

ಬೆಂಗಳೂರು: ‘‘ತಿಮ್ಮನ ಮೊಟ್ಟೆಗಳು’ ಚಿತ್ರದ ಇಡೀ ಜರ್ನಿಯನ್ನು ಒಮ್ಮೆ ಕಣ್ಣಾಯಿಸಿದರೆ, ‘ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ, ನಾವೇ ಪ್ರಕೃತಿಯ ಒಂದು ಭಾಗ’ ಎಂಬ ಪೂರ್ಣಚಂದ್ರ ತೇಜಸ್ವಿ ಮಾತು ನೆನಪಿಗೆ ಬರುತ್ತದೆ. ಇದನ್ನೇ ನಮ್ಮ ಸಿನಿಮಾ ಸಾರುತ್ತದೆ. ಹಾಗೆಯೇ ಇಲ್ಲಿ ನಾನು ಸ್ನೇಕ್ ರೀಸರ್ಚರ್ ಆಗಿದ್ದು, ಪರಿಸರ ಪ್ರೀತಿಯ ಜತೆಗೆ ಮಾನವೀಯತೆಗೆ ಮಿಡಿಯುವ ಪಾತ್ರದಲ್ಲಿದ್ದೇನೆ’ -ನಟಿ ಆಶಿಕಾ ಸೋಮಶೇಖರ್ ಶುಕ್ರವಾರ ಬಿಡುಗಡೆಗೆ ಸಿದ್ಧವಿರುವ ‘ತಿಮ್ಮನ ಮೊಟ್ಟೆಗಳು’ ಚಿತ್ರದ ಪಾತ್ರವನ್ನು ಪರಿಚಯಿಸಿಕೊಂಡ ರೀತಿ ಇದು.
ಯೋಗ ಟ್ರೇನರ್, ಡಾನ್ಸರ್ ಆಗಿರುವ ಆಶಿಕಾ ಈಗ ಆ್ಯಕ್ಟರ್ ಆಗಿ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ‘ಮುಂದುವರಿದ ಅಧ್ಯಾಯ’, ‘ವಿಕಿಪೀಡಿಯಾ’ ಚಿತ್ರಗಳಲ್ಲಿ ನಟಿಸಿ, ‘ಮಹಾನಟಿ’ ರಿಯಾಲಿಟಿ ಶೋದಲ್ಲಿ ಮಿಂಚಿದ್ದ ಅವರು, ಇದೀಗ ‘ತಿಮ್ಮನ ಮೊಟ್ಟೆಗಳು’ ಮೂಲಕ ಮತ್ತೊಮ್ಮೆ ತೆರೆಗೆ ಬರಲು ಸಿದ್ಧರಾಗಿದ್ದಾರೆ. ಕಾಳಿಂಗ ಸರ್ಪಗಳ ರಕ್ಷಣೆಯ ಸುತ್ತ ಈ ಕಥೆಯಿದ್ದು, ರಕ್ಷಿತ್ ತೀರ್ಥಹಳ್ಳಿ ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ಆಯ್ಕೆಯಾದ ಬಗ್ಗೆ ಆಶಿಕಾ, ‘ರಕ್ಷಿತ್ ತಾವೇ ಬರೆದಿದ್ದ ‘ಕಾಡಿನ ನೆಂಟರು’ ಪುಸ್ತಕವನ್ನು ನೀಡಿ, ಓದಲು ಹೇಳಿದರು. ನಾನು ಓದಿ ಅಭಿಪ್ರಾಯ ತಿಳಿಸಿದೆ. ಬಳಿಕ ಅವರು, ಈ ಪುಸ್ತಕದ ಒಂದು ಕಥೆಯನ್ನು ಸಿನಿಮಾ ಮಾಡುತ್ತಿದ್ದೇವೆ. ಅದಕ್ಕೆ ನೀವೇ ಹೀರೋಯಿನ್ ಎಂದು ತಂಡಕ್ಕೆ ಸ್ವಾಗತಿಸಿದರು. ಇಲ್ಲಿ ನನ್ನದು ಹಿತಾ ಎಂಬ ಉರಗ ತಜ್ಞೆಯ ಪಾತ್ರ. ಸಂಘರ್ಷದ ಮಧ್ಯೆ ಕಾಡಿನ ಮುಗ್ಧ ಜನರಿಗೆ ಹೇಗೆ ಸಪೋರ್ಟಿವ್ ಆಗಿ ನಿಲ್ಲುತ್ತೇನೆ ಎಂಬುದನ್ನು ತಿಳಿಸುತ್ತದೆ. ದಟ್ಟವಾದ ಕಾಡು, ಮಳೆಯಲ್ಲಿ ಶೂಟಿಂಗ್ ಮಾಡಿದ್ದು ಭಯಾನಕ ಅನುಭವಗಳನ್ನು ನೀಡಿದೆ. ಜತೆಗೆ ಸುಚೇಂದ್ರ ಪ್ರಸಾದ್ ಸರ್ ಜತೆ ಕೆಲಸ ಮಾಡಿದ್ದು ದೊಡ್ಡ ಕಲಿಕೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ. ಹಾಗೇ ‘ಪರಿಸರವಿಲ್ಲದೇ ನಾವಿಲ್ಲ’ ಎನ್ನುವ ಈ ಮಲೆನಾಡ ಹುಡುಗಿ, ‘ಹಿಂದೆ ಮನುಷ್ಯರಿಗಿಂತ ಕಾಡು, ಪ್ರಾಣಿಗಳೇ ಹೆಚ್ಚಿದ್ದವು. ಆದರೆ, ಈಗ ಕಾಡಿನ ಪ್ರಮಾಣ ಕಡಿಮೆಯಾಗಿದ್ದು, ಜನಸಂಖ್ಯೆ ಹೆಚ್ಚಳವಾಗಿದೆ. ಮನುಷ್ಯ ಸ್ವಾರ್ಥಕ್ಕಾಗಿ ನಿರಂತರವಾಗಿ ಕಾಡನ್ನು ಹಾಳು ಮಾಡುತ್ತಿದ್ದಾನೆ. ಈಗಲಾದರೂ ನಾವು ಎಚ್ಚೆತ್ತುಕೊಳ್ಳಬೇಕಿದೆ’ ಎನ್ನುತ್ತಾರೆ.
ಕಥೆ ಬರವಣಿಗೆ ಹಂತದಲ್ಲಿ: ಆಶಿಕಾ ‘ತಿಮ್ಮನ ಮೊಟ್ಟೆಗಳು’ ಬಳಿಕ ದಿಲೀಪ್ ನಿರ್ದೇಶಿಸಲಿರುವ ಹೊಸ ಚಿತ್ರ ಒಪ್ಪಿಕೊಂಡಿದ್ದು, ಅದು ಸದ್ಯದಲ್ಲೇ ಸೆಟ್ಟೇರಲಿದೆ. ಹಾಗೇ ತಾವೇ ತಂಡವೊಂದನ್ನು ಕಟ್ಟಿಕೊಂಡು, ಸಿನಿಮಾ ಮಾಡಲು ಮುಂದಾಗಿರುವ ಆಶಿಕಾ, ಸದ್ಯ ಕಥೆಯ ಬರವಣಿಗೆಯಲ್ಲಿ ತೊಡಗಿದ್ದಾರೆ.