

ಬೆಂಗಳೂರು: ನಟ, ನಿರ್ಮಾಪಕ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಅಷ್ಟೇ ಅಲ್ಲ ಅವರ ಜತೆ ಕೆಲಸ ಮಾಡುವವರೂ ಬಿಜಿಯಾಗಿದ್ದಾರೆ. ಅಂದರೆ, ರಿಷಬ್ ಜತೆ ಕೆಲಸ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿರುವ ರಾಘವೇಂದ್ರ ಇಳಿಗೇರ್ ಇದೀಗ ಹೊಸ ಸಿನಿಮಾವೊಂದನ್ನು ಕೈಗೆತ್ತಿಕೊಂಡಿದ್ದು, ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಇನ್ನೂ ಅಂತಿಮವಾಗದ ಆ ಚಿತ್ರದ ಪೋಸ್ಟರ್ ಅನ್ನು ರಿಷಬ್ ಶೆಟ್ಟಿ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ.
19ನೇ ವಯಸ್ಸಿನಲ್ಲಿ ಕಿರುಚಿತ್ರ ನಿರ್ದೇಶನ ಮಾಡಿದ ರಾಘವೇಂದ್ರ, ಸೈಕಾಲಜಿ ಪದವಿ ಮುಗಿಸಿದ ನಂತರ ರಿಷಬ್ ಅವರ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುತ್ತ, ಇಂದು ಚಿತ್ರಕ್ಕೆ ಕತೆ ಬರೆದು ಆಕ್ಷನ್ ಕಟ್ ಹೇಳುವ ಹಂತಕ್ಕೆ ತಲುಪಿದ್ದಾರೆ. ವಿಶೇಷ ಏನೆಂದರೆ ಇವರ ಮೊದಲ ಸಿನಿಮಾ ಬುದ್ಧನ ಮರಣ ಏನೆಲ್ಲ ಘಟಿಸಿತು ಎಂಬ ಕಥೆಯ ಹಿನ್ನೆಲೆಯಲ್ಲಿ ಸಾಗಲಿದೆಯಂತೆ. ಇಡೀ ಚಿತ್ರದಲ್ಲಿ ಫ್ಯಾಂಟಿಸಿ ಮತ್ತು ಪೌರಾಣಿಕ ಅಂಶಗಳನ್ನೂ ನಿರ್ದೇಶಕರು ತೋರಿಸಲಿದ್ದಾರೆ.
ಅದರಂತೆ ಇದೀಗ ಮೊದಲಾರ್ಥವಾಗಿ ಚಿತ್ರದ ಪೋಸ್ಟರ್ ಬಿಡುಗಡೆ ಆಗಿದ್ದು, ಸೀಳುಬಿಟ್ಟ ಬೆಟ್ಟ, ಕೆಂಪು ಬಣ್ಣದ ದಾರಿ, ಮಧ್ಯದಲ್ಲಿ ಬುದ್ದನ ಮುಖ, ತುತ್ತತುದಿಯಲ್ಲಿ ಹರಿದಿರುವ ವಿಚಿತ್ರ ಧ್ವಜ, ಅಕ್ಕಪಕ್ಕದಲ್ಲಿ ಎರಡು ಮಿಲಿಟರಿ ಹೆಲಿಕಾಫ್ಟರ್. ಕೆಳಗಡೆ ಒಂದು ಕಡೆಯಲ್ಲಿ ಜೀಪುಗಳು, ಮತ್ತೊಂದು ಭಾಗದಲ್ಲಿ ವ್ಯಕ್ತಿಯೊಬ್ಬ ಕುದುರೆ ಮೇಲೆ ಕೂತಿದ್ದೇನೆ. ಪಕ್ಕದಲ್ಲೆ ಬಾಂಬ್ ಸಿಡಿಸಲು ಟ್ಯಾಂಕ್‌ವೊಂದು ಸಜ್ಜಾಗಿದೆ. ಶಾಂತಿ ಮತ್ತು ಹಿಂಸೆ ಒಟ್ಟಿಗೆ ನಿರ್ಗಮನ ಹೀಗೆ ಒಂದೇ ಪೋಸ್ಟರ್ನಲ್ಲಿ ಹಲವು ವೈಶಿಷ್ಟ್ಯಗಳನ್ನು ನಿರ್ದೇಶಕರು ತುಂಬಿದ್ದಾರೆ.
ಕಲಾವಿದರ ಆಯ್ಕೆ ಪ್ರಕ್ರಿಯೆ ಶುರುವಾಗಿದೆ. ಸಂಗೀತ ರಘು ದೀಕ್ಷಿತ್, ಛಾಯಾಗ್ರಾಹಕರಾಗಿ ಅರ್ಜುನ್ ಅಕೋಟ್ ನಿಭಾಯಿಸಲಿದ್ದಾರೆ. ಸದ್ಯಕ್ಕೆ ’ಪ್ರೊಡಕ್ಷನ್ ನಂ.2’ ಹೆಸರಿನಲ್ಲಿ ಚಿತ್ರದ ಕೆಲಸಗಳಿಗೆ ಚಾಲನೆ ಸಿಕ್ಕಿದೆ. ಜ್ಞಾನಶೇಖರ್ ಸಿದ್ದಯ್ಯ, ರವಿಕುಮಾರ್, ಸುನಿಲ್ ಗಾಟ್ಲೆ, ರಾಘವೇಂದ್ರ.ಜಿ.ಆರ್ ಜಂಟಿಯಾಗಿ 'ಸ್ಕೆಯರ್ ಕಾನ್‌ಸೆಪ್ಟ್ಸ್' ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.