

ಬೆಂಗಳೂರು: ‘ಸಲಗ’ ನಂತರ ‘ದುನಿಯಾ’ ವಿಜಯ್ ತೆಲುಗಿಗೆ ಹೋಗುತ್ತಾರೆ, ನಂದಮೂರಿ ಬಾಲಕೃಷ್ಣ ಅಭಿನಯದ ಹೊಸ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಓಡಾಡುತ್ತಲೇ ಇತ್ತು. ಆದರೆ, ಈ ವಿಷಯದ ಬಗ್ಗೆ ವಿಜಯ್ ಎಲ್ಲೂ ಮಾತಾಡಿರಲಿಲ್ಲ. ‘ಸದ್ಯದಲ್ಲೇ ಹೊಸ ಸುದ್ದಿ ಕೊಡುವೆ ...’ ಎಂದಷ್ಟೇ ಹೇಳಿದ್ದರು. ಈಗ ವಿಜಯ್, ತೆಲುಗು ಚಿತ್ರದಲ್ಲಿ ನಟಿಸುತ್ತಿರುವುದು ನಿಜವಾಗಿದೆ. ಚಿತ್ರ ನಿರ್ವಿುಸುತ್ತಿರುವ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯೇ, ವಿಜಯ್ ಅವರನ್ನು ಸೋಷಿಯಲ್ ಮೀಡಿಯಾ ಮೂಲಕ ಚಿತ್ರತಂಡಕ್ಕೆ ಬರಮಾಡಿಕೊಂಡಿದೆ. ವಿಜಯ್ ಈ ಚಿತ್ರದಲ್ಲಿ ವಿಲನ್ ಪಾತ್ರಗಳಿಗೆ ಹೊಸ ಭಾಷ್ಯ ಬರೆಯಲಿದ್ದಾರೆ ಎಂದು ಬರೆದುಕೊಂಡಿದೆ.
ವಿಜಯ್ ಈ ಹಿಂದೆಯೇ ತೆಲುಗು ಚಿತ್ರದಲ್ಲಿ ನಟಿಸಬೇಕಿತ್ತಂತೆ. ‘ಕೆಲವರು ಗೊತ್ತಿಲ್ಲದೆಯೇ ಕತ್ತು ಹಿಸುಕಿದ್ದರು’ ಎಂದು ಹೇಳಿಕೊಂಡಿದ್ದಾರೆ. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿರುವ ಅವರು, ‘ಈ ಹಿಂದೆ ಧನುಶ್ ಮತ್ತು ಜೂ. ಎನ್ಟಿಆರ್ ಅಭಿನಯದ ಚಿತ್ರಗಳ ತಂಡದವರು ನನ್ನ ಬಗ್ಗೆ ಕೆಲವರ ಹತ್ತಿರ ವಿಚಾರಿಸಿದ್ದರಂತೆ. ನನ್ನನ್ನು ಸಂರ್ಪಸುವ ಪ್ರಯತ್ನ ಮಾಡಿದ್ದರಂತೆ. ಆದರೆ, ಕೆಲವರು ನನ್ನ ಬಗ್ಗೆ ಏನೇನೋ ಹೇಳಿ, ನನ್ನ ಹತ್ತಿರ ಬರುವುದನ್ನೇ ತಡೆದಿದ್ದಾರೆ. ಹಾಗಾಗಿ, ಅವಕಾಶಗಳು ತಪ್ಪಿದ್ದವು. ಈ ವಿಷಯ ನನಗೆ ಆ ನಂತರ ಗೊತ್ತಾಯಿತು. ಈ ಬಾರಿ ಚಿತ್ರತಂಡದವರು ಸೀದಾ ‘ಸಲಗ’ ನಿರ್ವಪಕ ಕೆ.ಪಿ. ಶ್ರೀಕಾಂತ್ ಅವರನ್ನು ಸಂಪರ್ಕ ಮಾಡಿದ್ದಾರೆ. ಅವರು ನನಗೆ ತಿಳಿಸಿದರು. ಕಥೆ ಮತ್ತು ಪಾತ್ರ ಇಷ್ಟವಾಯಿತು, ಒಪ್ಪಿಕೊಂಡೆ’ ಎನ್ನುತ್ತಾರೆ ವಿಜಯ್. ‘ಸಲಗ’ ನಂತರ ಕನ್ನಡದಲ್ಲಿ ಮುಂದೇನು ಎಂಬ ಪ್ರಶ್ನೆಗೆ, ‘ಕಥೆಗಳನ್ನು ಕೇಳುತ್ತಿದ್ದೇನೆ. ಸದ್ಯ ಯಾವುದನ್ನು ನಿರ್ಧರಿಸಿಲ್ಲ. ತೆಲುಗು ಸಿನಿಮಾ ಮುಗಿಸಿ ಬಂದ ನಂತರ ಮುಂದಿನ ತೀರ್ವನವನ್ನು ತೆಗೆದುಕೊಳ್ಳುತ್ತೇನೆ’ ಎನ್ನುತ್ತಾರೆ ವಿಜಯ್.
ಎಲ್ಲ ತರಹದ ಪಾತ್ರ ಮಾಡುವಾಸೆ...: ಯಾರು ಎಷ್ಟೇ ತಡೆದರೂ, ಒಬ್ಬ ದೊಡ್ಡ ಹೀರೋ ಜತೆಗೆ ನಟಿಸುವ ಅವಕಾಶ ಸಿಕ್ಕಿದೆ ಎನ್ನುವ ವಿಜಯ್, ‘ಸ್ವಲ್ಪ ಕಾದರೂ ಒಳ್ಳೆಯ ಅವಕಾಶವೇ ಸಿಕ್ಕಿದೆ. ಜನವರಿ ಮಧ್ಯ ಭಾಗದಿಂದ ಚಿತ್ರೀಕರಣ ಪ್ರಾರಂಭ. ತುಂಬಾ ದೊಡ್ಡ ಪಾತ್ರ. ಎರಡು ತಿಂಗಳುಗಳ ಕಾಲ ಶೂಟಿಂಗ್ ನಡೆಯಲಿದೆ. ಪಾತ್ರಕ್ಕೋಸ್ಕರವೇ ಗಡ್ಡ ಬಿಟ್ಟಿದ್ದೇನೆ. ಚಿತ್ರದಲ್ಲಿ ನನ್ನದು ನೆಗೆಟಿವ್ ಪಾತ್ರ. ಒಬ್ಬ ಕಲಾವಿದನಾಗಿ ಎಲ್ಲ ತರಹದ ಪಾತ್ರಗಳನ್ನು ಮಾಡುವಾಸೆ. ಅದರಲ್ಲೂ ಬಾಲಯ್ಯ ತರಹದ ದೊಡ್ಡ ನಟರ ಎದುರು ಅವಕಾಶ ಸಿಕ್ಕಿರುವುದು ಖುಷಿಯ ವಿಚಾರ’ ಎನ್ನುತ್ತಾರೆ ವಿಜಯ್.