

ಬೆಂಗಳೂರು: ‘ಗಾಳಿಪಟ’ ನಟಿ ಭಾವನಾ ರಾವ್ ಬಾಲಿವುಡ್ಗೆ ಹಾರಿದ್ದಾರೆ. ಮೊದಲ ಹಿಂದಿ ವೆಬ್ ಸರಣಿಯಲ್ಲಿ ನಟಿಸಿದ ಸಂಭ್ರಮದಲ್ಲಿದ್ದಾರೆ. ಅದೇ ಖುಷಿಯಲ್ಲಿ ಮಾತನಾಡಿದ ಭಾವನಾ ‘ಹಿಂದಿ ವೆಬ್ ಸರಣಿಯ ಚಿತ್ರೀಕರಣ ಪೂರ್ಣಗೊಂಡಿದೆ. ಓಟಿಟಿಯಲ್ಲಿ ಪ್ರಸಾರವಾಗಲಿದೆ. ಯಾವಾಗ ಬಿಡುಗಡೆ ಎಂಬ ಮಾಹಿತಿ ಇಲ್ಲ. ಈಗಲೇ ಪಾತ್ರದ ಬಗ್ಗೆ ನಾನು ಹೆಚ್ಚೇನೂ ಹೇಳುವಂತಿಲ್ಲ. ಬಾಲಿವುಡ್ನಲ್ಲಿ ನಿರ್ಮಾಣ ಸಂಸ್ಥೆ ಹೇಳಿದ ಬಳಿಕವಷ್ಟೇ ನಾನು ಮಾತನಾಡಬಲ್ಲೆ’ ಎಂದಷ್ಟೇ ಹೇಳುತ್ತಾರೆ.
ಅದರ ಜೊತೆಗೆ ‘ಹೊಂದಿಸಿ ಬರೆಯಿರಿ’ ಚಿತ್ರದಲ್ಲೂ ಅವರು ನಟಿಸಿದ್ದು, ಅದಿನ್ನು ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ. ಹಾಗೆಯೇ ‘ಗ್ರೇ ಗೇಮ್್ಸ’ ಎಂಬ ಚಿತ್ರದಲ್ಲೂ ಭಾವನಾ ಅಭಿನಯಿಸಿದ್ದು, ಅದು ಅಕ್ಟೋಬರ್ನಲ್ಲಿ ಬಿಡುಗಡೆಯಾಗಲಿದೆಯಂತೆ. ಉಳಿದಂತೆ ಇನ್ನೂ ಒಂದು ಚಿತ್ರ ಕೆಲವು ದಿನಗಳಲ್ಲಿ ಘೋಷಣೆ ಆಗಲಿದೆ ಎಂದು ತಮ್ಮ ಕೈಲಿರುವ ಚಿತ್ರಗಳ ಬಗ್ಗೆ ಹೇಳಿಕೊಳ್ಳುತ್ತಾರೆ. ಹಾಗಂತ ಸಿನಿಮಾಗಳಷ್ಟೇ ಅಲ್ಲ, ನಟಿ ಭಾವನಾ ಈಗೀಗ ಭರತನಾಟ್ಯದತ್ತಲೂ ಹೆಚ್ಚು ಗಮನ ಹರಿಸಿದ್ದಾರೆ. ‘ಐದು ವರ್ಷ ವಯಸ್ಸಿನಿಂದಲೇ ಭರತನಾಟ್ಯ ಕಲಿಯುತ್ತಿದ್ದೇನೆ. ಆರಂಗೇಟ್ರಂ ಕೂಡ ಆಗಿದೆ.’ ಎಂದು ಹೇಳುವ ಭಾವನಾ, ಒಂದು ಹಾಡನ್ನು ತಾವೇ ನೃತ್ಯನಿರ್ದೇಶನ ಕೂಡ ಮಾಡಿದ್ದಾರೆ.
‘‘ಗರುಡ ಗಮನ ವೃಷಭ ವಾಹನ’ ಚಿತ್ರದ ‘ಚಂದ್ರಚೂಡ’ ಹಾಡು ತುಂಬ ಇಷ್ಟವಾಗಿತ್ತು. ಶಿವನ ಕುರಿತಾದ ಹಾಡು ಕೊರಿಯೋಗ್ರಾಫ್ ಮಾಡಬೇಕು ಅಂತನ್ನಿಸಿ ಕೇವಲ ಮೂರು ತಾಸುಗಳಲ್ಲಿ ಹಾಡನ್ನು ಚಿತ್ರೀಕರಿಸಿದೆವು’ ಎಂದು ನೃತ್ಯನಿರ್ದೇಶನದ ಬಗ್ಗೆ ಮಾತನಾಡುತ್ತಾರೆ. ಅಂದಹಾಗೆ ಅವರದೇ ಯೂಟ್ಯೂಬ್ ಚಾನಲ್ನಲ್ಲಿ ‘ಚಂದ್ರಚೂಡ’ ಹಾಡಿನ ಭರತನಾಟ್ಯ ವರ್ಷನ್ ಇಂದು ರಿಲೀಸ್ ಆಗಲಿದೆ.