

ಬೆಂಗಳೂರು: ‘ಬರೀತಿದ್ದೀನಿ, ಬರೀತಿದ್ದೀನಿ, ಬರೀತಿದ್ದೀನಿ ...’ ಕಳೆದ ನಾಲ್ಕು ತಿಂಗಳಿನಿಂದ ಏನು ಮಾಡುತ್ತಿದ್ದೀರಿ ಎಂಬ ಪ್ರಶ್ನೆಯನ್ನು ರಕ್ಷಿತ್ ಶೆಟ್ಟಿ ಅವರಿಗೆ ಕೇಳಿದರೆ, ಬರುವ ಉತ್ತರ ಇದು.
ಲಾಕ್ಡೌನ್ ಸಮಯದಲ್ಲಿ ಕೂತು ಸಾಕಷ್ಟು ಬರೆದಿದ್ದಾರಂತೆ ರಕ್ಷಿತ್. ಅವೆಲ್ಲ ಒಂದು ಹಂತಕ್ಕೆ ಬಂದಿರುವುದರಿಂದ, ಮುಂದಿನ ದಿನಗಳಲ್ಲಿ ಗ್ಯಾಪ್ ಇಲ್ಲದೆ ಚಿತ್ರೀಕರಣ ಮಾಡಬಹುದು ಎಂಬುದು ಅವರ ಯೋಚನೆ. ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿರುವ ಅವರು, ‘ಸಾಮಾನ್ಯವಾಗಿ ಒಂದು ಚಿತ್ರದಿಂದ ಇನ್ನೊಂದು ಚಿತ್ರಕ್ಕೆ, ಬರವಣಿಗೆಗೆ ಒಂದು ಗ್ಯಾಪ್ ಇರುತ್ತಿತ್ತು. ಈಗ ಒಂದೇ ಸಮ ಸಮಯ ಸಿಕ್ಕಿರುವುದರಿಂದ ಒಂದಿಷ್ಟು ಬರವಣಿಗೆ ಮುಗಿಸಿದ್ದೇನೆ. ‘ಪುಣ್ಯಕೋಟಿ’ಯ ಬಹುತೇಕ ಕೆಲಸ ಮುಗಿದಿದೆ. ಸ್ವಲ್ಪ ಬ್ರೇಕ್ ಬೇಕಿತ್ತು. ಆ ಬ್ರೇಕ್ನಲ್ಲೇ ಇನ್ನೊಂದು ಕಥೆ ಬರೆದಿಟ್ಟುಕೊಂಡೆ. 10 ದಿನಗಳಲ್ಲಿ ಆ ಕೆಲಸ ಮುಗಿಯುತ್ತದೆ. ಆ ನಂತರ ಪುನಃ ‘ಪುಣ್ಯಕೋಟಿ’ ಕೈಗೆತ್ತಿಕೊಂಡು ಅದನ್ನು ಮುಗಿಸುತ್ತೇನೆ. ಮುಂದೆ ತೆಗೆದುಕೊಳ್ಳುವ ಬ್ರೇಕ್ನ ಈಗಲೇ ತೆಗೆದುಕೊಂಡಿದ್ದೇನೆ. ಮುಂದೇನಿದ್ದರೂ ಸತತ ಚಿತ್ರೀಕರಣ’ ಎನ್ನುತ್ತಾರೆ.
ಕರೊನಾ ಹಾವಳಿ ಕಡಿಮೆಯಾದ ಮೇಲೆ ಮೊದಲು ‘777 ಚಾರ್ಲಿ’ ಚಿತ್ರೀಕರಣ ಮುಗಿಸುತ್ತಾರಂತೆ ರಕ್ಷಿತ್. ಆ ನಂತರ ಹೇಮಂತ್ ರಾವ್ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’. ಅದು ಮುಗಿದ ಮೇಲೆ ರಾಹುಲ್ ನಿರ್ದೇಶನದ ‘ರಿಚ್ಚಿ’. ಇದೆಲ್ಲ ಮುಗಿದ ಮೇಲೆ ರಕ್ಷಿತ್, ‘ಪುಣ್ಯಕೋಟಿ’ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಅಂದಹಾಗೆ, ರಕ್ಷಿತ್ ಚಿತ್ರರಂಗಕ್ಕೆ ಬಂದು 10 ವರ್ಷಗಳಾಗಿವೆ. ಅವರು ನಟಿಸಿದ ಮೊದಲ ಚಿತ್ರ ‘ನಮ್ ಏರಿಯಾಲ್ ಒಂದಿನ’ ಬಿಡುಗಡೆಯಾಗಿ ಗುರುವಾರಕ್ಕೆ 10 ವರ್ಷಗಳಾಗಿವೆ. ಈ ಸಂದರ್ಭದಲ್ಲಿ ರಕ್ಷಿತ್ ಜತೆಗೆ ಕೆಲಸ ಮಾಡಿದವರು, ಹಿತೈಷಿಗಳು, ಅಭಿಮಾನಿಗಳು ... ಸೋಷಿಯಲ್ ಮೀಡಿಯಾದಲ್ಲಿ ಶುಭ ಕೋರಿದ್ದಾರೆ. ಈ ಪಯಣ ತಮಗೆ ಹೊಸ ಹುಮ್ಮಸ್ಸು ನೀಡಿದೆ ಎನ್ನುತ್ತಾರೆ ರಕ್ಷಿತ್. ‘ನಾಲ್ಕು ತಿಂಗಳ ಈ ಗ್ಯಾಪ್ನಿಂದ ಹೊಸ ಹುಮ್ಮಸ್ಸು ಬಂದಿದೆ. ಇಲ್ಲಿಯವರೆಗೂ ಒಂದು ಹಂತ. ಇನ್ನು ಮುಂದಿನದು ಇನ್ನೊಂದು ಹಂತ. ಆಗ ನನಗೆ ಯಾವುದೇ ಅನುಭವವಿರಲಿಲ್ಲ. ಈಗ 10 ವರ್ಷಗಳ ಅನುಭವ ನನ್ನ ಜತೆಗಿದೆ. ನನ್ನ ದೃಷ್ಟಿಕೋನ ಸಾಕಷ್ಟು ಬದಲಾಗಿದೆ. ಈ ಸಮಯದಲ್ಲಿ ಸಾಕಷ್ಟು ಕಲಿತಿದ್ದೇನೆ. ಜನ ನನ್ನನ್ನು ಸೋಲು, ಗೆಲುವಿನಿಂದ ತುಲನೆ ಮಾಡುತ್ತಾರೆ. ಆದರೆ, ಈ ಸೋಲು, ಗೆಲುವು ಎಲ್ಲವೂ ಒಂದು ಅದ್ಭುತ ಪಯಣವೇ’ ಎಂಬುದು ರಕ್ಷಿತ್ ಅಭಿಪ್ರಾಯ.
ಈ ವರ್ಷ ಚಾರ್ಲಿ ಬಿಡುಗಡೆಯಾಗುತ್ತದಾ?
ಇನ್ನು, ತಮ್ಮ ಮುಂದಿನ ಚಿತ್ರ ‘777 ಚಾರ್ಲಿ’ ಬಗ್ಗೆ ಮಾತನಾಡುವ ಅವರು, ‘ಹಿಮಾಚಲ ಪ್ರದೇಶದಲ್ಲಿ 20 ದಿನಗಳ ಚಿತ್ರೀಕರಣ ಆಗಬೇಕಿದೆ. ಅದಕ್ಕೆ ಅನುಮತಿ ಬೇಕು. ಅನುಮತಿ ಸಿಕ್ಕ ನಂತರ ಚಿತ್ರೀಕರಣ. ಇಲ್ಲಿಯುವರೆಗೂ ಆಗಿರುವ ಚಿತ್ರೀಕರಣದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಹ ಮುಗಿದಿವೆ. ಬಾಕಿ ಇರುವ ಚಿತ್ರೀಕರಣ ಮುಗಿಸಿದ ಮೇಲಷ್ಟೇ, ಬಿಡುಗಡೆಯ ಬಗ್ಗೆ ಸ್ಪಷ್ಟತೆ ಸಿಗಲಿದೆ’ ಎನ್ನುತ್ತಾರೆ ರಕ್ಷಿತ್.