

ಹರ್ಷಿಕಾ ಪೂಣಚ್ಚ ದಣದ ಸಿನಿಮಾಗಳ ಜತೆಗೆ ಉತ್ತರದ ಭೋಜಪುರಿ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದು ಈಗಾಗಲೇ ಗೊತ್ತಿರುವ ವಿಚಾರ. ಇದೀಗ ಅದೇ ಚಿತ್ರರಂಗದಿಂದ ಹರ್ಷಿಕಾಗೆ ಮತ್ತೊಮ್ಮೆ ಬುಲಾವ್ ಬಂದಿದೆ. ಅಷ್ಟೇ ಅಲ್ಲ, ಒಂದು ಸಿನಿಮಾವನ್ನೂ ಒಪ್ಪಿಕೊಂಡು ಅದರ ಶೂಟಿಂಗ್ನಲ್ಲಿ ಭಾಗವಹಿಸಿದ್ದಾರವರು. ಆ ಚಿತ್ರದ ಹೆಸರು "ಸಜನ್ ರೇ ಜೂಟ್ ಮತ್ ಬೊಲೋ'. ಪ್ರೇಮಾಂಶು ಸಿಂಗ್ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರದಲ್ಲಿ ಪ್ರದಿಪ್ ಪಾಂಡೆ ನಾಯಕನಾಗಿ ನಟಿಸುತ್ತಿದ್ದು, ಅವರಿಗೆ ಹರ್ಷಿಕಾ ಜೋಡಿಯಾಗಿದ್ದಾರೆ.
ರೊಮ್ಯಾಂಟಿಕ್ ಕಾಮಿಡಿ ಶೈಲಿಯ ಈ ಚಿತ್ರದ ಬಗ್ಗೆ ಮಾಹಿತಿ ನೀಡುವ ಹರ್ಷಿಕಾ, "ಭೋಜಪುರಿಯಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳು ಸಿಗುತ್ತಿವೆ. ಈ ಚಿತ್ರದಲ್ಲಿ ಸೋಷಿಯಲ್ ಮೀಡಿಯಾ ಸ್ಟಾರ್ ಪಾತ್ರ ಮಾಡುತ್ತಿದ್ದೇನೆ. ನಾಯಕನದ್ದು ಇಲ್ಲಿ ಬರೀ ಸುಳ್ಳು ಹೇಳುವ ಪಾತ್ರ. ಈಗಾಗಲೇ ಸೊಲ್ಲಾಪುರದಲ್ಲಿ 15 ದಿನದ ಶೂಟಿಂಗ್ ಮುಗಿದಿದೆ. ಸದ್ಯ ಹೈದರಾಬಾದ್ನಲ್ಲಿ ಶೂಟಿಂಗ್ ನಡೆಯುತ್ತಿದೆ. ಬಳಿಕ ಗುಜರಾತ್ಗೆ ತೆರಳಲಿದ್ದೇವೆ' ಎನ್ನುತ್ತಾರೆ.
"ಸಜನ್ ರೇ ಜೂಟ್ ಮತ್ ಬೋಲೋ' ಚಿತ್ರವನ್ನು ನಾಸಿರ್ ಜಮಾಲ್ ನಿರ್ಮಾಣ ಮಾಡುತ್ತಿದ್ದಾರೆ. ಸರ್ರಾಜ್ ಅವರಿಗೆ ಛಾಯಾಗ್ರಹಣದ ಜವಾಬ್ದಾರಿ. ಸದ್ಯ ಹರ್ಷಿಕಾ ಮತ್ತು ಪವನ್ ಸಿಂಗ್ ನಟನೆಯ "ಹಮ್ ಹೈ ರಾಹಿ ಪ್ಯಾರ್ ಕೆ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನ ಭರ್ತಿಗೆ ಅವಕಾಶ ಸಿಕ್ಕ ಮೇಲೆ ರಿಲೀಸ್ ಮಾಡಲು ತಂಡ ನಿರ್ಧರಿಸಿದೆ.