

ನಟ ಸುಚೇಂದ್ರ ಪ್ರಸಾದ್ ಅವರು ಅಚ್ಚ ಕನ್ನಡ ಉಚ್ಛಾರಣೆಯ ಜತೆಗೆ ಉಚ್ಛಮಟ್ಟದ ನಟನೆಯಿಂದಲೂ ಹೆಸರು ಮಾಡಿದವರು. ಕಲಾತ್ಮಕ ಫಿಲಂ - ಸ್ಟೇಜ್ ಅಕಾಡೆಮಿಯ ದಿಗ್ದರ್ಶಕರಾಗಿರುವ ಅವರು ಕೆಲ ದಿನಗಳ ಹಿಂದಷ್ಟೆಯೇ ನಟನೆಯ ಕುರಿತ ಕಾರ್ಯಾಗಾರ ಹಮ್ಮಿಕೊಂಡಿದ್ದರು. ನಟನೆ ಕಲಿಸಲಾಗದ ವಿದ್ಯೆ ಎಂಬುದನ್ನು ಅರಿವು ಮೂಡಿಸುವುದರ ಜತೆಗೆ ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಅಭಿನಯದ ಬಗ್ಗೆ, ಚಿತ್ರರಂಗದ ವಿವಿಧ ಆಯಾಮಗಳು ಸೇರಿ, ನಟನೆಯ ಕಾಗುಣಿತ ಹೇಳಿಕೊಟ್ಟರು.
ಕೆಂಗೇರಿಯ ಕೊಮ್ಮಘಟ್ಟ ಚತುರ್ಥಿ ಫಾರ್ಮ್ಸ್ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರಕ್ಕೆ ಮುಖ್ಯ ಅತಿಥಿಗಳಾಗಿ ಹಿರಿಯ ನಿರ್ಮಾಪಕ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಉಪಾಧ್ಯಕ್ಷ ಚಿನ್ನೇಗೌಡರು, ಹಿರಿಯ ಕಲಾವಿದರ ಶರತ್ ಲೋಹಿತಾಶ್ವ ಭಾಗವಹಿಸಿ ನಟನೆ ಕಲಿಯಲು ಆಗಮಿಸಿದ್ದ ಉತ್ಸಾಹಿಗಳಿಗೆ ಶುಭಕೋರಿದರು.
ಜತೆಗೆ ನಿರ್ದೇಶಕರಾದ ಯೋಗರಾಜ್ ಭಟ್, ಪಿ. ಶೇಷಾದ್ರಿ, ಚೇತನ್ ಕುಮಾರ್, ಉಮೇಶಣ್ಣ, ಗಿರಿಜಾ ಲೋಕೇಶ್, ದತ್ತಣ್ಣ ಸೇರಿ ಹಲವರು ಕಾರ್ಯಕ್ರಮಕ್ಕೆ ಮತ್ತು ಕಲಾತ್ಮಕ ಅಕಾಡೆಮಿಗೆ ಶುಭ ಹಾರೈಸಿದ್ದಾರೆ.