ಅನುಷಾ ರೈ ಹೊಸ ಡ್ರಾಮಾ ; ಇದೇ 9ರಂದು ಸೆಟ್ಟೇರಲಿದೆ ಡಿ.ಜಿ. ಉಮೇಶ್​ ನಿರ್ದೇಶನದ ಚಿತ್ರ

2
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಈ ವರ್ಷ "ಧೈರ್ಯಂ ಸರ್ವತ್ರ ಸಾಧನಂ', "ಅಬ್ಬಬ್ಬ' ಚಿತ್ರಗಳಲ್ಲಿ ಮಿಂಚಿರುವ ನಟಿ ಅನುಷಾ ರೈ, ಇದೀಗ ಹೊಸ ಸಿನಿಮಾಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ವಿಜಯ್​ ರಾವೇಂದ್ರ, ಧರ್ಮ ಕೀರ್ತಿರಾಜ್​ ನಟಿಸಿದ್ದ "ಓ ಮನಸೇ' ಸೇರಿ "ನವರಂಗಿ', "ಹಳ್ಳಿ ಪಂಚಾಯ್ತಿ' ಸಿನಿಮಾಗಳಿಗೆ ಆ್ಯಕ್ಷನ್​&ಕಟ್​ ಹೇಳಿದ್ದ ಡಿ.ಜಿ. ಉಮೇಶ್​ ಗೌಡ ನಿರ್ದೇಶಿಸಲಿರುವ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಅನುಷಾ ಆಯ್ಕೆಯಾಗಿದ್ದಾರೆ.

ಭಿನ್ನ, ವಿಭಿನ್ನ ಜಾನರ್​ ಸಿನಿಮಾಗಳನ್ನು ಮಾಡಿರುವ ಉಮೇಶ್​ ಈ ಬಾರಿ ಲವ್​, ಆ್ಯಕ್ಷನ್​, ಸೆಂಟಿಮೆಂಟ್​ ಡ್ರಾಮಾ ಕಥಾಹಂದರದ ಚಿತ್ರಕ್ಕೆ ಕೈ ಹಾಕಿದ್ದಾರೆ. ಇನ್ನಷ್ಟೇ ಚಿತ್ರತಂಡ ಸಿನಿಮಾದ ಶೀರ್ಷಿಕೆ ಘೋಷಿಸಬೇಕಿದೆ. ಇದೇ ತಿಂಗಳ 9ರಂದು ಬೆಳಗಾವಿಯಲ್ಲಿ ಚಿತ್ರದ ಮುಹೂರ್ತ ನೆರವೇರಿಸಿ, ಬೆಳಗಾವಿ, ಬೆಂಗಳೂರು ಸುತ್ತಮುತ್ತ 50 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ಪ್ಲ್ಯಾನ್​​ ಮಾಡಿಕೊಂಡಿದ್ದಾರೆ ಉಮೇಶ್​. ಚಿತ್ರಕ್ಕೆ ಸಂತೋಷ್​ ನಾಯಕನಾಗಿದ್ದು, ಅವರಿಗೆ ಅನುಷಾ ರೈ ಜೋಡಿಯಾಗಲಿದ್ದಾರೆ.

ಉಳಿದಂತೆ ಶೋಭರಾಜ್​, ಸುಚೇಂದ್ರ ಪ್ರಸಾದ್​, ಸಾಧು ಕೋಕಿಲ, ಅಭಿಜಿತ್​, ಶಂಕರ್​ ಅಶ್ವತ್ಥ್​, ದಿವ್ಯಾ ಗೌಡ ಪ್ರಮುಖ ತಾರಾಗಣದಲ್ಲಿದ್ದಾರೆ. ನಿರ್ದೇಶಕ ಉಮೇಶ್​ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು, ಬಾಬು ರಾಜ್​ ಛಾಯಾಗ್ರಹಣ, ಮಳವಣ್ಣಿ ಸಾಯಿಕೃಷ್ಣ ಸಂಭಾಷಣೆ, ಸೂರಜ್​ ಸಂಗೀತ, ಡಾ. ವಿ. ನಾಗೇಂದ್ರ ಪ್ರಸಾದ್​ ಸಾಹಿತ್ಯ ಮತ್ತು ಶ್ರೀನಿವಾಸ್​ ಬಾಬು ಸಂಕಲನದಲ್ಲಿ ಸಿನಿಮಾ ಮೂಡಿಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net