

ತಮಿಳು ಸೇರಿದಂತೆ ತೆಲುಗು, ಹಿಂದಿಯಲ್ಲೂ 30ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತಿ ಸಿದ್ಧಾರ್ಥ್ಗೆ ಸಲ್ಲುತ್ತದೆ. ಕಳೆದ ಎರಡು ದಶಕಗಳಿಂದ ಬೇರೆ ಬೇರೆ ಭಾಷೆಗಳಲ್ಲಿ "ಬಾಯ್ಸ್', "ನೂವಸ್ತಾನಂಟೆ ನೇನೊದ್ದಂಟಾನ', "ಬೊಮ್ಮರಿಲ್ಲು', "ರಂಗ್ ದೇ ಬಸಂತಿ', "ಜಿಗರ್ಥಂಡ', "ಕಾವಿಯ ತಲೈವಾನ್' ಸೇರಿ ಹಲವು ಹಿಟ್ ಸಿನಿಮಾಗಳಲ್ಲಿ ಮಿಂಚಿದ್ದರೂ, ಸಿದ್ಧಾರ್ಥ್ ಉತ್ತಮ ನಟನಾಗಿ ಗುರುತಿಸಿಕೊಂಡಿದ್ದರೂ ದೊಡ್ಡ ಸ್ಟಾರ್ ಆಗಲು ಸಾಧ್ಯವಾಗಿಲ್ಲ.
ಇದಕ್ಕೆ ಖುದ್ದು ಅವರೇ ಕಾರಣ ನೀಡಿದ್ದು, "ಹೆಣ್ಣುಮಕ್ಕಳಿಗೆ ಹೊಡೆಯುವ, ಅವರೊಂದಿಗೆ ಐಟಂ ಸಾಂಗ್ನಲ್ಲಿ ಕುಣಿಯುವ, ಅವರ ಸೊಂಟ ಚಿವುಟುವ, ಅವರೇನು ಮಾಡಬೇಕು? ಹೇಗಿರಬೇಕು? ಅಂತ ಹೇಳುವಂತಹ ಹಲವು ಪಾತ್ರಗಳು ಬಂದಿದ್ದವು. ಆ ಕಥೆಗಳು ಚೆನ್ನಾಗಿದ್ದಿದ್ದರೆ, ಯಶಸ್ವಿ ಸಿನಿಮಾಗಳಾಗಿರುತ್ತಿದ್ದವು. ಆದರೆ, ನನ್ನ ಪಾತ್ರ ಹೀಗೆಲ್ಲಾ ಮಾಡಬೇಕಾ? ಅಂತ ನಾನು ಒಪ್ಪಿರಲಿಲ್ಲ. ಆಗ ಏನನ್ನಿಸಿತೋ ಹಾಗೆ ಮಾಡಿದ್ದೆ. ಹಾಗೇನಾದರೂ ನಾನು ಆ ಸಿನಿಮಾಗಳನ್ನು ಒಪ್ಪಿ ಮಾಡಿದ್ದರೆ, ಇವತ್ತು ದೊಡ್ಡ ಸ್ಟಾರ್ ಆಗಿರುತ್ತಿದ್ದೆ. ನನ್ನ ಸುತ್ತ ಇದ್ದವರು ಅಗ್ರೆಸ್ಸಿವ್ ಮತ್ತು ಮ್ಯಾಚೋ ಪಾತ್ರಗಳಲ್ಲಿ ನಟಿಸುತ್ತಿದ್ದರು. ಗಂಡಸರಿಗೆ ಕಷ್ಟವೇ ಆಗಲ್ಲ ಎಂಬಂತೆ ತೆರೆಯ ಮೇಲೆ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಆದರೆ, ನನಗೆ ಸ್ಕ್ರೀನ್ ಮೇಲೆ ಅಳುವುದೇ ಖುಷಿ ನೀಡುತ್ತಿತ್ತು' ಎಂದು ಹೇಳಿಕೊಂಡಿದ್ದಾರೆ.
ಸದ್ಯ ಅವರು ನಟಿಸಿರುವ "ಟೆಸ್ಟ್' ಮತ್ತು "ಇಂಡಿಯನ್ 3' ಚಿತ್ರಗಳು ತೆರೆಗೆ ಬರಲು ಸಿದ್ಧತೆ ನಡೆಸುತ್ತಿವೆ.