

ಡಾ. ವಿಷ್ಣುವರ್ಧನ್ ವೃತ್ತಿಜೀವನದಲ್ಲಿ 200 ಚಿತ್ರಗಳಲ್ಲಿ ನಟಿಸಿದ್ದು, ಕನ್ನಡವಲ್ಲದೆ ಬೇರೆ ಭಾಷೆಗಳಲ್ಲೂ ಮಿಂಚಿದ್ದು, ಒಂದಕ್ಕಿಂತ ಒಂದು ವಿಭಿನ್ನವಾದ ಪಾತ್ರಗಳಲ್ಲಿ ನಟಿಸಿದ್ದು ... ಗೊತ್ತೇ ಇದೆ. ಆದರೆ, ವಿಷ್ಣುವರ್ಧನ್ ಅವರು ಹಿರಿತೆರೆಯಲ್ಲದೆ, ಕಿರುತೆರೆಯಲ್ಲೂ ನಟಿಸಿದ್ದ ವಿಷಯ ಗೊತ್ತಾ? ವಿಷ್ಣುವರ್ಧನ್ ಧಾರಾವಾಹಿಯೊಂದರಲ್ಲಿ ನಟಿಸಿದ್ದರು. ಅದೇ ‘ಮಾಲ್ಗುಡಿ ಡೇಸ್’.
ಆರ್.ಕೆ. ನಾರಾಯಣ್ ಅವರ ಅದೇ ಹೆಸರಿನ ಸಣ್ಣಕಥೆಗಳ ಸಂಕಲನವನ್ನಾಧರಿಸಿ, ಶಂಕರ್ ನಾಗ್ ನಿರ್ದೇಶಿಸಿದ್ದ ಈ ಧಾರಾವಾಹಿಯಲ್ಲಿ ಕನ್ನಡ ಚಿತ್ರರಂಗದ ಹಲವು ಪ್ರತಿಭಾವಂತರು ನಟಿಸಿದ್ದರು. ಈ ಪೈಕಿ ‘ಫಾರ್ಟಿ ಫೈವ್ ಎ ಮಂಥ್’ ಎಂಬ ಕಥೆಯಲ್ಲಿ ವಿಷ್ಣುವರ್ಧನ್, ವೆಂಕಟ್ ರಾವ್ ಎಂಬ ಪಾತ್ರದಲ್ಲಿ ನಟಿಸಿದ್ದರು. ಈ ಧಾರಾವಾಹಿಯಲ್ಲಿ ಅವರ ಪತ್ನಿಯಾಗಿ ಗಾಯತ್ರಿ ಅನಂತ್ ನಾಗ್ ಸಹ ಕಾಣಿಸಿಕೊಂಡಿದ್ದರು.
ಇದಲ್ಲದೆ, ರಮೇಶ್ ಭಟ್ ಅಭಿನಯದ ‘ಕ್ರೇಜಿ ಕರ್ನಲ್’ ಧಾರಾವಾಹಿಯ ಮೊದಲ ಕಂತಿನಲ್ಲಿ ವಿಷ್ಣುವರ್ಧನ್ ಮತ್ತು ಭಾರತಿ ವಿಷ್ಣುವರ್ಧನ್ ಇಬ್ಬರೂ ಕಾಣಿಸಿಕೊಂಡು, ಕ್ರೇಜಿ ಕರ್ನಲ್ ಪಾತ್ರವನ್ನು ವೀಕ್ಷಕರಿಗೆ ಪರಿಚಯಿಸಿದ್ದರು.