

ಬೆಂಗಳೂರು: ಕನ್ನಡದ ‘ಸಂತು ಸ್ಟ್ರೈಟ್ ಫಾರ್ವರ್ಡ್’, ‘ಶ್ರೀಕಂಠ’ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಟಿ ಐಶ್ವರ್ಯಾ ಪಿಸ್ಸೆ ಇದೀಗ ಹೊಸ ಹೆಜ್ಜೆ ಹಾಕುತ್ತಿದ್ದಾರೆ. ಕನ್ನಡದ ಸಿನಿಮಾಗಳ ಜತೆಗೆ ಕಿರುತೆರೆಯಲ್ಲೂ ಅವರು ಗಮನ ಸೆಳೆಯುತ್ತಿದ್ದಾರೆ. ಸದ್ಯ ಕನ್ನಡ, ತೆಲುಗು ಧಾರಾವಾಹಿಗಳಲ್ಲಿ ಐಶ್ವರ್ಯಾ ಬಿಜಿಯಾಗಿದ್ದಾರೆ.
ತಮ್ಮ ಜರ್ನಿಯ ಕುರಿತು, ‘2014ರಲ್ಲಿ ‘ಅನುರೂಪ’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಬಂದೆ. ನಾನು ನಟಿಯಾಗಬೇಕು ಎನ್ನುವುದು ಅಮ್ಮನ ಕನಸು. ಅಮ್ಮ ಕೂಡ ಈ ಹಿಂದೆ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅನಿವಾರ್ಯ ಕಾರಣಗಳಿಂದ ಅವರು ಚಿತ್ರರಂಗದಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಇದೀಗ ನನ್ನ ಸಿನಿ ಜರ್ನಿ ಮೂಲಕ ಅವರು ತಮ್ಮ ಖುಷಿಯನ್ನು ಕಾಣುತ್ತಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಕನ್ನಡ, ತಮಿಳು, ತೆಲುಗಿನಲ್ಲಿ ಎಂಟು ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ಇಲ್ಲಿನ ಯಶಸ್ಸು ನನ್ನನ್ನು ಚಿತ್ರರಂಗಕ್ಕೂ ಪರಿಚಯಿಸಿದೆ. ಸದ್ಯ ನಾನು ಸಿನಿಮಾಗಳ ಜತೆಗೆ ಏಕಕಾಲದಲ್ಲಿಯೇ ಕನ್ನಡ, ತೆಲುಗು ಧಾರಾವಾಹಿಗಳಲ್ಲೂ ಕಾಣಿಸಿಕೊಳ್ಳುತ್ತಿದ್ದೇನೆ. ತೆಲುಗಿನ ‘ಅಗ್ನಿಸಾಕ್ಷಿ-2’ ವೆಬ್‌ಸರಣಿ ಬಳಿಕ ‘ಮಾಂಗಲ್ಯ’ ಧಾರಾವಾಹಿ ಮೂಲಕ ಕನ್ನಡಕ್ಕೆ ಮರಳಿದ್ದೇನೆ. ಇದೊಂದು ಮಹತ್ವದ ಪ್ರಾಜೆಕ್ಟ್ ಆಗಿದೆ. ನನ್ನ ಜರ್ನಿಯಲ್ಲಿ ರಮೇಶ್ ಅರವಿಂದ್ ಜತೆ ಕೆಲಸ ಮಾಡಿರುವುದು ತುಂಬಾ ಮಹತ್ವದ ಸಂಗತಿ. ಅವರಿಂದ ಆ್ಯಕ್ಟಿಂಗ್ ಕುರಿತಂತೆ ಸಾಕಷ್ಟು ಕಲಿತಿದ್ದೇನೆ. ‘ಅಗ್ನಿಸಾಕ್ಷಿ-2’ ವೆಬ್‌ಸರಣಿ ಬಳಿಕ ಸಿನಿಮಾ, ಧಾರಾವಾಹಿ, ವೆಬ್ ಸರಣಿಗಳಿಗೆ ಅವಕಾಶಗಳು ಬರುತ್ತಿವೆ. ಆದರೆ, ಸಮಾಧಾನದಿಂದಲೇ ನಾನು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಕನ್ನಡದಲ್ಲಿ ಎರಡು-ಮೂರು ಕಥೆ ಕೇಳಿದ್ದೇನೆ. ಆ್ಯಕ್ಟಿಂಗ್ ಹೊರತುಪಡಿಸಿ ಐತಿಹಾಸಿಕ ಸ್ಥಳಗಳಿಗೆ ಪ್ರವಾಸ ತೆರಳುವುದು ಇಷ್ಟದ ಹವ್ಯಾಸ’ ಎಂದು ಮಾಹಿತಿ ನೀಡುತ್ತಾರೆ.