

ಬೆಂಗಳೂರು: ಲಾಕ್ಡೌನ್ ನಂತರ ಅನಿತಾ ಭಟ್ ಸದ್ದಿಲ್ಲದೆ ‘ಬಳೆಪೇಟೆ’ ಎಂಬ ಹೊಸ ಸಿನಿಮಾ ಮಾಡಿ ಮುಗಿಸಿದ್ದಾರೆ. ಈ ಚಿತ್ರದಲ್ಲಿ ಅವರದ್ದು ವಿಶೇಷ ಪಾತ್ರವಂತೆ. ವಿಶೇಷವೆಂದರೆ, ಆ ಪಾತ್ರ ಸೃಷ್ಟಿಯಾಗಿದ್ದು, ಸಿನಿಮಾದ ಸೆಟ್ನಲ್ಲಿಯೇ! ಅಂದರೆ, ಪಾತ್ರ ಎಂಥದ್ದು ಎಂಬುದು ಗೊತ್ತಾಗುವ ಮುನ್ನವೇ ‘ಬಳೆಪೇಟೆ’ಯ ಭಾಗವಾಗಿದ್ದರು ಅನಿತಾ. ರಿಷಿಕೇಶ್ ನಿರ್ದೇಶನದಲ್ಲಿ ಸಿದ್ಧವಾಗಿರುವ ‘ಬಳೆಪೇಟೆ’, ರೌಡಿಸಂ ಹಿನ್ನೆಲೆಯ ಸಿನಿಮಾ. ಈ ಚಿತ್ರದಲ್ಲಿ ಪ್ರಮೋದ್ ಬೋಪಣ್ಣಗೆ ಅನಿತಾ ಜೋಡಿಯಾಗಿದ್ದಾರೆ. ವಿಚಿತ್ರವೆಂದರೆ, ಈ ಚಿತ್ರದಲ್ಲಿ ಅನಿತಾ ಅವರ ಪಾತ್ರವೇ ಇರಲಿಲ್ಲವಂತೆ. ಒಮ್ಮೆ ಸೆಟ್ಗೆ ಹೋಗಿದ್ದ ಸಂದರ್ಭದಲ್ಲಿ, ಅನಿತಾ ಅವರ ಪಾತ್ರವನ್ನು ಸೃಷ್ಟಿಸಲಾಯಿತಂತೆ. ಹೀಗೆ ಅನಿರೀಕ್ಷಿತವಾಗಿ ಸಿಕ್ಕ ಪಾತ್ರದಿಂದ ಬಹಳ ಖುಷಿಯಾದ ಅನಿತಾ, ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ‘ರೌಡಿಸಂ ಕಥೆಯ ಹಿನ್ನೆಲೆಯಲ್ಲಿ ನನ್ನ ಪಾತ್ರ ಸಾಗುತ್ತದೆ. ನಾನಿಲ್ಲಿ ಗ್ಲಾಮರ್ ಇಲ್ಲದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಅದ್ಯಾವ ಮಟ್ಟಿಗೆ ಡಿಗ್ಲಾಮ್ ಅಂದರೆ, ಮನೆಯಿಂದ ನಾನು ಹೇಗೆ ಸೆಟ್ಗೆ ಹೋಗಿರುತ್ತೇನೋ ಅದೇ ಅವತಾರದಲ್ಲಿ ಕ್ಯಾಮರಾ ಎದುರಿಸುತ್ತಿದ್ದೆ. ಮುಖಕ್ಕೆ ಪೌಡರ್ ಇಲ್ಲ, ಲಿಪ್ಸ್ಟಿಕ್ ಇಲ್ಲ, ಕೆದರಿದ ಕೂದಲು ... ನನ್ನ ಕರಿಯರ್ನಲ್ಲಿ ಇದೊಂದು ಹೊಸ ಅನುಭವ’ ಎಂಬುದು ಅವರ ಮಾತು.
ಅನಿತಾ ಅಂದರೆ ಅಲ್ಲಿ ಬೋಲ್ಡ್ ದೃಶ್ಯಗಳಿರಬೇಕು ಎಂಬ ಸಾಮಾನ್ಯ ಅಭಿಪ್ರಾಯವಿದೆ. ಆ ಬಗ್ಗೆಯೂ ಅಷ್ಟೇ ಬೋಲ್ಡ್ ಆಗಿಯೇ ಉತ್ತರಿಸುತ್ತಾರವರು. ‘ನೀಡಿದ ಪಾತ್ರಕ್ಕೆ ನ್ಯಾಯ ಸಲ್ಲಿಸುವುದು ನನ್ನ ವೃತ್ತಿಧರ್ಮ. ಹಾಗಂತ ಎಲ್ಲ ಸಿನಿಮಾಗಳಲ್ಲಿಯೂ ಅದನ್ನೇ ನಿರೀಕ್ಷಿಸುವುದು ತಪು್ಪ. ನಾನು ಮಾಡಿರುವ ಸಿನಿಮಾಗಳಲ್ಲಿ ಪಾತ್ರ ಬೇಡಿದ್ದನ್ನು ನಾನು ನೀಡಿದ್ದೇನಷ್ಟೇ. ಹಾಗಂತ ಒಂದೇ ಥರದ ಪಾತ್ರಗಳಿಗೆ ಸೀಮಿತ ಮಾಡುವುದು ಬೇಡ. ಚಿತ್ರದಿಂದ ಚಿತ್ರಕ್ಕೆ ಬೇರೆ ಬೇರೆ ಪಾತ್ರಗಳನ್ನು ಮಾಡಿದ್ದೇನೆ’ ಎಂಬುದು ಅನಿತಾ ಮಾತು. ಹೊಸ ವರ್ಷಕ್ಕೆ ತೆಲುಗಿನಲ್ಲಿ ‘ಕೃಷ್ಣ ಲಂಕೆ’ ಎಂಬ ಚಿತ್ರವನ್ನು ಅವರು ಒಪ್ಪಿಕೊಂಡಿದ್ದು, ಮೊದಲ ಬಾರಿ ಟಾಲಿವುಡ್ ಪ್ರವೇಶ ಪಡೆದಿದ್ದಾರೆ. ಶೀಘ್ರದಲ್ಲಿ ಶೂಟಿಂಗ್ ಸಹ ಶುರುವಾಗಲಿದ್ದು, ಕಾರ್ತಿಕೇಯನ್ ಈ ಚಿತ್ರದ ನಿರ್ದೇಶಕರು. ಈ ಸಿನಿಮಾದ ಜತೆಗೆ ಅನಿತಾ ನಟಿಸಿರುವ ‘ಬೆಂಗಳೂರು 69’ ಬಿಡುಗಡೆಗೆ ಸಿದ್ಧವಾಗಿದೆ. ‘ಕಲಿವೀರ’, ‘ಕನ್ಹೇರಿ’, ‘ಪ್ರಭುತ್ವ’, ‘ಡಿಎನ್ಎ’ ಚಿತ್ರಗಳೂ ಇದೇ ವರ್ಷ ತೆರೆಗೆ ಬರಲಿವೆ.