

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಯುವ ನಿರ್ದೇಶಕ ಕಿಶೋರ್ ಮೂಡುಬಿದ್ರೆ ಆ್ಯಕ್ಷನ್- ಕಟ್ ಹೇಳುತ್ತಿರುವ, ವಿಜಯ್ ರಾಘವೇಂದ್ರ ನಾಯಕನಾಗಿರುವ ಸಿನಿಮಾ "ರಿಪ್ಪನ್ಸ್ವಾಮಿ'. ಈಗಾಗಲೇ ವಿಭಿನ್ನ ಟೈಟಲ್ ಮತ್ತು ಪೋಸ್ಟರ್ ಮೂಲಕ ಗಮನ ಸೆಳೆದಿರುವ ಈ ಚಿತ್ರದ ಮೂಲಕ ನಟಿ ಅಶ್ವಿನಿ ಚಂದ್ರಶೇಖರ್ ಸ್ಯಾಂಡಲ್ವುಡ್ಗೆ ಮತ್ತೆ ವಾಪಸ್ಸಾಗಿದ್ದಾರೆ. ಮೂಲತಃ ಶಿವಮೊಗ್ಗದ ಅಶ್ವಿನಿ, ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಪೂರ್ಣಗೊಳಿಸಿ, "ಪ್ರೇಮ ಪಲ್ಲಕ್ಕಿ' ಚಿತ್ರದ ಮೂಲಕ 2015ರಲ್ಲಿ ಸ್ಯಾಂಡಲ್ವುಡ್ಗೆ ನಾಯಕಿಯಾಗಿ ಪದಾರ್ಪಣೆ ಮಾಡಿದರು. ಬಳಿಕ "ಒಂದು ರೊಮ್ಯಾಂಟಿಕ್ ಪ್ರೇಮಕತೆ', "ಆಕ್ಟೋಪಸ್' ಸೇರಿ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿದ ಅವರು, ಕ್ರಮೇಣ ಪರಭಾಷೆಗಳಲ್ಲಿ ಬಿಜಿಯಾದರು. ತೆಲುಗಿನಲ್ಲಿ "ಪ್ರೇಮ್ ಕಹಾನಿ', "ಆವು ಪುಲಿ ಮಧ್ಯಲೋ ಪ್ರಭಾಸ್ ಪೆಳ್ಳಿ', ತಮಿಳಿನಲ್ಲಿ "ಮೆರ್ಲಿನ್'. "ಪರಂಜು ಸೆಲ್ಲವ', "ಕಾಲ್ ಟ್ಯಾಕ್ಸಿ'. "ಜಿವಿ 2' ಸೇರಿ ಮಲಯಾಳಂನಲ್ಲೂ ನಟಿಸುತ್ತಿದ್ದಾರೆ. ಹೀಗೆ ಕಳೆದ ಏಳೆಂಟು ವರ್ಷಗಳಿಂದ ಪರಭಾಷೆಗಳಲ್ಲೇ ಬಿಜಿಯಾಗಿದ್ದ ಅಶ್ವಿನಿ, ಇದೀಗ "ರಿಪ್ಪನ್ ಸ್ವಾಮಿ' ಮೂಲಕ ಸ್ಯಾಂಡಲ್ವುಡ್ಗೆ ಕಮ್ಬ್ಯಾಕ್ ಮಾಡಿರುವ ಸಂಭ್ರಮದಲ್ಲಿದ್ದಾರೆ.
ಅವರಿಲ್ಲಿ ವೈದ್ಯೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಕಿಶೋರ್ ಮೂಡುಬಿದ್ರೆ, "ಅಶ್ವಿನಿ ಚಂದ್ರಶೇಖರ್ ನಮ್ಮ ಚಿತ್ರದಲ್ಲಿ ವಿಜಯ್ ರಾವೇಂದ್ರ ಪತ್ನಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾಯಕನ ಪಾತ್ರಕ್ಕೆ ಎಷ್ಟು ಮಹತ್ವವಿದೆಯೋ, ನಾಯಕಿಯ ಪಾತ್ರಕ್ಕೂ ಅಷ್ಟೇ ಮಹತ್ವವಿದೆ. ಇಬ್ಬರೂ ಸರಿಸಮನಾಗಿ ಕಥೆಯನ್ನು ಮುಂದುವರಿಸುತ್ತಾರೆ' ಎಂದು ಮಾಹಿತಿ ನೀಡುತ್ತಾರೆ. ಸದ್ಯ "ರಿಪ್ಪನ್ ಸ್ವಾಮಿ' ಸೆನ್ಸಾರ್ ಅಂಗಳದಲ್ಲಿದ್ದು, ತೆರೆಗೆ ಬರಲು ಸಿದ್ಧತೆ ನಡೆಸುತ್ತಿದೆ.
ಸಾಲು ಸಾಲು ಚಿತ್ರಗಳಲ್ಲಿ ಬಿಜಿ
ಕನ್ನಡದಲ್ಲಿ "ರಿಪ್ಪನ್ಸ್ವಾಮಿ' ಸೇರಿ ತಮಿಳಿನಲ್ಲಿ "ಜಿವಿ 3' ಹಾಗೂ ಮತ್ತೊಂದು ಚಿತ್ರ ಮತ್ತು ಮಲಯಾಳಂನಲ್ಲೂ ಎರಡು ಸಿನಿಮಾಗಳಲ್ಲಿ ಅಶ್ವಿನಿ ನಟಿಸಿದ್ದು, ಸದ್ಯ ಮೂರು ಭಾಷೆಗಳ ಐದು ಚಿತ್ರಗಳು ರಿಲೀಸ್ಗೆ ರೆಡಿಯಾಗುತ್ತಿವೆ.