇಮ್ ಸೇರಿಸಿದ್ದೇವೆ’ ಎಂದು ಹರ್ಷಿಕಾ, ಭುವನ್ ಹೇಳಿಕೊಂಡಿದ್ದಾರೆ.
ಮತ್ತೆ ಆ್ಯಕ್ಟಿಂಗ್‌ನತ್ತ ಹರ್ಷಿಕಾ: ಸದ್ಯ ಮಗಳ ನಾಮಕರಣ ಸಂಭ್ರಮದಲ್ಲಿರುವ ಹರ್ಷಿಕಾ ಪೂಣಚ್ಚ, ಅದಕ್ಕೂ ಎರಡು ದಿನ ಮುಂಚೆ ಅರ್ಥಾತ್ ಮೇ 1ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮಗಳಿಗಾಗಿಕೆಲ ತಿಂಗಳ ಕಾಲ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದ ಅವರು ಇದೀಗ ಮತ್ತೆ ಆ್ಯಕ್ಟಿಂಗ್‌ಗೆ ಮರಳಿದ್ದಾರೆ. ಅವರ ಹೊಸ ಸಿನಿಮಾ ‘ಕಾಲನಾಗಿಣಿ’ ಇತ್ತೀಚೆಗಷ್ಟೇ ೋಷಣೆಯಾಗಿದ್ದು, ಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಹರ್ಷಿಕಾ, ನಾಗಿಣಿ ರೂಪದಲ್ಲಿ ಮಿಂಚಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಈ ಚಿತ್ರ ಮೂಡಿಬರಲಿದೆ. ಇನ್ನು, ಹರ್ಷಿಕಾ ನಟನೆ ಜತೆಗೆ ನಿರ್ದೇಶನಕ್ಕೆ ಮುಂದಾಗಿದ್ದು, ‘ಚಿ.ಸೌಜನ್ಯ’ ಚಿತ್ರದ ಮೂಲಕ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ಧರಿಸುತ್ತಿದ್ದಾರೆ.