

ಕೊಚ್ಚಿ: ನಾನು ಮಹಿಳೆಯರನ್ನು ಮಂಚಕ್ಕೆ ಕರಿತೀನಿ, ನೇರವಾಗೇ ಲೈಂಗಿಕ ಕ್ರಿಯೆಯ ಬಗ್ಗೆ ಕೇಳ್ತೀನಿ ಅಂತ ನಟಿ ನವ್ಯಾ ನಾಯರ್ ಮುಂದೆಯೇ ಹೇಳಿಕೆ ನೀಡಿ ಭಾರೀ ವಿವಾದ ಸೃಷ್ಟಿ ಮಾಡಿದ್ದ ಮಲಯಾಳಂ ಖ್ಯಾತ ನಟನ ವೈವಾಹಿಕ ಬಾಳಲ್ಲಿ ಬಿರುಗಾಳಿ ಎಬ್ಬಿದೆ.
ಪತ್ನಿಯ ಜೊತೆಗಿದ್ದ ಎಲ್ಲ ಸಂಬಂಧವನ್ನು ಕಡಿದುಕೊಂಡಿದ್ದಾಗಿ ವಿನಾಯಕನ್ ಶುಕ್ರವಾರ ಅಧಿಕೃತವಾಗಿ ತಿಳಿಸಿದ್ದಾರೆ. ನಾನು ಮಲಯಾಳಂ ಸಿನಿಮಾ ನಟ ವಿನಾಯಕನ್. ನನ್ನ ಮತ್ತು ನನ್ನ ಹೆಂಡತಿಯ ನಡುವಿನ ಎಲ್ಲಾ ವೈವಾಹಿಕ ಸಂಬಂಧಗಳು ಮತ್ತು ಕಾನೂನು ಸಂಬಂಧಗಳು ಈ ಕ್ಷಣದಲ್ಲಿ ಕೊನೆಯಾಗುತ್ತವೆ. ಎಲ್ಲರಿಗೂ ಧನ್ಯವಾದಗಳು ಎಂದು ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದಾರೆ.
ಅಂದಹಾಗೆ ವಿನಾಯಕನ್ ಅವರು ತಮಿಳಿನಲ್ಲಿ ‘ತಿಮಿರು’, ‘ಸಿರುತೈ’, ‘ಮರಿಯಾನ್’ ಮುಂತಾದ ಚಿತ್ರಗಳಲ್ಲಿ ಖಳನಾಯಕನ ಪಾತ್ರಗಳನ್ನು ನಿರ್ವಹಿಸುವಲ್ಲಿ ವಿನಾಯಕನ್ ಹೆಸರುವಾಸಿಯಾಗಿದ್ದಾರೆ. ಅಲ್ಲದೆ, ತಮ್ಮ ತವರು ಕೇರಳದಲ್ಲಿ ಗಾಯಕ ಮತ್ತು ಸಂಗೀತ ಸಂಯೋಜಕರಾಗಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವುದರ ಜೊತೆಗೆ ನಟನೆಗಾಗಿ ಹಲವಾರು ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ.
ಕಳೆದ ವರ್ಷ ನಟಿ ನವ್ಯಾ ನಾಯರ್ ಮತ್ತೆ ಮಲಯಾಳಂ ಚಿತ್ರಕ್ಕೆ ಕಂಬ್ಯಾಕ್ ಮಾಡಿದ ವಿ.ಕೆ. ಪ್ರಕಾಶ್ ನಿರ್ದೇಶನದ “ಒರುಥಿ” ಚಿತ್ರದ ಪ್ರಚಾರದ ವೇಳೆ ವಿನಾಯಕನ್ ವಿವಾದವನ್ನು ಸೃಷ್ಟಿ ಮಾಡಿಕೊಂಡಿದ್ದರು. ನಾನು 10 ಮಹಿಳೆಯರ ಜತೆ ಲೈಂಗಿಕ ಸಂಬಂಧವನ್ನು ಹೊಂದಿದ್ದೇನೆ. ನನ್ನೊಂದಿಗೆ ಮಲಗುತ್ತೀರಾ ಎಂದು ನಾನು ನೇರವಾಗಿಯೇ ಕೇಳುತ್ತೇನೆ. ಓಕೆ ಅಂದರೆ ಓಕೆ. ಒಂದು ವೇಳೆ ನಿರಾಕರಿಸಿದರೆ, ನಾನದನ್ನು ಅಲ್ಲಿಗೆ ಬಿಟ್ಟು ಬಿಡುತ್ತೇನೆ. ಬಲವಂತ ಮಾಡುವುದಿಲ್ಲ. ಮಹಿಳೆಗೆ ಲೈಂಗಿಕತೆ ಕೇಳುವುದು “ಮೀ ಟೂ” ಎಂದಾದರೆ, ನಾನದನ್ನು ಮುಂದುವರಿಸುತ್ತೇನೆ ಎಂದು ಹೇಳುವ ಮೂಲಕ ತಮ್ಮ ಮಾತನ್ನು ಮುಗಿಸಿದರು.
ವಿನಾಯಕನ್ ಹೇಳಿದ ಮಾತು ಮಲಯಾಳಂ ಇಂಡಸ್ಟ್ರಿಯ ಅನೇಕ ಸೆಲೆಬ್ರಿಟಿಗಳ ಕೋಪಕ್ಕೆ ಕಾರಣವಾಗಿತ್ತು. ಈ ವಿವಾದಾತ್ಮಕ ಹೇಳಿಕೆಯನ್ನು ನೀಡುವಾಗ ನಟಿ ನವ್ಯಾ ನಾಯರ್ ಕೂಡ ವೇದಿಕೆ ಮೇಲೆಯೇ ಇದ್ದರು. ಈ ವೇಳೆ ಅವರು ವಿನಾಯಕನ್ ಅವರ ಮಾತನ್ನು ಖಂಡಿಸದೇ ಮೌನ ವಹಿಸಿದ್ದಕ್ಕೆ ಟೀಕೆಗೆ ಗುರಿಯಾದರು. ಆ ಕ್ಷಣದಲ್ಲಿ ನಾನೇನು ಮಾಡಲು ಸಾಧ್ಯವಾಗಲಿಲ್ಲ ಎಂದು ಸಮರ್ಥಿಸಿಕೊಂಡರು ಆದರೆ, ನಂತರದಲ್ಲಿ ಹೇಳಿಕೆಯನ್ನು ಖಂಡಿಸಿದರು.
ಸಿನಿಮಾ ವಿಚಾರಕ್ಕೆ ಬಂದರೆ ನೆಲ್ಸನ್ ದಿಲೀಪ್ ನಿರ್ದೇಶನದ ರಜನಿಕಾಂತ್ ಅಭಿನಯದ 'ಜೈಲರ್' ಚಿತ್ರದಲ್ಲಿ ವಿನಾಯಕನ್ ನಟಿಸುತ್ತಿದ್ದಾರೆ. (ಏಜೆನ್ಸೀಸ್)