

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಯೋಗರಾಜ್ ಭಟ್ ನಿರ್ದೇಶನದ, ಇ. ಕೃಷ್ಣಪ್ಪ ನಿರ್ಮಾಣದ "ಮನದ ಕಡಲು' ಕಳೆದ ಮಾ. 28ರಂದು ರಿಲೀಸ್ ಆಗಿತ್ತು. ಈ ಚಿತ್ರದ ಮೂಲಕ "ಫಿಸಿಕ್ಸ್ ಟೀಚರ್' ಸುಮುಖ ರೊಮ್ಯಾಂಟಿಕ್ ಹೀರೋ ಆಗಿ ಚಿತ್ರರಂಗಕ್ಕೆ ಪರಿಚಯವಾದರು. ಅವರಿಗೆ ಜೋಡಿಯಾಗಿದ್ದ ಅಂಜಲಿ ಅನೀಶ್ ಮತ್ತು ರಾಶಿಕಾ ಶೆಟ್ಟಿ ನಟನೆಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. "ಮನದ ಕಡಲು' ಯಶಸ್ಸಿನ ಬೆನ್ನಲ್ಲೇ ನಾಯಕ ನಟ ಸುಮುಖನಿಗೆ ಮೂರು ರೊಮ್ಯಾಂಟಿಕ್ ಸಿನಿಮಾಗಳಲ್ಲೇ ಅವಕಾಶ ಅರಸಿ ಬಂದಿವೆ. "ಎರಡು ರೊಮ್ಯಾಂಟಿಕ್ ಲವ್ಸ್ಟೋರಿ ಕಥೆಗಳು ಬಂದಿವೆ. ಜತೆಗೆ ಒಂದೆರಡು ಸೆಮಿ ಕಮರ್ಷಿಯಲ್, ಮಾಸ್ ಚಿತ್ರಗಳಲ್ಲೂ ಆರ್ ಇದೆ. ಒಬ್ಬ ನಟನ ಜರ್ನಿ ತುಂಬ ಸವಾಲಿನಿಂದ ಕೂಡಿರುತ್ತದೆ. "ಮನದ ಕಡಲು' ಚಿತ್ರದಲ್ಲಿ ನನಗೆ ಅವಕಾಶ ಸಿಕ್ಕಿದ್ದೇ ಅದೃಷ್ಟ. ಇನ್ನು ಮುಂದೆ ಚಿತ್ರರಂಗದಲ್ಲಿ ನನ್ನ ಕರಿಯರ್ ರೂಪಿಸುವಲ್ಲಿ ನನ್ನ ಮುಂದಿನ ಎರಡು ಚಿತ್ರಗಳು ತುಂಬ ಮುಖ್ಯವಾಗಿವೆ. ಹೀಗಾಗಿ ತುಂಬ ಎಚ್ಚರಿಕೆಯಿಂದ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಎಲ್ಲ ರೀತಿಯ ಪಾತ್ರಗಳಲ್ಲಿ, ಜಾನರ್ ಸಿನಿಮಾಗಳಲ್ಲಿ ನಟಿಸುವ ಆಸೆ ಏನೋ ಇದೆ. ಆದರೆ, ಈಗಲೇ ಮಾಸ್ ಸಿನಿಮಾದಲ್ಲಿ ನಟಿಸಬೇಕು ಅಂತ ನನಗೆ ಅನ್ನಿಸುತ್ತಿಲ್ಲ. ರೊಮ್ಯಾಂಟಿಕ್ ಜಾನರ್ನಲ್ಲೇ ನಟಿಸಬೇಕು ಅಂತ ಅಂದುಕೊಂಡಿದ್ದೇನೆ. ಇನ್ನೆರಡು ವಾರಗಳಲ್ಲಿ ಹೊಸ ಸಿನಿಮಾ ಘೋಷಿಸಲಿದ್ದೇವೆ' ಎಂದು ಮಾಹಿತಿ ನೀಡುತ್ತಾರೆ.
ಇನ್ನು ಎರಡು ವಾರ ಪೂರೈಸಿರುವ "ಮನದ ಕಡಲು' ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸುಮುಖ ನಟನೆಯನ್ನೂ ಮೆಚ್ಚಿದ್ದಾರೆ. ಈ ಬಗ್ಗೆ ಸಂತಸ ಹಂಚಿಕೊಳ್ಳುವ ಸುಮುಖ, "ಕೆಲವರು ಹಲವು ವರ್ಷಗಳ ಬಳಿಕ ಒಬ್ಬ ಕಂಪ್ಲೀಟ್ ನಟನನ್ನು ಸ್ಕ್ರೀನ್ ಮೇಲೆ ನೋಡಿ ಖುಷಿಯಾಯಿತು ಎಂದರು. ಕೆಲವರು ನಿಮ್ಮ ಪಾತ್ರ "ನಾಗರಹಾವು' ವಿಷ್ಣುವರ್ಧನ್ ಸರ್ ಫೀಲ್ ನೀಡುತ್ತೆ ಅಂದರು. ಕೆಲವರು ನೀವು ಹೊಸಬ ಅಂತ ಅನ್ನಿಸೋದಿಲ್ಲ 15, 20 ಸಿನಿಮಾ ಮಾಡಿರುವ ಅನುಭವಿ ಕಲಾವಿದನಂತೆ ತುಂಬ ಈಜಿಯಾಗಿ ನಟಿಸಿದ್ದೀರ ಅಂದರು. ಹೀಗೆ ಹಲವರು ಹಲವು ರೀತಿ ನನ್ನ ಪಾತ್ರವನ್ನು ಪ್ರೇಕ್ಷಕರು ಮೆಚ್ಚಿರುವುದು ಖುಷಿ ನೀಡಿದೆ. ನೀನು ಯಾರು? ನಿನ್ನ ಹಿನ್ನೆಲೆ ಏನು? ಎಂಬುದು ಪ್ರೇಕ್ಷಕರಿಗೆ ಬೇಕಿಲ್ಲ. ತೆರೆಯ ಮೇಲೆ ನೀನು ಹೇಗೆ ನಟಿಸಿದ್ದೀಯ? ಆ ಪಾತ್ರವನ್ನು ಹೇಗೆ ಜೀವಿಸಿದ್ದೀಯ? ಎಂಬುದು ಮುಖ್ಯ' ಎಂದು ಹೇಳಿಕೊಳ್ಳುತ್ತಾರೆ ಸುಮುಖ.
ಹಲವಾರು ಕಲಾವಿದರು ಒಟಿಟಿ ವೆಬ್ಸರಣಿಗಳಲ್ಲೂ ನಟಿಸುತ್ತಿದ್ದಾರೆ. ಆ ಐಡಿಯಾ ಸುಮುಖಗೂ ಇದೆಯಂತೆ. ಆದರೆ, "ಒಂದಲ್ಲ ಒಂದು ದಿನ ಒಟಿಟಿಗೆ ಹೋಗಲೇಬೇಕು. ಈಗ ಸಿನಿಮಾ ಥಿಯೇಟರ್ನಲ್ಲಿ ರಿಲೀಸ್ ಆದ ಬಳಿಕ ಒಟಿಟಿಯಲ್ಲೂ ಬಿಡುಗಡೆಯಾಗುತ್ತದೆ. ನನಗೂ ಥಿಯೇಟರ್ ಜತೆಗೆ ಒಟಿಟಿ ಮೂಲಕವೂ ಜನರಿಗೆ ಕನೆಕ್ಟ್ ಆಗುವ ಆಸೆಯಿದೆ. ಸದ್ಯಕ್ಕೆ ಕೆಲ ಸಿನಿಮಾಗಳಲ್ಲಿ ನಟಿಸಿ ನಂತರ ವೆಬ್ಸರಣಿ ಮಾಡುವ ಆಲೋಚನೆ ಇದೆ. ಹಾಗೇನಾದರೂ ಅದ್ಭುತ ಎನ್ನಿಸುವ ಪ್ರಾಜೆಕ್ಟ್ ಸಿಕ್ಕರೆ ಖಂಡಿತ ಅಂತಹ ಸರಣಿಯಲ್ಲಿ ನಟಿಸುತ್ತೇನೆ. ಇನ್ನು ಬೇರೆ ಭಾಷೆಯ ಬಗ್ಗೆ ನಾನು ಸದ್ಯಕ್ಕೆ ಯೋಚನೆ ಮಾಡಿಲ್ಲ' ಎನ್ನುತ್ತಾರೆ.