ಗಂಭೀರವಲ್ಲ, ಗಾಬರಿಯಾಗಬೇಡಿ: ನಟ ವಿಶಾಲ್ ಅನಾರೋಗ್ಯದ ಬಗ್ಗೆ ಆಪ್ತರಿಂದ ಪ್ರತಿಕ್ರಿಯೆ

v1
Published on

ಬೆಂಗಳೂರು: ತಮಿಳು ನಟ ವಿಶಾಲ್ ತಮ್ಮ ಮುಂದಿನ ‘ಮದಗಜರಾಜ’ ಚಿತ್ರದ ಪ್ರಿ-ರಿಲೀಸ್ ಇವೆಂಟ್‌ನಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡುವಾಗ ಅವರ ಕೈ ನಡುಗುತ್ತಿತ್ತು. ಅವರಲ್ಲಿ ತೀವ್ರ ಬಳಲಿಕೆ ಕಂಡುಬಂದಿತ್ತು. ಕಾರ್ಯಕ್ರಮದ ನಡುವೆ ಕಣ್ಣೀರು ಒರೆಸಿಕೊಳ್ಳುತ್ತಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ಕಾರ್ಯಕ್ರಮ ಮುಗಿದ ಬಳಿಕ ವಿಶಾಲ್, ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ವಿಶಾಲ್ ಗಂಭೀರ ಕಾಯಿಲೆಗೆ ತುತ್ತಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡಿತು. ಇದೀಗ, ಆಸ್ಪತ್ರೆಯ ವೈದ್ಯಕೀಯ ವರದಿಗಳು ಬಂದಿದ್ದು, ವಿಶಾಲ್‌ಗೆ ಯಾವುದೇ ಗಂಭೀರ ಕಾಯಿಲೆಯಿಲ್ಲ, ಬದಲಾಗಿ ಅವರಿಗೆ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಅವರಲ್ಲಿ ಬಳಲಿಕೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ವಿಶಾಲ್ ಕಳೆದ ಎರಡು ಮೂರು ದಿನಗಳಿಂದ 103 ಡಿಗ್ರಿ ಜ್ವರದಿಂದ ಬಳಲುತ್ತಿದ್ದರು. ಕುಟುಂಬದವರು ಬೇಡವೆಂದರೂ ತೀವ್ರ ಅನಾರೋಗ್ಯದ ನಡುವೆ ನಟ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಂದಹಾಗೆ, 2012ರಲ್ಲೇ ‘ಮದಗಜರಾಜ’ ಶೂಟಿಂಗ್ ಮುಗಿದಿತ್ತು. 2013ರಲ್ಲಿ ರಿಲೀಸ್ ಆಗಬೇಕಿತ್ತಾದರೂ, ನಿರ್ಮಾಪಕರು ಆರ್ಥಿಕ ಸಮಸ್ಯೆಯಿಂದಾಗಿ ಸಾಧ್ಯವಾಗಿರಲಿಲ್ಲ. ಇದೀಗ 12 ವರ್ಷಗಳ ಬಳಿಕ ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು, ಈ ಸಮಯದಲ್ಲಿ ತಂಡದ ಜತೆ ನಿಲ್ಲಬೇಕೆಂದು ವಿಶಾಲ್ ಅನಾರೋಗ್ಯವನ್ನೂ ಲೆಕ್ಕಿಸದೇ ಸಿನಿಮಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಯಾವುದೇ ಗಂಭೀರ ಕಾಯಿಲೆಯನ್ನು ಎದುರಿಸುತ್ತಿಲ್ಲ. ಸಾಮಾನ್ಯ ಜ್ವರ ಅಷ್ಟೇ ಎಂದು ವಿಶಾಲ್ ಆಪ್ತ ಮೂಲಗಳು ವಿಜಯವಾಣಿಗೆ ತಿಳಿಸಿವೆ. ಉಳಿದಂತೆ ವಿಶಾಲ್ ತಮಿಳಿನ ‘ತುಪ್ಪರಿವಾಲನ್’ ಚಿತ್ರದಲ್ಲಿ ಡಿಕ್ಟೇಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net