ಕೆಲ ನಟರು ನನ್ನೊಂದಿಗೆ ನಟಿಸಲು ಭಯಪಡುತ್ತಾರೆ! ಬಹುಭಾಷಾ ನಟ ಪ್ರಕಾಶ್​ ರಾಜ್ ಕೊಟ್ಟ ಕಾರಣವಿದು​

Prakash Rai - Final
Published on

ಹೈದರಾಬಾದ್​: ಬಹುಭಾಷಾ ನಟ ಪ್ರಕಾಶ್​ ರಾಜ್​ ಕೇವಲ ನಟನೆಯಿಂದ ಮಾತ್ರವಲ್ಲದೇ ಇತ್ತೀಚೆಗೆ ವಿವಾದಗಳಿಂದಲೇ ಸುದ್ದಿಯಾಗುತ್ತಿರುತ್ತಾರೆ. ಸಿನಿಮಾ ಮಾತ್ರವಲ್ಲದೆ, ರಾಜಕೀಯದಲ್ಲೂ ಸಕ್ರೀಯರಾಗಿರುವ ಪ್ರಕಾಶ್​ ರಾಜ್​, ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರನ್ನು ಆಗಾಗ ಟೀಕಿಸುವ ಮೂಲಕ ಭಾರಿ ಚರ್ಚೆಗೀಡಾಗುತ್ತಿರುತ್ತಾರೆ.

ತಾಜಾ ವಿಚಾರಕ್ಕೆ ಬರುವುದಾದರೆ, ಸಹ ಕಲಾವಿದರು ತನ್ನೊಂದಿಗೆ ನಟಿಸಲು ಭಯಪಡುತ್ತಾರೆ ಎಂದು ನಟ ಪ್ರಕಾಶ್​ ರಾಜ್ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. ತನ್ನ ರಾಜಕೀಯ ದೃಷ್ಟಿಕೋನವೇ ಇದಕ್ಕೆ ಕಾರಣ. ಆದರೆ ನಾನು ಯಾವುದಕ್ಕೂ ಚಿಂತಿಸುವುದಿಲ್ಲ ಎಂದಿದ್ದಾರೆ.

ನನ್ನ ಜೊತೆ ನಟಿಸಿದರೆ ಅಪಾಯದಲ್ಲಿ ಸಿಲುಕಬೇಕಾಗುತ್ತದೆ ಎಂಬುದು ಕೆಲ ಕಲಾವಿದರ ಆತಂಕವಾಗಿದೆ. ನಾನು ಅವರ ಅಸೌಖ್ಯವನ್ನು ಅರ್ಥ ಮಾಡಿಕೊಳ್ಳಬಲ್ಲೆ ಮತ್ತು ನನ್ನ ಜೊತೆ ನಟಿಸುವುದರಿಂದ ಅಂತರ ಕಾಯ್ದುಕೊಂಡರೂ ನಾನು ಪಶ್ಚಾತಾಪ ಪಡುವುದಿಲ್ಲ ಎಂದು ಪ್ರಕಾಶ್​ ರಾಜ್​ ತಿಳಿಸಿದ್ದಾರೆ.

ತಮ್ಮನ್ನು ತಾವು ಸಮರ್ಥಿಸಿಕೊಂಡ ಪ್ರಕಾಶ್ ರಾಜ್, ರಾಜಕೀಯದ ಬಗ್ಗೆ ಮಾತನಾಡುವುದನ್ನು ಮುಂದುವರಿಸುತ್ತೇನೆ. ನಾನು ನಂಬಿರುವ ಸಿದ್ಧಾಂತಗಳಿಗೆ ನಾನು ಹಿಂದೆ ಸರಿದರೆ, ಅದು ಇತರರಿಗೆ ಲಾಭವಾಗುತ್ತದೆ. ಹೀಗಾಗಿ ಅದು ಸಂಭವಿಸುವುದನ್ನು ನಾನು ಬಯಸುವುದಿಲ್ಲ. ಇತರೆ ನಟರ ವಿರುದ್ಧ ನಾನು ಯಾವುದೇ ದ್ವೇಷವನ್ನು ಹೊಂದಿಲ್ಲ. ನನ್ನ ಜೊತೆ ನಟಿಸುವುದು ಮತ್ತು ನಟಿಸದೇ ಇರುವುದು ಅವರ ಸಂಪೂರ್ಣ ಆಯ್ಕೆಯಾಗಿದೆ. ಆದರೆ ನನ್ನ ಸಿದ್ಧಾಂತಗಳನ್ನು ಬಿಟ್ಟುಕೊಡುವುದಿಲ್ಲ. ನಾನು ಯಾವುದೇ ಪರಿಣಾಮಗಳಿಗೆ ಸಿದ್ಧನಿದ್ದೇನೆ ಮತ್ತು ನನ್ನ ಅಭಿಪ್ರಾಯವನ್ನು ಹೆಚ್ಚು ಮುಕ್ತವಾಗಿ ಹೇಳಬಲ್ಲೆ. ಕೆಲವು ನಟರು ಇಂತಹ ಕೆಲಸಗಳನ್ನು ಮಾಡಲು ಧೈರ್ಯ ಮಾಡುವುದಿಲ್ಲ. ಆದರೆ ನಾನು ಅವರನ್ನು ದೂಷಿಸುವುದಿಲ್ಲ ಎಂದು ಪ್ರಕಾಶ್ ರಾಜ್ ಪ್ರತಿಕ್ರಿಯಿಸಿದ್ದಾರೆ.

ಚಿತ್ರರಂಗದಲ್ಲಾಗಲಿ, ರಾಜಕೀಯದಲ್ಲಾಗಲಿ ನಿರ್ಭಯವಾಗಿರುವುದು ಪ್ರಕಾಶ್ ರಾಜ್ ಅವರ ಗಟ್ಟಿ ನಿಲುವು ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net