

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕನ್ನಡದ ನಟಿಯರಿಗೆ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಅವಕಾಶಗಳು ಸಿಗುತ್ತಿಲ್ಲವೇ? ಪ್ರತಿಭೆಯಲ್ಲಿ ಯಾರಿಗೂ ಕಡಿಮೆ ಇಲ್ಲದಿದ್ದರೂ ಕನ್ನಡದ ಹುಡುಗಿಯರಿಗೇ ಆರ್ಸ್ ಕಡಿಮೆ? ಹೀಗೊಂದು ಪ್ರಶ್ನೆ ಸ್ಯಾಂಡಲ್ವುಡ್ನಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಅದಕ್ಕೆ ಕಾರಣ "ಮಿ. ಆ್ಯಂಡ್ ಮಿಸಸ್ ರಾಮಾಚಾರಿ', "ಐರಾವನ್', "ಧೀರಸಾಮ್ರಾಟ್' ಖ್ಯಾತಿಯ ನಟಿ ಅದ್ವಿತಿ ಶೆಟ್ಟಿ. ಇತ್ತೀಚೆಗಷ್ಟೆ ಜಾಲತಾಣದಲ್ಲಿ ಅವರು, "ಕನ್ನಡ ಚಿತ್ರರಂಗದಲ್ಲಿ ಪ್ರತಿಭೆಗಳಿಗೆ ಕೊರತೆ ಇದೆಯೇ? ಇದ್ದವರಿಗೆ ಅವಕಾಶ ಯಾಕೆ ಕೊಡುತ್ತಿಲ್ಲ? ಬೇರೆ ಭಾಷೆಯ ಕಲಾವಿದರನ್ನು ಯಾಕೆ ಕರೆದುಕೊಂಡು ಬರುತ್ತಾರೆ? ಅದು ತಪ್ಪಲ್ಲ, ಆದರೆ ಇಲ್ಲಿನವರಿಗೆ ಮೊದಲ ಆದ್ಯತೆ ಕೊಡಬೇಕಲ್ಲವೇ? ನಮ್ಮ ಚಿತ್ರರಂಗದಲ್ಲಿ ಹೆಣ್ಣುಮಕ್ಕಳು ಯಾವುದರಲ್ಲಿ ಕಡಿಮೆ ಇದ್ದಾರೆ ಹೇಳಿ? ನಟಿಸುತ್ತೇವೆ, ಸ್ವತಃ ನಾವೇ ಡಬ್ಬಿಂಗ್ ಮಾಡುತ್ತೇವೆ, ಪ್ರಚಾರಕ್ಕೆ ಹೋಗುತ್ತೇವೆ. ಇನ್ನೇನು ಬೇಕು? ನನಗೆ ಅರ್ಥವಾಗುತ್ತಿಲ್ಲ' ಎಂದು ಬರೆದುಕೊಂಡಿದ್ದರು.
ಬೇಸರಕ್ಕೆ ಇದೇ ಕಾರಣ…
ಈ ಬಗ್ಗೆ ವಿಜಯವಾಣಿ ಜತೆ ಮಾತನಾಡುವ ಅದ್ವಿತಿ ಶೆಟ್ಟಿ, "ಕನ್ನಡ ಚಿತ್ರರಂಗದಲ್ಲಿ ಹೀರೋಯಿನ್ಗಳಿಲ್ಲ ಅಂತ ಹೇಳುತ್ತಾರೆ. ಆದರೆ, ತುಂಬ ಜನ ಇದ್ದಾರೆ. ಅವರಿಗೆ ಅವಕಾಶ ಸಿಗುತ್ತಿಲ್ಲ. ಬೇರೆ ಭಾಷೆಗಳಿಂದ ಇಲ್ಲಿಗೆ ಕರೆದುಕೊಂಡು ಬರಲು ಕಾರಣವೇನು? ಇಲ್ಲಿನವರಿಗೇನೂ ಅಲ್ಲಿ ಕರೆದು ಅವಕಾಶ ನೀಡುತ್ತಿಲ್ಲವಲ್ಲ. ಚಿತ್ರಗಳಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕರೂ, ಚೆನ್ನಾಗಿ ನಟಿಸುತ್ತಾರೆ ಅಂತ ಅನ್ನಿಸಿಕೊಂಡರೂ, ಅವಕಾಶ ನೀಡುತ್ತಿಲ್ಲ. ಹಲವರ ಅಭಿಪ್ರಾಯಕ್ಕೆ ನಾನು ಧ್ವನಿಯಾಗಿದ್ದೇನಷ್ಟೇ. ಇಲ್ಲಿ ಅವಕಾಶಗಳಿಲ್ಲದೇ ಕನ್ನಡದ ಹುಡುಗಿಯರೂ ಬೇರೆ ಭಾಷೆಗಳಿಗೆ ಹೋಗುವಂತಾಗಿದೆ. ನಿರ್ದೇಶಕರು, ಚಿತ್ರತಂಡಗಳು ಈ ಬಗ್ಗೆ ಯೋಚಿಸಬೇಕಿದೆ. ಕನ್ನಡದ ನಟ, ನಟಿಯರೂ ಯಾರಿಗೂ ಕಡಿಮೆಯಿಲ್ಲ ಎಂಬ ಅರಿವು ಮೂಡಬೇಕು. ನನಗಾದ ಅನುಭವಗಳಿಂದ ಆ ಯೋಚನೆ ಬಂತು. ಅದನ್ನೇ ಬರೆದುಕೊಂಡೆ' ಎಂದು ಬೇಸರದಿಂದ ಹೇಳಿಕೊಳ್ಳುತ್ತಾರೆ.
ಪರಿಹಾರವೇನು?
ಪರಭಾಷಾ ನಾಯಕಿಯರನ್ನು ಕನ್ನಡಕ್ಕೆ ಕರೆತರುವ ಬಗ್ಗೆ ಅದ್ವಿತಿ, "ಹೆಸರು ಮಾಡಿರುವ ಪರಭಾಷಾ ನಟಿಯನ್ನು ಕರೆದುಕೊಂಡು ಬಂದರೆ, ಬಿಜಿನೆಸ್ಗೆ ಉತ್ತಮ ಅನ್ನುತ್ತಾರೆ. ಅದು ಹೇಗೆ ಎಂಬುದು ತಿಳಿಯುತ್ತಿಲ್ಲ. ಇದಕ್ಕೆ ಪರಿಹಾರವೇನು? ಎಂಬುದು ನನಗೂ ಗೊತ್ತಿಲ್ಲ. ಏನು ಮಿಸ್ ಆಗುತ್ತಿದೆ? ಯಾರ ಬಳಿ ಕೇಳಬೇಕು? ಅಂತ ತಿಳಿಯುತ್ತಿಲ್ಲ. ತುಂಬ ಜನ ನನ್ನ ಮಾತನ್ನು ಒಪ್ಪಿದ್ದಾರೆ. ನೀವೂ ಬೇರೆ ಭಾಷೆಗೆ ಹೋಗಿ ಅಂತ ಹೇಳುತ್ತಿದ್ದಾರೆ. ಸಿನಿಮಾನೇ ಜೀವನ ಆಗಿರುವಾಗ ಬೇರೆಡೆ ಅವಕಾಶ ಸಿಕ್ಕಾಗ ಹೋಗುತ್ತಾರೆ. ತಮಿಳು, ತೆಲುಗಿನಿಂದ ನನಗೂ ಅವಕಾಶಗಳು ಬಂದಿವೆ. ಆದರೆ, ನನಗೆ ಕನ್ನಡವೇ ಮೊದಲು. ಇಲ್ಲಿ ಶೂಟಿಂಗ್ನಲ್ಲಿ ಬಿಜಿಯಿದ್ದ ಕಾರಣ, ಚಿತ್ರಕ್ಕೆ ತೊಂದರೆಯಾಗಬಾರದು ಅಂತ ಹೋಗಲಿಲ್ಲ' ಎನ್ನುತ್ತಾರೆ ಅದ್ವಿತಿ.
ಕನ್ನಡದ ಪ್ರತಿಭೆಗಳಿಗೆ ಅವಕಾಶ ಸಿಗಬೇಕು..
ಬ್ರಾ$್ಯಂಡ್ ಪ್ರಮೋಷನ್ ಜತೆ ಹೊಸ ಕಥೆಗಳನ್ನು ಕೇಳುತ್ತಿರುವ ಅದ್ವಿತಿ, "ನಾನು ಹೀಗೆ ಬರೆದುಕೊಂಡರಡ ಅವಕಾಶ ಸಿಗುತ್ತೆ ಅಂತಲ್ಲ. ನನ್ನ ಮಾತಿನಿಂದ ಕನ್ನಡದ ಹುಡುಗಿಯರಿಗೆ ಅವಕಾಶ ದೊರೆತರೂ ಖುಷಿಯೇ. ಕನ್ನಡ ಚಿತ್ರರಂಗದ ಪರವಾಗಿ ಧ್ವನಿ ಎತ್ತಿದ್ದೇನೆ' ಎಂಬುದು ಅದ್ವಿತಿ ಅಭಿಪ್ರಾಯ. ಸದ್ಯ ಅವರು ಒಳ್ಳೆಯ ಕಥೆಗಳು, ಉತ್ತಮ ಪಾತ್ರಗಳ ನಿರೀೆಯಲ್ಲಿದ್ದಾರೆ.