ಮುಂಬೈ ಖಾಲಿ ಮಾಡಿದ ಕನ್ನಡತಿಯರು

Bombay
Published on

ಮುಂಬೈನಲ್ಲಿ ಕರೊನಾ ಎರಡನೇ ಅಲೆ ಜೋರಾಗಿದೆ. ಪ್ರತಿದಿನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದಷ್ಟೇ ಅಲ್ಲ, ಬಾಲಿವುಡ್​ನಲ್ಲಂತೂ ಸಾಕಷ್ಟು ಕರೊನಾ ಸೋಂಕಿತರಿದ್ದಾರೆ. ಈ ಹಿನ್ನೆಲೆಯಲ್ಲಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಇಡೀ ರಾಜ್ಯದಲ್ಲಿ 15 ದಿನಗಳ ಜನತಾ ಕರ್ಫ್ಯೂ ಘೋಷಿಸಿದ್ದು, ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಸರ್ಕಾರ ಜಾರಿಗೆ ತಂದಿದೆ. ಈಗಾಗಲೇ ಕೆಲವು ಚಿತ್ರಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದ ಚಿತ್ರತಂಡಗಳು, ಚಿತ್ರೀಕರಣ ಸ್ಥಗಿತಗೊಳಿಸಿವೆ.

ಈ ಹಿನ್ನೆಲೆಯಲ್ಲಿ, ಮುಂಬೈನಲ್ಲಿ ನೆಲೆಸಿರುವ ಹಲವು ನಟ-ನಟಿಯರು ಮತ್ತು ತಂತ್ರಜ್ಞರು ಹುಟ್ಟೂರಿನ ಕಡೆಗೆ ಹೊರಟಿದ್ದಾರೆ. ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಮುಂಬೈನಲ್ಲೇ ನೆಲೆಸಿರುವ ದೀಪಿಕಾ ಪಡುಕೋಣೆ, ಈಗ ಪತಿ ರಣವೀರ್ ಸಿಂಗ್ ಜತೆಗೆ ಮುಂಬೈನ ಫ್ಲೈಟ್ ಹತ್ತಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಸದ್ಯ ಶೂಟಿಂಗ್ ಇಲ್ಲದ ಕಾರಣ ದೀಪಿಕಾ ಮತ್ತು ರಣವೀರ್ ಸಿಂಗ್, ಬೆಂಗಳೂರಿನಲ್ಲಿ ಸಮಯ ಕಳೆಯಲಿದ್ದಾರೆ.

ಇನ್ನು, ರಶ್ಮಿಕಾ ಮಂದಣ್ಣ ಸಹ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಕಳೆದ ಕೆಲವು ದಿನಗಳಿಂದ ಮುಂಬೈನಲ್ಲಿ ‘ಗುಡ್​ಬೈ’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಮತ್ತು ಈ ಬಾರಿಯ ಹುಟ್ಟುಹಬ್ಬವನ್ನು ಚಿತ್ರತಂಡದ ಜತೆಗೇ ಆಚರಿಸಿಕೊಂಡ ರಶ್ಮಿಕಾ ಮಂದಣ್ಣ, ಮುಂಬೈಗೆ ತಾತ್ಕಾಲಿಕ ಗುಡ್​ಬೈ ಹೇಳಿ ಹೈದರಾಬಾದ್​ಗೆ ಹೋಗಿದ್ದಾರೆ. ಮುಂಬೈ ಬಿಡುವುದಕ್ಕಿಂತ ಮುನ್ನ ಪಾಪಾರಾಜಿಗಳ ಜತೆಗೆ ಮಾತಾಡಿದ ಅವರು, ಲಾಕ್​ಡೌನ್ ಮುಗಿದ ನಂತರ ಮುಂಬೈಗೆ ಮರಳುವುದಾಗಿ ಹೇಳಿ ಹೊರಟಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net