ಗೌರಿ ಹಬ್ಬ: ನಟಿ ಅಪೇಕ್ಷಾ ಪುರೋಹಿತ್ ಮತ್ತು ‘ಬಿಗ್ ಬಾಸ್’ ಖ್ಯಾತಿಯ ನಿವೇದಿತಾ ಗೌಡ ಮಾತು

Gowri
Published on

ಇಂದು ಗೌರಿ ಹಬ್ಬ. ಈ ವಿಶೇಷ ದಿನವನ್ನು ಅಷ್ಟೇ ಸಡಗರದಿಂದ ಆಚರಿಸಲು ಸ್ಯಾಂಡಲ್​ವುಡ್ ಮಂದಿ ಉತ್ಸಾಹದಲ್ಲಿದ್ದಾರೆ. ಆ ಸಂಭ್ರಮದ ಕ್ಷಣ ಹೇಗಿರಲಿದೆ ಎಂಬುದನ್ನು ನಟಿ ಅಪೇಕ್ಷಾ ಪುರೋಹಿತ್ ಮತ್ತು ‘ಬಿಗ್ ಬಾಸ್’ ಖ್ಯಾತಿಯ ನಿವೇದಿತಾ ಗೌಡ ವಿಜಯವಾಣಿ ಜತೆಗೆ ಹೇಳಿಕೊಂಡಿದ್ದಾರೆ.

ಒಟ್ಟಿಗೆ ಸೇರಿದ್ರೆ ಸಂಭ್ರಮ, ಸಡಗರ ಜೋರು ...

ನಾನು ಮೂಲತಃ ಉತ್ತರ ಕರ್ನಾಟಕದವಳು. ನಮ್ಮ ಕಡೆಗೆ ಗೌರಿ ಹಬ್ಬದ ಸಂಪ್ರದಾಯ ಮತ್ತದರ ಆಚರಣೆ ತುಂಬ ವಿರಳ. ಅದೇ ದಕ್ಷಿಣ ಕರ್ನಾಟಕದಲ್ಲಿ ಗೌರಿ ಹಬ್ಬದ ಸಂಭ್ರಮ ಜೋರಾಗಿರುತ್ತದೆ. ಪವನ್ ಅವರು ಕುಣಿಗಲ್​ನವರಾಗಿದ್ದರಿಂದ ಅಲ್ಲಿ ಸ್ವರ್ಣಗೌರಿಯ ಸಡಗರ ಇರುತ್ತದೆ. ಬಹುತೇಕ ಎಲ್ಲರೂ ಈ ಹಬ್ಬದ ಸಂಭ್ರಮದಲ್ಲಿ ಒಟ್ಟಿಗೆ ಸೇರಿ ತುಂಬ ಗ್ರಾ್ಯಂಡ್ ಆಗಿ ಆಚರಿಸುತ್ತೇವೆ. ಬೆಳಗ್ಗೆಯಿಂದಲೇ ಕೆಲಸಗಳು ಶುರುವಾಗುತ್ತವೆ. ಕಲಶಕ್ಕೆ ಲಕ್ಷ್ಮೀಯನ್ನು ಕೂರಿಸಿ, ಹೂಗಳಿಂದ ಅಲಂಕಾರ ಮಾಡಿ ಎಂದಿನಂತೆ ಬಗೆಬಗೆ ಅಡುಗೆಯನ್ನು ಮಾಡಲಾಗುತ್ತದೆ. ಕಡುಬು ಈ ಹಬ್ಬದ ವಿಶೇಷ ಆಗಿರುವುದರಿಂದ ಗೌರಿಗೆ ನೈವೇದ್ಯ ನಡೆಯುತ್ತದೆ. ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತು ಸಹಭೋಜನ ಮಾಡುವುದೇ ಒಂದು ಖುಷಿ. | ಅಪೇಕ್ಷಾ ಪುರೋಹಿತ್

ಸರಳವಾಗಿರಲಿದೆ ನಮ್ಮ ಮನೆಯಲ್ಲಿ ಈ ಸಲದ ಗೌರಿ ಹಬ್ಬ ...

ನಮ್ಮ ಮನೆಯಲ್ಲಿ ಗೌರಿ, ಗಣೇಶ ಹಬ್ಬದ ಆಚರಣೆ ಇಲ್ಲ. ಹಾಗಂತ ಹಬ್ಬ ಆಚರಿಸಲ್ಲ ಎಂದಲ್ಲ. ಸರಳವಾಗಿ ಪೂಜೆ ನಡೆಯುತ್ತದೆ. ಚಂದನ್ ಅವರ ಮನೆಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುತ್ತಾರೆ. ಗೌರಿ ಪೂಜೆಯ ಸಂಪ್ರದಾಯವೂ ಇದೆ. ಗೌರಿಯನ್ನು ಕೂರಿಸಿ, ವಿಶೇಷ ಪೂಜೆ ಮಾಡಲಾಗುತ್ತದೆ. ಈ ಸಲ ನಾವು ಬೆಂಗಳೂರಿನಲ್ಲಿರುವುದರಿಂದ ಇಲ್ಲಿಯೇ ಗೌರಿ ಗಣೇಶ ಹಬ್ಬದ ಆಚರಣೆ ಮಾಡುತ್ತಿದ್ದೇವೆ. ಅದ್ದೂರಿಯಾಗಿ ಅಲ್ಲದಿದ್ದರೂ, ಏನೆಲ್ಲ ಪದ್ಧತಿಗಳಿವೆಯೋ ಅವೆಲ್ಲವನ್ನು ಅನುಸರಿಸಿಕೊಂಡು ಪೂಜೆ ಮಾಡುತ್ತೇವೆ. | ನಿವೇದಿತಾ ಗೌಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net