

ಬೆಂಗಳೂರು: ‘ನಾಗಿಣಿ’ ಧಾರಾವಾಹಿ, ಬಿಗ್‌ಬಾಸ್ 7 ಹಾಗೂ 9ರ ಸೀಸನ್‌ನಲ್ಲಿ ಕಾಣಿಸಿಕೊಂಡಿದ್ದ ನಟಿ ದೀಪಿಕಾ ದಾಸ್ ಕೆಲ ಸಿನಿಮಾಗಳಲ್ಲೂ ಮಿಂಚಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ ಸದ್ದಿಲ್ಲದೆ ರೋಹಿತ್ ಕೀರ್ತಿ ನಿರ್ದೇಶನದ ‘‘ಪಾರು ಪಾರ್ವತಿ’ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಗೆ ಬರುತ್ತಿದ್ದಾರೆ. ಇದೇ ಶುಕ್ರವಾರ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ ಪಾತ್ರ ಹಾಗೂ ಸಿನಿಮಾ ಜರ್ನಿ ಕುರಿತು ದೀಪಿಕಾ ‘ವಿಜಯವಾಣಿ’ ಜತೆ ಮಾತನಾಡಿದ್ದಾರೆ. ‘ನನಗೆ ಮೊದಲಿನಿಂದಲೂ ಪ್ರವಾಸ ಮಾಡುವುದು ತುಂಬಾ ಇಷ್ಟ. ಪ್ರತಿ ವರ್ಷವೂ ವಿದೇಶಗಳಿಗೆ ಟ್ರಿಪ್ ತೆರಳುತ್ತೇನೆ. ನನ್ನ ಪ್ರವಾಸದ ಹವ್ಯಾಸ ನೋಡಿ, ನಿರ್ದೇಶಕರು ತಮ್ಮ ಕಥೆಗೆ ಒಪ್ಪಿಗೆಯಾಗುತ್ತೇನೆ ಎಂದು ನನ್ನನ್ನು ಆಯ್ಕೆ ಮಾಡಿದರು. ಅಲ್ಲಿಂದ ಈ ಸಿನಿಮಾದ ಜರ್ನಿ ಆರಂಭವಾಯಿತು. ತನ್ನನ್ನು ತಾನು ಕಂಡುಕೊಳ್ಳಲು ಸೋಲೊ ಟ್ರಿಪ್ ಹೋಗುವ ಪಾಯಲ್ ಎಂಬ ಹುಡುಗಿಯ ಕಥೆಯಿದು. ಈ ಜರ್ನಿಯಲ್ಲಿ ಆಕೆಗೆ ಎಲ್ಲವೂ ಅನುಭವಕ್ಕೆ ಬರುತ್ತದೆ. ಪ್ರೀತಿ, ಬಾಂಧವ್ಯದ ಅರ್ಥ ಗೊತ್ತಾಗುತ್ತದೆ. ಹಾಗೇ ಕಷ್ಟ-ನಷ್ಟಗಳೂ ಆಗುತ್ತವೆ. ಈ ಸವಾಲುಗಳನ್ನು ಆಕೆ ಹೇಗೆ ಎದುರಿಸುತ್ತಾಳೆ ಎಂಬುದೇ ಸಿನಿಮಾ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ.
ಹತ್ತು ಕೆಜಿ ಇಳಿಸಿದೆ: ಈ ಚಿತ್ರಕ್ಕಾಗಿ ದೀಪಿಕಾ ಹಲವು ಸವಾಲುಗಳನ್ನು ಎದುರಿಸಿದ್ದಾರಂತೆ. ಈ ಬಗ್ಗೆ ‘ಈ ಸಿನಿಮಾ ಒಪ್ಪಿಕೊಂಡಾಗ ನಾನು ದಪ್ಪ ಇದ್ದೆ. ನಿರ್ದೇಶಕರು, ನೀವೇ ಹಿರೋಯಿನ್ ಎಂದು ನಿರ್ಧರಿಸಿದ್ದೇವೆ. ಆದಷ್ಟು ಬೇಗ ಸಿದ್ಧತೆ ನಡೆಸಿ ಎಂದರು. ಬಳಿಕ ಒಂದೇ ತಿಂಗಳಲ್ಲಿ ಹತ್ತು ಕೆಜಿ ತೂಕ ಇಳಿಸಿದೆ. ಶಾರ್ಟ್ ಹೇರ್ ಮಾಡಿಸಿಕೊಂಡೆ. ಇನ್ನು, ಬೆಂಗಳೂರಿನಿಂದ ಉತ್ತರಾಖಂಡದವರೆಗೆ ಬೈಕ್‌ನಲ್ಲಿಯೇ ಶೂಟಿಂಗ್ ಮಾಡಿದ್ದು, ಅಲ್ಲಿನ ಗಿರಿ-ಶಿಖರಗಳ ತಿರುವಿನಲ್ಲಿ ಬೈಕ್ ಓಡಿಸುವುದು ಭಯಾನಕ ಅನುಭವ. ಅಲ್ಲಿ ಒಂದೆರೆಡು ಬಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದು ಇದೆ. ಇನ್ನು ಬೇರೆ ರಾಜ್ಯಗಳ ವಾತಾವರಣಕ್ಕೆ ಹೊಂದಿಕೊಳ್ಳುವುದು ಸವಾಲಾಗಿತ್ತು. ಅಲ್ಲದೇ ಹೈವೇಯಲ್ಲಿ ಶೂಟಿಂಗ್ ನಡೆಸಿರುವುದು ತುಂಬಾ ಚಾಲೆಂಜ್ ಆಗಿತ್ತು’ ಎನ್ನುತ್ತಾರೆ.
ಎಂಟು ರಾಜ್ಯಗಳ ಪಯಣ: ಚಿತ್ರದ ಶೂಟಿಂಗ್‌ಗಾಗಿ ದೀಪಿಕಾ 8 ರಾಜ್ಯಗಳನ್ನು ಸುತ್ತಿದ್ದಾರೆ. ಈ ಪ್ರಯಾಣದ ಬಗ್ಗೆ ಅವರು, ‘ಗೋವಾ, ಮಹಾರಾಷ್ಟ್ರ, ಮಥುರಾ, ಉತ್ತರಾಖಂಡ ಸೇರಿ ಎಂಟು ರಾಜ್ಯಗಳನ್ನು ಸುತ್ತಿದ್ದೇವೆ. ಅದರೆ, ಕಥೆಯಲ್ಲಿ ಬರುವುದು ನಾಲ್ಕು ರಾಜ್ಯಗಳು ಮಾತ್ರ. ಪ್ರತಿ ಪ್ರಯಾಣವೂ ಮಾನಸಿಕ ನೆಮ್ಮದಿ ನೀಡುತ್ತದೆ. ಹಲವಾರು ವಿಚಾರಗಳನ್ನು ತಿಳಿಯಬಹುದಾಗಿದೆ’ ಎನ್ನುತ್ತಾರೆ. ಇದರ ಜತೆಗೆ ದೀಪಿಕಾ ಮತ್ತೊಂದು ಹೊಸ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರಂತೆ. ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ್ದು, ಇದೇ ವರ್ಷದಲ್ಲಿ ಬಿಡುಗಡೆಯಾಗಲಿದೆಯಂತೆ.
ಕಿಚ್ಚನಿಲ್ಲದ ಬಿಗ್‌ಬಾಸ್ ಊಹಿಸಲು ಅಸಾಧ್ಯ: ನಟ, ನಿರೂಪಕ ಸುದೀಪ್ ‘ಬಿಗ್‌ಬಾಸ್’ಗೆ ವಿದಾಯ ಹೇಳಿರುವ ಬಗ್ಗೆ ದೀಪಿಕಾ, ‘ಸುದೀಪ್ ಸರ್ ‘ಬಿಗ್‌ಬಾಸ್’ ಶೋ ನಡೆಸಿಕೊಡುತ್ತಿದ್ದ ರೀತಿ ವಿಭಿನ್ನ. ಅವರಿಲ್ಲದೆ ‘ದೊಡ್ಮನೆ’ ಊಹಿಸಿಕೊಳ್ಳಲು ಅಸಾಧ್ಯ. ಆನ್‌ಸ್ಕ್ರೀನ್, ಆ್ಸ್ಕ್ರೀನ್ ಅವರು ಆದರ್ಶದ ವ್ಯಕ್ತಿ. ಕಾರಣವಿಲ್ಲದೆ ಅವರು ಇಂತಹ ಕಠಿಣ ನಿರ್ಧಾರ ಮಾಡಲ್ಲ’ ಎನ್ನುತ್ತಾರೆ.