ಯಶ್ ಹೊಸ ಚಿತ್ರದ ಫೋಟೋಶೂಟ್?

pic 05
Published on

ಬೆಂಗಳೂರು: ಡಬ್ಬೂ ರತ್ನಾನಿ ಕಂಡರೆ ಬಾಲಿವುಡ್​ನವರಿಗೆ ಪ್ರೀತಿ ಜಾಸ್ತಿ. ಏಕೆಂದರೆ, ಡಬ್ಬೂ ಕಳೆದ ಹಲವು ವರ್ಷಗಳಿಂದ ಬಾಲಿವುಡ್​ನ ಹೆಸರಾಂತ ಫೋಟೋಗ್ರಾಫರ್ ಆಗಿ ಗುರುತಿಸಿಕೊಂಡಿದ್ದಾರೆ. ಅವರಿಂದ ಫೋಟೋ ಕ್ಲಿಕ್ಕಿಸಿಕೊಳ್ಳಬೇಕು ಎಂದು ಹಲವರು ಆಸೆಪಡುತ್ತಾರೆ. ಹೀಗಿರುವಾಗಲೇ ಡಬ್ಬೂ ರತ್ನಾನಿ, ಚಂದನವನದತ್ತ ಕಣ್ಣು ಹಾಯಿಸಿದ್ದು, ಸದ್ದಿಲ್ಲದೆ ಯಶ್ ಅವರ ಫೋಟೋಶೂಟ್ ಮಾಡಿದ್ದಾರೆ.

ಡಬ್ಬೂ ಕ್ಯಾಮರಾದಲ್ಲಿ ರಾಕಿಂಗ್ ಸ್ಟಾರ್ ಸೆರೆ

ಡಬ್ಬೂ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಯಶ್ ಜತೆಗಿನ ಮೂರು ಫೋಟೋಗಳನ್ನು ಹಂಚಿಕೊಂಡಿದ್ದು, ಈ ಫೋಟೋಗಳಿಗೆ ಅವರು ‘ಐ ಹ್ಯಾವ್ ಗಾಟ್ ಯುವರ್ ಬ್ಯಾಕ್’ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಮಿಕ್ಕಂತೆ ಈ ಫೋಟೋಶೂಟ್ ಮಾಡಿದ್ದೇಕೆ? ಆ ಶೀರ್ಷಿಕೆಯ ಅರ್ಥ ಏನು ಎಂಬ ವಿಷಯವನ್ನು ಮುಚ್ಚಿಟ್ಟಿದ್ದಾರೆ. ಇಷ್ಟಕ್ಕೂ ಡಬ್ಬೂ ಈ ಫೋಟೋಗಳನ್ನು ತೆಗೆದಿದ್ದು ಯಾಕೆ? ಈ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಡಬ್ಬೂ ಪ್ರತೀ ವರ್ಷ ಒಂದು ಕ್ಯಾಲೆಂಡರ್ ಬಿಡುಗಡೆ ಮಾಡುತ್ತಾರೆ. ಈ ಕ್ಯಾಲೆಂಡರ್​ನಲ್ಲಿ ನಟ-ನಟಿಯರನ್ನು ವಿಭಿನ್ನವಾಗಿ ತೋರಿಸುತ್ತಾರೆ.

ಬಾಲಿವುಡ್ ಅಲ್ಲದೆ ಕೆಲವು ದಕ್ಷಿಣದ ನಟ-ನಟಿಯರು ಸಹ ಡಬ್ಬೂ ಕ್ಯಾಲೆಂಡರ್​ಗಳಲ್ಲಿ ಸ್ಥಾನ ಪಡೆದಿದ್ದಾರೆ. ಯಶ್ ಸಹ ಆ ಸಾಲಿಗೆ ಸೇರಿದರಾ? ಅಥವಾ ಯಾವುದಾದರೂ ಹೊಸ ಚಿತ್ರಕ್ಕೆ ಫೋಟೋಶೂಟ್ ಮಾಡಿಸಿಕೊಂಡರಾ? ಎಂಬುದು ಎಲ್ಲರ ಪ್ರಶ್ನೆ. ಕಾರಣ ಏನೇ ಇರಲಿ, ಡಬ್ಬೂ ಕ್ಯಾಮರಾದಲ್ಲಿ ಸೆರೆಯಾದ ಮೊದಲ ಕನ್ನಡದ ನಟ ಎಂಬ ಹೆಗ್ಗಳಿಕೆಗೆ ಯಶ್ ಪಾತ್ರರಾಗಿದ್ದಾರೆ. ಮಿಕ್ಕಿದ್ದೆಲ್ಲವೂ ಇನ್ನಷ್ಟೇ ಗೊತ್ತಾಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net