

ಬೆಂಗಳೂರು : ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಎಂದೇ ಪ್ರಸಿದ್ಧಿಯಾಗಿರುವ ‘ಬಿಗ್‌ಬಾಸ್’ ಹೊಸ ಸೀಸನ್ ಆರಂಭಕ್ಕೆ ಸಿದ್ಧತೆ ಪ್ರಾರಂಭವಾಗಿದೆ. ಈಗಾಗಲೇ 11 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಇದೀಗ 12ನೇ ಸೀಸನ್ ಆರಂಭಿಸಲು ‘ಕಲರ್ಸ್ ಕನ್ನಡ’ ವಾಹಿನಿ ಉತ್ಸಾಹದಲ್ಲಿದೆ. ಆದರೆ, ಈ ಮಧ್ಯೆ, ಕಳೆದ ಆವೃತ್ತಿಯಲ್ಲಿ ‘ಬಿಗ್‌ಬಾಸ್’ ನಿರೂಪಣೆಗೆ ನಟ ಸುದೀಪ್ ವಿದಾಯ ಹೇಳಿದ್ದರು. ಇದು ‘ಬಿಗ್‌ಬಾಸ್’ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಹಾಗಾದರೆ, 12ರ ಆವೃತ್ತಿಗೆ ಯಾರು ಸಾರಥ್ಯ ವಹಿಸಲಿದ್ದಾರೆ ಎಂಬ ಚರ್ಚೆಯೂ ಆರಂಭವಾಗಿತ್ತು. ಈ ಗೊಂದಲಗಳಿಗೆ ಉತ್ತರ ದೊರೆತಿದ್ದು, ನಟ ಸುದೀಪ್ ಅವರೇ ‘ಬಿಗ್‌ಬಾಸ್ ಕನ್ನಡ’ ಸೀಸನ್ 12ರ ಆವೃತ್ತಿಯನ್ನು ನಿರೂಪಿಸಲಿದ್ದಾರೆ. ಸ್ವತಃ ಸುದೀಪ್ ಸಮ್ಮುಖದಲ್ಲಿ ಈ ಘೋಷಣೆ ಮಾಡಲಾಗಿದೆ. ‘ಕಳೆದ ಸೀಸನ್ ಆರಂಭದಲ್ಲಿಯೇ ನಾನು ನಿರೂಪಣೆಗೆ ವಿದಾಯ ಘೋಷಿಸಿದ್ದೆ. ತುಂಬಾ ಪ್ರಾಮಾಣಿಕವಾಗಿಯೇ ಆ ನಿರ್ಧಾರ ತೆಗೆದುಕೊಂಡಿದ್ದೆ. ಇದೀಗ ಅದೇ ಪ್ರಾಮಾಣಿಕತೆಯಿಂದ ನಾನು ಮತ್ತೆ ‘ಬಿಗ್‌ಬಾಸ್ ಕನ್ನಡ’ ನಿರೂಪಿಸಲು ನಿರ್ಧರಿಸಿದ್ದೇನೆ. ಇದರಲ್ಲಿ ಯಾವ ಲೆಕ್ಕಚಾರವೂ ಇಲ್ಲ. ವಾಹಿನಿಯ ಪ್ರತಿಯೊಬ್ಬರು ವಿನಂತಿಸಿದ ರೀತಿ ಹಾಗೆಯೇ ಪ್ರೇಕ್ಷಕರು, ಅಭಿಮಾನಿಗಳು ಎಲ್ಲರೂ ನಾನು ಮರಳಬೇಕು ಎಂಬ ಆಶಯ ವ್ಯಕ್ತಪಡಿಸಿದ್ದರು. ಆ ಮಾತುಗಳು ನನ್ನನ್ನು ಸ್ಪರ್ಶಿಸಿದವು. ಈ ಕಾರಣಕ್ಕೆ ಮರಳಿದ್ದೇನೆ. ಈ ಬಾರಿ ಇನ್ನೂ ದೊಡ್ಡ ಮಟ್ಟದಲ್ಲಿ ಶೋ ಮೂಡಿಬರಲಿದೆ. ಐಪಿಎಲ್ ರೇಂಜಿಗೆ ಜನ ‘ಬಿಗ್‌ಬಾಸ್’ ವೀಕ್ಷಿಸುವಾಗ ನಮಗೆ ದೊಡ್ಡ ಜವಾಬ್ದಾರಿ ಇದೆ. ಹಾಗೆಯೇ ಇದೊಂದು ವೃತ್ತಿ ಕಂಡುಕೊಳ್ಳಲು ದೊಡ್ಡ ವೇದಿಕೆಯಾಗಿದ್ದು, ಸಾಕಷ್ಟು ಪ್ರತಿಭೆಗಳ ಹುಟ್ಟಿಗೆ ಈ ವೇದಿಕೆ ಕಾರಣವಾಗಿದೆ’ ಎಂದು ಸುದೀಪ್ ಖುಷಿ ಹಂಚಿಕೊಂಡರು. ಜಿಯೋಸ್ಟಾರ್‌ನ ದಕ್ಷಿಣದ ಮನರಂಜನೆಯ ಕ್ಲಸ್ಟರ್‌ನ ಮುಖ್ಯಸ್ಥ ಕೃಷ್ಣನ್ ಕುಟ್ಟಿ, ಕಲರ್ಸ್ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್ ಪ್ರಶಾಂತ್, ಸುಷ್ಮಾ, ಬನಿಜಯ್ ಏಷ್ಯಾ ಮತ್ತು ಎಂಡೆಮೋಲ್‌ಶೈನ್ ಇಂಡಿಯಾದ ಸಂಸ್ಥಾಪಕ ಹಾಗೂ ಸಿಇಒ ದೀಪಕ್ ಧಾರ್ ಇದ್ದರು.
ವಿದಾಯ ಬೆದರಿಕೆ ಅಲ್ಲ, ಅಭಿಪ್ರಾಯ ಅಷ್ಟೇ: ‘ಬಿಗ್‌ಬಾಸ್ ಕನ್ನಡ’ ಶೋಗೆ ವಿದಾಯ ಘೋಷಿಸಿದ್ದರ ಬಗ್ಗೆ ಸ್ಪಷ್ಟನೆ ನೀಡಿದ ಸುದೀಪ್, ‘ನನ್ನ ವಿದಾಯದ ವಿಚಾರ ಯಾರನ್ನೋ ಬೆದರಿಸಲು ಅಲ್ಲ ಅಥವಾ ಎಚ್ಚರಿಸಲು ಅಲ್ಲ. ಅದು ನನ್ನ ನಿಲುವಾಗಿತ್ತಷ್ಟೇ. ಈ ಶೋನ ಬೇರೊಬ್ಬರು ನಿರೂಪಣೆ ಮಾಡಿದರೂ, ನಾನು ತಪ್ಪದೇ ವೀಕ್ಷಿಸುತ್ತಿದ್ದೆ. ನನ್ನಿಂದ ಏನಾದರೂ ಸಲಹೆ ಬೇಕಿದ್ದರೆ, ಖಂಡಿತ ನೀಡುತ್ತಿದ್ದೆ. ಏನೇ ಆದರೂ ಶೋ ಮುಂದುವರಿಯುತ್ತಿತ್ತು. 11 ವರ್ಷಗಳ ಕಾಲ ಈ ವೇದಿಕೆಗೆ ಅಡಿಪಾಯ ಹಾಕಿದ್ದು, ಅದು ಮುಂದುವರಿಯಲಿ ಅಂತಾ. ನನ್ನಿಂದಲೇ ಶೋ ಅಂತಲ್ಲ. ಆ ಅಭದ್ರತೆಯಲ್ಲಿ ಯಾರೂ ಇರಲ್ಲ’ ಎಂದು ಅಭಿಪ್ರಾಯ ಹಂಚಿಕೊಂಡರು.
ಕನ್ನಡ ಪ್ರೀತಿ ತೋರಿಸಿ ಎಂದಿದ್ದೇನೆ ಅಷ್ಟೇ: ‘ಬಿಗ್‌ಬಾಸ್’ ಶೋಗೆ ಮರಳಿರುವುದಕ್ಕೆ ಯಾವುದಾದರೂ ಷರತ್ತು ವಿಧಿಸಿದ್ದೀರಾ ಎಂಬುದಕ್ಕೆ ಸುದೀಪ್, ‘ನಾನು ಮರಳುವುದಕ್ಕೆ 10-12 ಬಾರಿ ಚರ್ಚೆ, ಮೀಟಿಂಗ್ ಮಾಡಿದೆವು. ಶೋಗೆ ಮರಳಲು ಯಾವುದೇ ಷರತ್ತು ಹಾಕಿಲ್ಲ. ಆದರೆ, ಕನ್ನಡ ಪ್ರೀತಿ ಕಾಣಿಸುತ್ತಿರಲಿಲ್ಲ. ಅದಕ್ಕಾಗಿ ಕನ್ನಡ ಭಾಷೆಗೆ ಪ್ರೀತಿ ತೋರಿಸಿ ಎಂದಷ್ಟೇ ಹೇಳಿದ್ದೇನೆ. ಅದಕ್ಕೆ ಅವರು ಸ್ಪಂದಿಸಿದ್ದಾರೆ. ‘ಬಿಬಿಕೆ 12’ರಿಂದ ‘ಬಿಬಿಕೆ 15’ರವರೆಗೆ ನಾಲ್ಕು ಸೀಸನ್‌ಗೂ ನಾನೇ ನಿರೂಪಣೆ ಮಾಡಲಿದ್ದೇನೆ’ ಎಂದು ಖಚಿತಪಡಿಸಿದರು.