

ವಿಜಯವಾಣಿ ಸುದ್ದಿಜಾಲ ಬೆಂಗಳೂರು
"ರಾಣ' ಚಿತ್ರದ ಮೂಲಕ ವಿಲನ್ ಪಾತ್ರದಲ್ಲಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟ ರಾಘವೇಂದ್ರ ಹೊಂಡದಕೇರಿ, ಸಿನಿಮಾಗಳಲ್ಲಿ ರಘು, ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಮ್ಯೂಟಂಟ್ ರಘು ಎಂದೇ ಪರಿಚಿತರು. 6.4 ಅಡಿ ಎತ್ತರ, 125 ಕೆಜಿ, ಆಜಾನಬಾಹು ರಘು ಈಗಾಗಲೇ "ಕ್ರಾಂತಿ', "ಗರಡಿ', "ಕಾಟೇರ' ಚಿತ್ರಗಳಲ್ಲಿ ಖಳನಾಯಕನಾಗಿ ಮಿಂಚಿದ್ದು, ಸದ್ಯ "ಕೆಡಿ', "ವೃಷಭ', "ಮುಧೋಳ್', "ಬರ್ಮ', "ಕಾಂತಾರ: ಚಾಪ್ಟರ್ 1' ಮತ್ತು "ಸ್ಟೋರಿ ಆಫ್ ಹಸ್ತಿನಾಪುರ' ಚಿತ್ರಗಳ ರಿಲೀಸ್ಗೆ ಎದುರು ನೋಡುತ್ತಿದ್ದಾರೆ. ಅದರಲ್ಲೂ ಮೋಹನ್ ಲಾಲ್ ನಾಯಕನಾಗಿರುವ, "ಪೊಗರು' ನಿರ್ದೇಶಕ ನಂದಕಿಶೋರ್ ಆ್ಯಕ್ಷನ್-ಕಟ್ ಹೇಳಿರುವ "ವೃಷಭ'ದಲ್ಲಿ ರಘು ಪಾತ್ರ ವಿಶೇಷವಾಗಿದೆ.
ಹಾಲಿವುಡ್ ಪಾತ್ರಗಳನ್ನೂ ಮೀರಿಸುವಷ್ಟು ನೈಜವಾಗಿರುವ ವಿಭಿನ್ನ ಮೇಕಪ್ನಲ್ಲಿ ಕಾಣಿಸಿಕೊಂಡಿರುವ ಅವರು, "ಮೈಸೂರಿನಲ್ಲಿ 12 ದಿನಗಳ ಶೂಟಿಂಗ್ನಲ್ಲಿ ಭಾಗಿಯಾದೆ. ಪ್ರತಿದಿನ ಆರೇಳು ತಾಸು ಮೇಕಪ್ಗೇ ಬೇಕಾಗುತ್ತಿತ್ತು. ಸುಮಾರು 15 ವರ್ಷಗಳ ಕಾಲ ಆ್ಯನಿಮೇಷನ್ ಕ್ಷೇತ್ರದಲ್ಲಿ ಕೆಲಸ ಮಾಡಿ ಅನುಭವವಿದ್ದ ಕಾರಣ, ಮೇಕಪ್ ಬಳಿಕ ನಾನೇ ಡೀಟೇಲಿಂಗ್ ಮಾಡಿಕೊಳ್ಳುತ್ತಿದ್ದೆ. ಹೀಗಾಗಿ ನನ್ನ ಲುಕ್ ಅಷ್ಟು ನೈಜವಾಗಿ ಮೂಡಿಬಂದಿದೆ. ಪಾತ್ರದ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ನನ್ನಲ್ಲೂ ನಿರೀಕ್ಷೆ ಹೆಚ್ಚಿಸಿದೆ' ಎಂದು ಹೇಳಿಕೊಳ್ಳುತ್ತಾರೆ.
ಕನ್ನಡದಲ್ಲಿ ಸಾಲು ಸಾಲು ಚಿತ್ರಗಳಲ್ಲಿ ವಿಲನ್ ಪಾತ್ರಗಳಲ್ಲಿ ಮಿಂಚುತ್ತಿರುವ ರು, ಅದರ ನಡುವೆಯೇ ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. "ಅರುಳ್ನಿಧಿ ನಾಯಕನಾಗಿರುವ, "ಕೊಂಬನ್', "ವಿರುಮಾನ್' ಖ್ಯಾತಿಯ ಮುತ್ತಯ್ಯ ನಿರ್ದೇಶಿಸಿರುವ "ರ್ಯಾಂಬೋ' ಚಿತ್ರದಲ್ಲಿ ಒಂದೊಳ್ಳೆ ಪಾತ್ರದಲ್ಲಿ ನಟಿಸಿದ್ದೇನೆ. ಕೆಲವೇ ದಿನಗಳಲ್ಲಿ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ. ಜತೆಗೆ "ಕೆಡಿ', "ಕಾಂತಾರ 1', "ವೃಷಭ' ಚಿತ್ರಗಳೂ ಇದೇ ವರ್ಷ ರಿಲೀಸ್ ಆಗಲಿರುವ ಕಾರಣ 2025 ನನ್ನ ಪಾಲಿಗೆ ಸ್ವಲ್ಪ ಚೆನ್ನಾಗಿದೆ' ಎಂದು ಸಂತಸ ವ್ಯಕ್ತಪಡಿಸುತ್ತಾರೆ ರಘು.
ಆ್ಯನಿಮೇಷನ್ ಕಲಾವಿದನಾಗಿ 15 ವರ್ಷ ಅನುಭವವಿರುವ ರಘು ಹಾಲಿವುಡ್ನ ಹಿಟ್ "ಪೆಂಗ್ವಿನ್ಸ್', "ಮಡಗಾಸ್ಕರ್', "ಹೌ ಟು ಟ್ರೇನ್ ಯುವರ್ ಡ್ರಾಗನ್' ಸೇರಿ ಹಲವು ಆ್ಯನಿಮೇಟೆಡ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಜತೆಗೆ ಬಾಡಿ ಬಿಲ್ಡಿಂಗ್, ಸ್ಟ್ರಾಂಗ್ ಮ್ಯಾನ್, ಪವರ್ ಲಿಫ್ಟಿಂಗ್ನಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗಿಯಾಗಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದು, ಕ್ರೀಡಾರತ್ನ ಪ್ರಶಸ್ತಿಯೂ ಅವರಿಗೆ ದೊರೆಕಿದೆ. ಹಾಗೇ ವಿಶ್ವಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ವೇಟ್ ಲಿಫ್ಟಿಂಗ್ ತರಬೇತಿ ನೀಡಿರುವ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ನಟನೆಯ ಜತೆಗೆ ಜಿಮ್ ಟ್ರೇನರ್ ಆಗಿರುವ ರಘು ಚಂದನ್ ಶೆಟ್ಟಿ, ವಿಕ್ರಂ ರವಿಚಂದ್ರನ್, ನಮ್ರತಾ ಗೌಡ ಸೇರಿ ಹಲವರಿಗೆ ತರಬೇತಿ ನೀಡಿದ್ದಾರೆ.