ಪುರುಷೋತ್ತಮನ ಜತೆಯಾದ ಅಪೂರ್ವ

Purushottama
Published on

ಬೆಂಗಳೂರು: ಬಾಡಿ ಬಿಲ್ಡರ್ ರವಿ ಅಲಿಯಾಸ್ ಜಿಮ್ ರವಿ ಇದೇ ಮೊದಲ ಬಾರಿಗೆ ಹೀರೋ ಆಗಿ ನಟಿಸುತ್ತಿರುವ ‘ಪುರುಷೋತ್ತಮ’ ಎಂಬ ಚಿತ್ರ ಕೆಲವು ದಿನಗಳ ಹಿಂದಷ್ಟೇ ಶುರು ಆಗಿದ್ದು ನೆನಪಿರಬೇಕಲ್ಲ? ಹೊಸ ವಿಷಯವೇನೆಂದರೆ, ಆ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ.

ಚಿತ್ರದ ಮುಹೂರ್ತದಲ್ಲಿ ನಾಯಕಿಯ ಆಯ್ಕೆ ಆಗಿರಲಿಲ್ಲ. ಇದೀಗ ಚಿತ್ರದಲ್ಲಿ ‘ಅಪೂರ್ವ’ ಖ್ಯಾತಿಯ ಅಪೂರ್ವ ನಾಯಕಿಯಾಗಿ ನಟಿಸಿದ್ದಾರೆ. ಇತ್ತೀಚೆಗಷ್ಟೇ, ಬಿಡುಗಡೆಯಾದ ‘ಕೃಷ್ಣ ಟಾಕೀಸ್’ ಚಿತ್ರದಲ್ಲಿ ಅಪೂರ್ವ ನಟಿಸಿದ್ದರು. ಆ ನಂತರ ‘ಕಾಲಾ ಪತ್ಥರ್’ಗೆ ನಾಯಕಿಯಾಗಿ ಆಯ್ಕೆಯಾಗಿದ್ದರು. ಈಗ ‘ಪುರುಷೋತ್ತಮ’ ಚಿತ್ರದಲ್ಲೂ ಅಪೂರ್ವ ನಟಿಸಿದ್ದು, ತಮ್ಮ ಭಾಗದ ಚಿತ್ರೀಕರಣವನ್ನು ಬಹುತೇಕ ಮುಗಿಸಿದ್ದಾರೆ.

‘ಪುರುಷೋತ್ತಮ’ ಚಿತ್ರದಲ್ಲಿ ಇಬ್ಬರು ನಾಯಕಿಯರಂತೆ. ಒಂದು ಪಾತ್ರವನ್ನು ಅಪೂರ್ವ ಮಾಡಿದರೆ, ಇನ್ನೊಂದು ಪಾತ್ರಕ್ಕೆ ನಿವೇದಿತಾ ಎಂಬ ಹೊಸ ಹುಡುಗಿಯನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ಮೈಸೂರು ಸುತ್ತಮುತ್ತ 45 ದಿನಗಳ ಕಾಲ ಒಂದು ಹಂತದ ಚಿತ್ರೀಕರಣ ಮಾಡಲಾಗಿದ್ದು, ಶೇ. 95ರಷ್ಟು ಮುಗಿದಿದೆ ಎನ್ನುತ್ತಾರೆ ನಾಯಕ ಕಂ ನಿರ್ವಪಕ ರವಿ. ಇನ್ನೆರೆಡು ಹಾಡುಗಳ ಚಿತ್ರೀಕರಣ ಮುಗಿದರೆ, ಚಿತ್ರ ಸಂಪೂರ್ಣವಾದಂತೆ. ಈ ಹಿಂದೆ ‘ದಿಲ್ದಾರ’ ಮತ್ತು ‘ನಾನು ನಮ್ಮುಡ್ಗಿ ಖರ್ಚಿಗೊಂದು ಮಾಫಿಯಾ’ ಚಿತ್ರಗಳನ್ನು ನಿರ್ದೇಶಿಸಿದ್ದ ಅಮರ್​ನಾಥ್ ಈ ಚಿತ್ರವನ್ನು ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಎ.ವಿ. ಹರೀಶ್, ಪಿಂಕಿ, ಪ್ರಭು ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net