

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಸಿನಿಮಾಗಳಲ್ಲಿ ಸಾಹಸ ಮಾಡುವುದನ್ನು ನೋಡಿರುತ್ತೇವೆ. ಮೌಂಟ್ ಎವರೆಸ್ಟ್ ಏರುವ, ವಿಮಾನದಿಂದ ಜಿಗಿಯುವ, ಧುಮ್ಮಿಕ್ಕಿ ಹರಿಯುವ ನದಿಯಲ್ಲಿ ಈಜುವ... ಇಂತಹ ಹಲವು ಚಿತ್ರಗಳನ್ನು ನೋಡಿದ್ದೇವೆ. ಆದರೆ, ಜೀವಕ್ಕೆ ಮಾರಕವಾದ ಇಂತಹ ಸಾಹಸಗಳನ್ನು ನಿಜ ಜೀವನದಲ್ಲಿ ಮಾಡುವುದು ಕಷ್ಟಸಾಧ್ಯ. ಇದೀಗ ಆ ಮಾತನ್ನು ಕನ್ನಡದ "ಮಾಮು ಟೀ ಅಂಗಡಿ', "ಗೌಡ್ರು ಹೋಟೆಲ್' ಸೇರಿ ಕೆಲ ತಮಿಳು, ತೆಲುಗು ಚಿತ್ರಗಳಲ್ಲೂ ನಟಿಸಿರುವ ಅರ್ಚನಾ ಸಿಂಗ್ಗೆ ಸುಳ್ಳಾಗಿಸಿದ್ದಾರೆ. ಅವರು ಕೆಲ ದಿನಗಳ ಹಿಂದಷ್ಟೇ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ಗೆ ಹೋಗಿ ಬಂದಿದ್ದಾರೆ.
"ಬೇಸ್ ಕ್ಯಾಂಪ್ಗೆ ಹೋಗಬೇಕು ಅಂತ ಬಹುದಿನಗಳ ಆಸೆಯಿತ್ತು. ಅದರಂತೆ ಕಳೆದ ಮೇನಲ್ಲಿ 14 ದಿನಗಳ ಕಾಲ ಟ್ರೆಕಿಂಗ್ ಹೋಗಿ ಬಂದೆ. ಬೆಂಗಳೂರಿನಿಂದ ಗೋರಖಪುರಕ್ಕೆ ವಿಮಾನದಲ್ಲಿ ಹೋಗಿ. ಅಲ್ಲಿಂದ ಬಸ್ನಲ್ಲಿ ನೇಪಾಳ ಗಡಿ ದಾಟಿ ಕಾಠ್ಮಂಡುಗೆ ತೆರಳಿದೆ. ಅಲ್ಲಿಂದ 130 ಕಿಮೀಗಳ ಸುದೀರ್ ಬೇಸ್ ಕ್ಯಾಂಪ್ ಟ್ರೆಕಿಂಗ್ ಪ್ರಾರಂಭಿಸಿದೆ. ಬೇಸ್ ಕ್ಯಾಂಪ್ಗೆ ಹೋಗುವಾಗ ಎಂಟು ದಿನ ಬೇಕಾಯಿತು. ನಾಲ್ಕೈದು ದಿನಗಳಲ್ಲಿ ವಾಪಸ್ ಬಂದೆ. ಈ ಟ್ರೆಕ್ನಲ್ಲಿ ಹಿಮಚ್ಛಾದಿತ ಬೆಟ್ಟ ಗುಡ್ಡ, ಬಂಡೆಗಲ್ಲು, ಹಸಿರ ಸಿರಿ, ಬರಡು ಪ್ರದೇಶ... ಹೀಗೆ ಎಲ್ಲ ಬಗೆಯ ಪ್ರಾಕೃತಿಕ ಸೌಂದರ್ಯಗಳೂ ಎದುರಾದವು. ಅದ್ಭುತ ಜೀವನಾನುಭವ ನೀಡಿದ ಸವಾಲಿನ ಸಾಹಸ ಮಾಡಿದ ಖುಷಿಯಿದೆ' ಎಂದು ಸಂತಸ ಹಂಚಿಕೊಳ್ಳುತ್ತಾರೆ. ಅಂದಹಾಗೆ, ಸ್ಯಾಂಡಲ್ವುಡ್ ನಟಿ ಶ್ವೇತಾ ಪ್ರಸಾದ್, ಬಾಲಿವುಡ್ ನಟಿ ಮೊನಿಷಾ ಕೊಯಿರಾಲ, ಹಾಲಿವುಡ್ ನಟಿ ಮ್ಯಾಂಡಿ ಮೂರ್ ಸೇರಿ ಕೆಲವೇ ನಟಿಯರು ಇದುವರೆಗೆ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ಗೆ ಭೇಟಿ ನೀಡಿದ್ದು, ಇದೀಗ ಈ ಸಾಲಿಗೆ ಮತ್ತೊಬ್ಬ ಕನ್ನಡತಿ ಅರ್ಚನಾ ಕೂಡ ಸೇರಿದ್ದಾರೆ.
ಬೆಂಗಳೂರು ಸುತ್ತಮುತ್ತ ಬೆಟ್ಟ, ಗುಡ್ಡ, ದೇವಸ್ಥಾನಗಳಿಗೆ ಟ್ರೆಕ್ ಮಾಡಿದ್ದ ಅರ್ಚನಾ, ಒಮ್ಮೆ ಹಿಮಾಚಲ ಪ್ರದೇಶದಲ್ಲೂ ಮಂಜಿನ ನಡುವೆ ಟ್ರೆಕಿಂಗ್ ಮಾಡಿದ್ದರಂತೆ. "ಬೇಸ್ ಕ್ಯಾಂಪ್ಗೆ ಹೋಗಲು ಕನಿಷ್ಠ ಎರಡು, ಮೂರು ತಿಂಗಳ ಸಿದ್ಧತೆ ಬೇಕು. ಪ್ರತಿದಿನ 10ರಿಂದ 20 ಕಿಮೀ ವಾಕ್ ಮಾಡಬೇಕು. ನನಗೆ ಸಮಯವಿರಲಿಲ್ಲ. ಹೀಗಾಗಿ ಅಷ್ಟೆಲ್ಲ ಸಿದ್ಧತೆ ಮಾಡಿಕೊಳ್ಳಲು ಆಗಲಿಲ್ಲ. ಹಿಮಾಲಯ ಏರಿದಂತೆ ಆಮ್ಲಜನಕ ಕಡಿಮೆಯಾಗುವ ಕಾರಣ, ಉಸಿರಾಟಕ್ಕೆ ತೊಂದರೆ ಉಂಟಾಗುತ್ತದೆ. ಹೀಗಾಗಿ ತುಂಬ ಎಚ್ಚರ ವಹಿಸಬೇಕು. ಬೇಸ್ ಕ್ಯಾಂಪ್ ಟ್ರೆಕಿಂಗ್ ಹೋಗುವ 100ರಲ್ಲಿ ಕೇವಲ 50 ಜನ ಮಾತ್ರ ಅದನ್ನು ಕಂಪ್ಲೀಟ್ ಮಾಡಲು ಸಾಧ್ಯ. ಅಷ್ಟರ ಮಟ್ಟಿಗೆ ದೈಹಿಕ, ಮಾನಸಿಕವಾಗಿ ಗಟ್ಟಿ ಇರಬೇಕು. ಗೈಡ್ ಇಲ್ಲದೇ ಹೋಗುವಂತಿಲ್ಲ' ಎಂದು ಮಾಹಿತಿ ನೀಡುತ್ತಾರೆ.
ಮೊದಲ ಪ್ರಯತ್ನದಲ್ಲೇ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಹತ್ತಿದ ಸಂಭ್ರಮದಲ್ಲಿರುವ ಅರ್ಚನಾ, ಅದೇ ಖುಷಿಯಲ್ಲಿ ಕಿಲಿಮಂಜಾರೋ ಮತ್ತು ಕೈಲಾಸ ಪರ್ವತಗಳನ್ನು ಏರಬೇಕು ಅಂತ ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದಾರೆ. "ಬೇಸ್ ಕ್ಯಾಂಪ್ಗೆ ಹೋಗುವ ಮುನ್ನ ಇದು ಸಾಧ್ಯನಾ? ಅಂತ ನನ್ನಲ್ಲೇ ಅನುಮಾನವಿತ್ತು. ಈಗ ಆತ್ಮವಿಶ್ವಾಸ ಹೆಚ್ಚಿದೆ. ದೈಹಿಕವಾಗಿ ಮತ್ತಷ್ಟು ಸಕ್ರಿಯಳಾಗಿದ್ದೇನೆ. ಕೈಲಾಸಕ್ಕೆ ಅಡ್ವೆಂಚರ್ ಜತೆ ಆಧ್ಯಾತ್ಮಿಕ ಟ್ರೆಕ್ ಮಾಡಬೇಕು ಅಂತ ಅಂದುಕೊಂಡಿದ್ದೇನೆ' ಎನ್ನುತ್ತಾರೆ.
"ಪರಭಾಷೆಗಳಲ್ಲಿ ಹೆಚ್ಚು ಅವಕಾಶಗಳು ದೊರೆಯುತ್ತಿದ್ದು, ಕನ್ನಡದಲ್ಲಿ ಪ್ರಾಮುಖ್ಯವಿಲ್ಲದ ಪಾತ್ರಗಳು ಸಿಗುತ್ತಿದ್ದ ಕಾರಣ ಇಲ್ಲಿ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದೆ' ಎನ್ನುವ ಅರ್ಚನಾ, ಸದ್ಯ ಕನ್ನಡದಲ್ಲಿ ಕಮ್ಬ್ಯಾಕ್ ಮಾಡಲು ಎದುರು ನೋಡುತ್ತಿದ್ದಾರೆ. ತಮಿಳಿನ ಎರಡು ವೆಬ್ರಸಣಿಗಳಲ್ಲಿ ನಟಿಸುತ್ತಿರುವ ಅವರು ಅದರ ಜತೆಗೆ ಕನ್ನಡ ಮತ್ತು ತೆಲುಗಿನಲ್ಲೂ ಕಥೆ ಕೇಳುತ್ತಿದ್ದಾರಂತೆ.