

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕನ್ನಡದಲ್ಲಿ ಕರಿಯರ್ ಪ್ರಾರಂಭಿಸಿ, ಸದ್ಯ ಪರಭಾಷೆಗಳಲ್ಲಿ ಸೆಟಲ್ ಆಗಿರುವ ನಟ, ನಟಿಯರ ಸಾಲೇ ಇದೆ. ಕೆಲವರು ಮತ್ತೆ ಕನ್ನಡದಲ್ಲಿ ಕಮ್ಬ್ಯಾಕ್ ಮಾಡಿದ್ದರೂ, ಕೆಲವರು ಮತ್ತೆ ಇತ್ತ ಸುಳಿದಿಲ್ಲ. ಇದೀಗ ಸ್ಯಾಂಡಲ್ವುಡ್ನಲ್ಲಿ ಸಿನಿಮಾ ಪಯಣ ಆರಂಭಿಸಿ, ಕೆಲ ವರ್ಷಗಳಿಂದ ಪರಭಾಷೆಗಳಲ್ಲಿ ಬಿಜಿಯಾಗಿದ್ದ ನಟಿ ಅಶ್ವಿನಿ ಚಂದ್ರಶೇಖರ್, ಇದೀಗ "ರಿಪ್ಪನ್ ಸ್ವಾಮಿ' ಚಿತ್ರದ ಮೂಲಕ ಕನ್ನಡಕ್ಕೆ ರಿ&ಎಂಟ್ರಿ ಕೊಟ್ಟಿದ್ದಾರೆ. ಕಿಶೋರ್ ಮೂಡಬಿದ್ರಿ ನಿರ್ದೇಶನದ ಈ ಚಿತ್ರದಲ್ಲಿ ಅವರು ವಿಜಯ್ ರಾವೇಂದ್ರಗೆ ಜೋಡಿಯಾಗಿದ್ದಾರೆ. ಸಿನಿಮಾ ಇಂದು ತೆರೆಗೆ ಬರುತ್ತಿದ್ದು, ಇದೇ ಖುಷಿಯಲ್ಲಿ ವಿಜಯವಾಣಿ ಜತೆ ಅಶ್ವಿನಿ ಮಾತಿಗೆ ಸಿಕ್ಕಿದ್ದರು.
ಮತ್ತೆ ಕನ್ನಡದಲ್ಲಿ ನಟಿಸಿದ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, "ನಾನು ನಾನು ಮಲೆನಾಡ ಹುಡುಗಿ. ಮೊದಲ ವರ್ಷದ ಡಿಗ್ರೀ ಓದುವಾಗ ಮಿಸ್ ಕರ್ನಾಟಕ ಗೆದ್ದ ಬಳಿಕ ಚೆನ್ನೈನಲ್ಲಿ ನಡೆದ ಮಿಸ್ ಸೌತ್ ಇಂಡಿಯಾ ಕೂಡ ಗೆದ್ದಿದ್ದೆ. ಆಗಲೇ ತಮಿಳಿನಲ್ಲಿ ಹಲವು ಆರ್ಸ್ ಬಂದಿದ್ದವು. ಆದರೆ, ನಟಿಸಿರಲಿಲ್ಲ. ಕನ್ನಡದಲ್ಲಿ "ಪ್ರೇಮ ಪಲ್ಲಕ್ಕಿ', "ಆಕ್ಟೋಪಸ್', "ಒಂದು ರೊಮ್ಯಾಂಟಿಕ್ ಕೆಮ್ ಕಥೆ' ಸೇರಿ ಕೆಲ ಸಿನಿಮಾಗಳಲ್ಲಿ ನಟಿಸಿದೆ. ಆದರೆ, ಕ್ರಮೇಣ ತಮಿಳು, ಮಲಯಾಳಂ, ತೆಲುಗಿನಲ್ಲೂ ಆರ್ಸ್ ಬಂದು, ಪರಭಾಷೆಗಳಲ್ಲಿ ಹೆಚ್ಚು ಬಿಜಿಯಾದೆ. ಇದೀಗ 10 ವರ್ಷಗಳ ಬಳಿಕ "ರಿಪ್ಪನ್ ಸ್ವಾಮಿ'ಯಂತಹ ಕಂಟೆಂಟ್ ಪ್ರಧಾನ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ವಾಪಸ್ಸಾಗಿರುವುದು ಖುಷಿ ನೀಡಿದೆ. ಕಥೆ ಎಲ್ಲರಿಗೂ ಒಂದಲ್ಲಾ ಒಂದು ರೀತಿ ಕನೆಕ್ಟ್ ಆಗುತ್ತದೆ' ಎಂದು ಸಂತಸ ಹಂಚಿಕೊಳ್ಳುತ್ತಾರೆ.
"ರಿಪ್ಪನ್ ಸ್ವಾಮಿ'ಯಲ್ಲಿ ಅಶ್ವಿನಿ ಮಂಗಳ ಎಂಬ ವೈದ್ಯೆಯ ಪಾತ್ರದಲ್ಲಿ ನಟಿಸಿದ್ದು, "ಸಿನಿಮಾ ನೋಡಿ ಹೊರಬಂದ ಬಳಿಕವೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವಂತಹ ಪಾತ್ರವಿದು. ಡಾಕ್ಟರ್ ಓದಿದ್ದರೂ ಕಟುಕ, ರಾಕ್ಷಸನನ್ನು ಮದುವೆಯಾಗಿ, ಸಂಸಾರದಲ್ಲಿ ಹೋರಾಟ ನಡೆಸುವ ಮೃದು ಯುವತಿ ಕ್ರಮೇಣ ಹೇಗೆ ಬದಲಾಗುತ್ತಾಳೆ ಎಂಬುದು ಕಥೆ. ಮದುವೆಯ ಬಳಿಕ ಗಂಡನ ಜತೆ ಇರಲೂ ಆಗದೇ, ಆ ಸಂಬಂಧದಿಂದ ಹೊರಗೆ ಬರಲೂ ಆಗದೇ ಒದ್ದಾಡುವ ಹಲವು ಹೆಣ್ಣುಮಕ್ಕಳಿದ್ದಾರೆ. ಉಸಿರು ಕಟ್ಟುವಂತಹ ಪರಿಸ್ಥಿತಿಯನ್ನು ಎದುರಿಸುವ ಪಾತ್ರ. ನಾಯಕನಿಗೆ ಎಷ್ಟು ಪ್ರಾಮುಖ್ಯವಿದೆಯೋ, ನಾಯಕಿಗೂ ಅಷ್ಟೇ ಪ್ರಾಮುಖ್ಯವಿದೆ. ನಾನು ಕಲಾವಿದೆ ಆಗಿರದಿದ್ದರೆ, ಡಾಕ್ಟರ್ ಆಗಬೇಕು ಅಂತಿದ್ದೆ. ಇದೀಗ ವೈದ್ಯಳ ಪಾತ್ರದಲ್ಲಿ ನಟಿಸಿ ಆ ಆಸೆ ಈಡೇರಿಸಿಕೊಂಡಿದ್ದೇನೆ' ಎನ್ನುತ್ತಾರೆ ಅಶ್ವಿನಿ.
ಈಗಾಗಲೇ ನಾಲ್ಕು ಭಾಷೆಗಳಲ್ಲಿ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅಶ್ವಿನಿ ಚಂದ್ರಶೇಖರ್, ಸದ್ಯ "ರಿಪ್ಪನ್ ಸ್ವಾಮಿ' ರಿಲೀಸ್ಗೆ ಎದುರು ನೋಡುತ್ತಿದ್ದಾರೆ. ಆ ಬಳಿಕ ಕನ್ನಡದಲ್ಲೇ ಹೆಚ್ಚು ಅವಕಾಶಗಳು ಬರುವ ನಿರೀೆ ಅವರದು. ಜತೆಗೆ ಅವರು ನಟಿಸಿರುವ "ಜೀವಿ 2', "ಮರಕದ ಕಾಡು' ಸೇರಿ ತಮಿಳಿನ ಮೂರು ಹಾಗೂ ಕನ್ನಡದ "ಓಮ್ನಿ' ಚಿತ್ರಗಳು ರಿಲೀಸ್ ಆಗಬೇಕಿದೆ.