ವಿದ್ಯಾರ್ಥಿಗಳ ಶಿಕ್ಷಣಕ್ಕೆ 10 ಕೋಟಿ ರೂ. ದೇಣಿಗೆ ದಾನ ಮಾಡಿದ ನಟ ಸೂರ್ಯ

suriya (1)
Published on

ಆ್ಯಕ್ಟಿಂಗ್ ಜತೆ ಜತೆಗೆ ಸಾಮಾಜಿಕ ಕಾರ್ಯಗಳ ಮೂಲಕವೂ ತಮಿಳು ನಟ ಸೂರ್ಯ ಹೆಚ್ಚು ಜನಪ್ರಿಯರಾಗಿದ್ದಾರೆ. ಈ ಹಿಂದೆ ಆರೋಗ್ಯ, ಶಿಕ್ಷಣ, ಹುಲಿ ಸಂರಕ್ಷಣೆ ಹಾಗೂ ಏಡ್ಸ್ ಬಗ್ಗೆ ಅವರು ಜಾಗೃತಿ ಮೂಡಿಸಿ, ಸಾಮಾಜಿಕ ಕಳಕಳಿ ಮೆರೆದಿದ್ದರು. ಇಂತಹ ಸೂರ್ಯ, ಅರ್ಧಕ್ಕೆ ಶಾಲೆ ಬಿಟ್ಟ ವಿದ್ಯಾರ್ಥಿಗಳ ಶಿಕ್ಷಣಕ್ಕೆಂದೇ 2006ರಲ್ಲಿ ‘ಅಗರಂ’ ಫೌಂಡೇಷನ್ ಆರಂಭಿಸಿದ್ದಾರೆ. ಇದೇ ಫೌಂಡೇಷನ್‌ನಿಂದ 2010ರಲ್ಲಿ 159 ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅನುಕೂಲ ಮಾಡಿಕೊಟ್ಟಿದ್ದರು. ಇದೀಗ ಅವರು ‘ಅಗರಂ’ ಫೌಂಡೇಷನ್‌ಗೆ ದೊಡ್ಡ ಮಟ್ಟದ ದೇಣಿಗೆ ನೀಡಲು ಮುಂದಾಗಿದ್ದಾರೆ. ಅವರು ನಾಯಕನಾಗಿದ್ದ ‘ರೆಟ್ರೋ’ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಈಗಾಗಲೇ 250 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಇದೇ ಖುಷಿಯಲ್ಲಿರುವ ಸೂರ್ಯ, ಚಿತ್ರದ ಲಾಭದಲ್ಲಿನ 10 ಕೋಟಿ ರೂಪಾಯಿಯನ್ನು ‘ಅಗರಂ’ ಫೌಂಡೇಷನ್‌ಗೆ ದೇಣಿಗೆ ನೀಡಲು ಮುಂದಾಗಿದ್ದಾರೆ. ‘ನಮ್ಮ ‘ರೆಟ್ರೋ’ ಚಿತ್ರಕ್ಕೆ ನೀಡಿದ ಅಭೂತಪೂರ್ವ ಬೆಂಬಲದಿಂದ ಯಶಸ್ಸಿನಲ್ಲಿದ್ದೇವೆ. ಹೀಗಾಗಿ, ನಾನು ‘ಅಗರಂ’ ಫೌಡೇಷನ್‌ಗೆ 10 ಕೋಟಿ ರೂ. ದಾನ ಮಾಡಲು ನಿರ್ಧರಿಸಿದ್ದೇನೆ’ ಎಂದು ಸೂರ್ಯ ಘೋಷಿಸಿದ್ದಾರೆ. ನಟ ಸೂರ್ಯನ ಸಾಮಾಜಿಕ ಕಳಕಳಿಗೆ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಸೆಟ್ಟೇರಿತು 46ನೇ ಚಿತ್ರ: ‘ರೆಟ್ರೋ’ ಯಶಸ್ಸಿನ ಬೆನ್ನಲ್ಲೇ ಸೂರ್ಯ 46ನೇ ಚಿತ್ರ ಘೋಷಿಸಿದ್ದಾರೆ. ಈ ಚಿತ್ರಕ್ಕೆ ‘ಲಕ್ಕಿ ಭಾಸ್ಕರ್’ ನಿರ್ದೇಶಕ ವೆಂಕಿ ಅಟ್ಲೂರಿ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಸೂರ್ಯ-ವೆಂಕಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಮೊದಲ ಚಿತ್ರದ ಮುಹೂರ್ತ ಸೋಮವಾರ ಹೈದರಾಬಾದ್‌ನಲ್ಲಿ ನೆರವೇರಿದೆ. ಇಲ್ಲಿ ‘ಪ್ರೇಮಲು’ ನಟಿ ಮಮಿತಾ ಬೈಜು, ಸೂರ್ಯನಿಗೆ ಜೋಡಿಯಾಗಿದ್ದಾರೆ. ಚಿತ್ರಕ್ಕೆ ಜಿ.ವಿ.ಪ್ರಕಾಶ್ ಸಂಗೀತವಿರಲಿದ್ದು, ಸದ್ಯದಲ್ಲೇ ಶೂಟಿಂಗ್ ಆರಂಭವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net