

ಬೆಂಗಳೂರು: ‘ಒಂದೇ ರಾತ್ರಿಯಲ್ಲಿ ಕಥೆ ಬರೆದು, ಇನ್ನೊಂದು ದಿನದಲ್ಲಿ ಕಲಾವಿದರನ್ನು ಫೈನಲ್ ಮಾಡಿಕೊಂಡು, ಅದಾಗಿ ಕೇವಲ 14 ದಿನದಲ್ಲಿಯೇ ಶೂಟಿಂಗ್ ಹೋಗಿದ್ದೇವೆ. ನಮಗೂ ಇದೊಂದು ಹೊಸ ಅನುಭವ ...’
‘ಹೀರೋ’ ಚಿತ್ರದ ಸೃಷ್ಟಿಯ ಆರಂಭದ ಅವಧಿಯನ್ನು ರಿಷಬ್ ನೆನೆದಿದ್ದು ಹೀಗೆ. ಅದನ್ನೂ ಮತ್ತಷ್ಟು ವಿವರಿಸುವ ಅವರು, ‘ನಮ್ಮ ಐಡಿಯಾ ಸ್ಪಷ್ಟವಾಗಿತ್ತು. ದಿನೇದಿನೇ ಕೇಸ್ಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲೊಕೇಷನ್ ಬದಲಿಸಿಕೊಂಡು ಶೂಟಿಂಗ್ ಮಾಡುವ ಹಾಗಿರಲಿಲ್ಲ. ಒಂದು ಮನೆ ಅಥವಾ ಆಫೀಸ್ನಲ್ಲಿ ನಡೆಯವಂಥ ಕಥೆಯ ಹುಡುಕಾಟದಲ್ಲಿದ್ದಾಗ, ಭರತ್ ಹೇಳಿದ ಕಥೆ ಎಲ್ಲ ದೃಷ್ಟಿಯಿಂದಲೂ ಸೂಕ್ತ ಎನಿಸಿತು. ಆಗ ಶುರುವಾಗಿದ್ದೇ ‘ಹೀರೋ’ ಎಂಬುದು ರಿಷಬ್ ಮಾತು.
ಲಾಕ್ಡೌನ್ ಆಗಷ್ಟೇ ಮುಗಿಯುತ್ತಾ ಬಂದಿತ್ತು. ಆದರೂ, ಎಲ್ಲೆಡೆ ಕರೊನಾ ಬಗ್ಗೆ ಜನರಲ್ಲಿ ಭಯವಿತ್ತು. ಸಿನಿಮಾ ಶೂಟಿಂಗ್ಗೆ ಅನುಮತಿ ಸಿಕ್ಕಿತ್ತಾದರೂ, ಯಾರೂ ಆ ಸಾಹಸಕ್ಕೆ ಕೈ ಹಾಕಿರಲಿಲ್ಲ. ಆದರೆ, ರಿಷಬ್ ಶೆಟ್ಟಿ ಆಂಡ್ ಗ್ಯಾಂಗ್ ಮಾತ್ರ ಸುಮ್ಮನಿರಲಿಲ್ಲ. ಕಡಿಮೆ ಸಮಯದಲ್ಲಿ ಒಂದು ಕಥೆ ಮಾಡಿಕೊಂಡು, ಅಷ್ಟೇ ಬೇಗ ಚಿತ್ರೀಕರಣ ಮುಗಿಸಿಕೊಂಡು, ಇದೀಗ ‘ಹೀರೋ’ ಹೆಸರಿನಲ್ಲಿ ಚಿತ್ರಮಂದಿರಕ್ಕೂ ಎಂಟ್ರಿ ಕೊಡುವುದಕ್ಕೆ ಸಜ್ಜಾಗುತ್ತಿದ್ದಾರೆ. ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ‘ಹೀರೋ’ ಜನ್ಮತಾಳಿದ್ದರ ಹಿಂದೆ, ಆಸಕ್ತಿಕರವಾದ ಕಥೆಯಿದೆ. ಅದನ್ನು ಸ್ವತಃ ರಿಷಬ್ ಹೇಳಿಕೊಂಡಿದ್ದಾರೆ.
24 ಸದಸ್ಯರೇ ಇಡೀ ಚಿತ್ರದ ಪಿಲ್ಲರ್ಗಳು: ‘ಹೀರೋ’ ಸಿನಿಮಾ ಕಡಿಮೆ ಅವಧಿಯಲ್ಲಿ ಆಗಲು ಇಡೀ ತಂಡದ ಶ್ರಮವೂ ಅಷ್ಟೇ ಮಹತ್ವದ್ದು. ಅದನ್ನು ಸ್ವತಃ ರಿಷಬ್ ತುಂಬ ಖುಷಿಯಿಂದಲೇ ಹೇಳಿಕೊಳ್ಳುತ್ತಾರೆ. ‘ಚಿಕ್ಕಮಗಳೂರು ಹತ್ತಿರ ಸಿರುಗೂರು ಎಸ್ಟೇಟ್ನಲ್ಲಿ ಇಡೀ ಚಿತ್ರದ ಶೂಟಿಂಗ್ ಮಾಡಲಾಗಿದೆ. ಕೋವಿಡ್ ಸಮಯದಲ್ಲಿ ಹೇಗಪ್ಪ ಶೂಟಿಂಗ್ ಎಂಬ ಭಯವಿತ್ತು. ಮುನ್ನೆಚ್ಚರಿಕೆ ತೆಗೆದುಕೊಂಡೇ ಸಿನಿಮಾ ಮುಗಿಸಿದ್ದೇವೆ. ಇಲ್ಲಿ ಕಲಾವಿದರೇ ತಂತ್ರಜ್ಞರು, ತಂತ್ರಜ್ಞರೇ ಕಲಾವಿದರು. 24 ಜನರ ತಂಡವೇ ಇಡೀ ಚಿತ್ರದ ಶಕ್ತಿಯಾಗಿತ್ತು. ಯಾವದೂ ತಡವಾಗುತ್ತಿರಲ್ಲಿಲ್ಲ. ಡೈಲಾಗ್ಗಳನ್ನೂ ಸ್ಥದಲ್ಲಿಯೇ ಬರೆದು, ಶೂಟ್ ಮಾಡಿದ್ದೇವೆ’ ಎನ್ನುವ ರಿಷಬ್, ಇದೊಂದು ಟೆಕ್ನಿಷಿಯನ್ ಸಿನಿಮಾ ಎಂದೂ ಹೇಳಿಕೊಳ್ಳುತ್ತಾರೆ. ಪ್ರಮೋದ್ ಶೆಟ್ಟಿ, ಮಂಜುನಾಥ್ ಗೌಡ ವಿಲನ್ಗಳಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಗಾನವಿ ಲಕ್ಷ್ಮಣ ನಾಯಕಿ.
140 ಚಿತ್ರಮಂದಿರ ಗಳಲ್ಲಿ ಹೀರೋ
ಇನ್ನು, ಚಿತ್ರದ ಬಿಡುಗಡೆಯ ಬಗ್ಗೆ ಮಾತನಾಡುವ ರಿಷಬ್, ‘ರಾಜ್ಯದ ಚಿತ್ರಮಂದಿರ ಸೇರಿ ಮಲ್ಟಿಫ್ಲೆಕ್ಸ್ಗಳಲ್ಲಿ 140ಕ್ಕೂ ಹೆಚ್ಚು ಕಡೆಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಹೊರ ರಾಜ್ಯದ 40 ಕಡೆ ಸಿನಿಮಾ ನೋಡಬಹುದು. ಪೈರಸಿ ಹಿನ್ನೆಲೆಯಲ್ಲಿ ವಿದೇಶದಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿಲ್ಲ. ಪೈರಸಿ ಸಲುವಾಗಿಯೇ ವಿಶೇಷ ತಂಡ ಮಾಡಿದ್ದೇವೆ. ಸಣ್ಣ ವಿಡಿಯೋ ಅಪ್ಲೋಡ್ ಮಾಡಿದರೂ ಅದನ್ನು ಅಳಿಸುತ್ತೇವೆ’ ಎನ್ನುತ್ತಾರೆ.