ಕೃಷಿ ಹಿನ್ನೆಲೆಯಲ್ಲೊಂದು ಹಾರರ್​ ಸಿನಿಮಾ ; ‘ಕಬಂಧ‘ದಲ್ಲಿ ಅಂಥದ್ದೇನಿದೆ?

1
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಕನ್ನಡದ "ಪುಟ್ಟಗೌರಿ ಮದುವೆ', "ಗೃಹಲಕ್ಷ್ಮಿ', ತಮಿಳಿನಲ್ಲಿ "ಚಿನ್ನತೆರೆ ಸಿನಿಮಾ' ಸೀರಿಯಲ್​ಗಳಲ್ಲಿ ನಟಿಸಿರುವ, "ವಿಜಯಾನಂದ', "ದ್ವೈತ‘, "ಕ್ರಾಂತಿ', "ಮುಗುಳುನಗೆ', "ಬುಗುರಿ', "ದಾದಾ ಈಸ್​ ಬ್ಯಾಕ್​', "ಡಿಕೆ ಬೋಸ್​', "ದೇವರು ಬೇಕಾಗಿದ್ದಾರೆ' ಸೇರಿ ಹಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿರುವ ಖ್ಯಾತಿ ನಟ ಪ್ರಸಾದ್​ ವಸಿಷ್ಠಗೆ ಸಲ್ಲುತ್ತದೆ. ಇದೀಗ ಅವರು "ಕಬಂಧ' ಮೂಲಕ ಮೊದಲ ಬಾರಿಗೆ ನಾಯಕನಾಗಿದ್ದಾರೆ. "ನೀರು ಕಳ್ಳರು' ಮತ್ತು ಲಂಡನ್​ ಫಿಲಂ ಫೆಸ್ಟಿವಲ್​ಗೆ ಆಯ್ಕೆಯಾಗಿ "ಧೂತ' ಚಿತ್ರಗಳನ್ನು ನಿರ್ದೇಶಿಸಿರುವ ಸತ್ಯನಾಥ್​ "ಕಬಂಧ'ಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಇದೊಂದು ಹಾರರ್​ ಥ್ರಿಲ್ಲರ್​ ಜಾನರ್​ ಚಿತ್ರವಾಗಿದ್ದು, ಅದನ್ನು ಮನರಂಜನಾತ್ಮಕವಾಗಿ ಜನರ ಮುಂದಿಡುವ ಪ್ರಯತ್ನ ಚಿತ್ರತಂಡದ್ದು. ಅದಕ್ಕೆ ತಕ್ಕಂತೆ ಈಗಾಗಲೇ "ಕಬಂಧ' ಟ್ರೇಲರ್​ ರಿಲೀಸ್​ ಆಗಿದ್ದು, ಕುತೂಹಲ ಮೂಡಿಸುವಂತಿದೆ. ಚಿತ್ರಕ್ಕೆ "ನಂಗಾಗಿದ್ದೆ… ನಿಂಗಾಗುತ್ತೆ…' ಎಂಬ ಅಡಿಬರಹವಿದೆ.

ಎರಡು ಶೇಡ್​ಗಳ ಪಾತ್ರ
ನಾಯಕ ಪ್ರಸಾದ್​ ವಸಿಷ್ಠ ಈ ಚಿತ್ರದಲ್ಲಿ ಎರಡು ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. "ಮುಗ್ಧ, ದುರ್ಬಲ ಹುಡುಗ. ಆದರೆ ಒಂದು ದಿನ ಒಂದು ಸಂದರ್ಭ ಬಂದಾಗ ಆತ ಸಂಪೂರ್ಣವಾಗಿ ಬದಲಾಗುತ್ತಾನೆ. ಗಟ್ಟಿ ನಿರ್ಧಾರ ಮಾಡಿ, ಮುನ್ನುಗ್ಗುತ್ತಾನೆ. ಕಥೆಯ ಮುಖಾಂತರ ನಾಯಕನಾಗುತ್ತಾನೆ. ಮೊದಲರ್ಧ ನೆಗಟಿವ್​ ಇರುವ ಪಾತ್ರಗಳು ದ್ವಿತಿಯಾರ್ಧದಲ್ಲಿ ಪಾಸಿಟಿವ್​ ಆಗುತ್ತವೆ. ಹಾಗೇ ಮೊದರ್ಲಧ ಪಾಸಿಟಿವ್​ ಅನ್ನಿಸುವ ಪಾತ್ರಗಳು ದ್ವೀತಿಯಾರ್ಧದಲ್ಲಿ ನೆಗಟವಿ ಆಗುತ್ತವೆ. ಅದು ಹೇಗೆ ಅನ್ನೋದನ್ನ ಚಿತ್ರದಲ್ಲಿ ನೋಡಿದರೆ ಚಂದ' ಎಂದು ಮಾಹಿತಿ ನೀಡುತ್ತಾರೆ ಪ್ರಸಾದ್​. ವಿಶೇಷ ಅಂದರೆ ಈ ಚಿತ್ರದ ಟ್ರೇಲರ್​ ನೋಡಿಯೇ ಪ್ರಸಾದ್​ಗೆ ನಾಲ್ಕೈದು ಹೊಸ ಸಿನಿಮಾಗಳ ಆರ್​ ಬಂದಿದೆಯಂತೆ. "ಐದು ಕಥೆಗಳನ್ನು ಕೇಳಿದ್ದೇನೆ. ಎಲ್ಲವೂ ನಾಯಕನ ಪಾತ್ರಗಳೇ. ಅವುಗಳಲ್ಲಿ ಒಂದು ತುಂಬ ಇಂಟರೆಸ್ಟಿಂಗ್​ ಅನ್ನಿಸಿ, ಒಪ್ಪಿಕೊಂಡಿದ್ದೇನೆ. ಕೆಲವೇ ದಿನಗಳಲ್ಲಿ ಹೊಸ ಸಿನಿಮಾ ಘೋಷಣೆಯಾಗಲಿದೆ' ಎಂದು ಸಂತಸ ಹಂಚಿಕೊಳ್ಳುತ್ತಾರೆ.

ವಿಷಯವೇ ವಿಶೇಷತೆ
"ಕಬಂಧ' ಚಿತ್ರತಂಡ ಕಥೆಯ ಬಗ್ಗೆ ಎಲ್ಲಿಯೂ ಗುಟ್ಟುಬಿಟ್ಟುಕೊಟ್ಟಿಲ್ಲ. "ಇದೊಂದು ಹಾಲಿವುಡ್​ನ ಹಾರರ್​ ಫಾರ್ಮ್ಯಾಟ್​​ ಸಿನಿಮಾ' ಎನ್ನುವ ಪ್ರಸಾದ್​, "ಸಿನಿಮಾ ಶುರುವಾದ ಬಳಿಕ ಟೆಂಪೋ ಬಿಲ್ಡ್​ ಆಗುತ್​ ಆಗುತ್ತಾ ಸಾಗುತ್ತದೆ. ಕೃಷಿ ಹಿನ್ನೆಲೆಯಲ್ಲಿ ನಡೆಯುವ ಕಥೆ. ಇದು ಪ್ರತಿಯೊಬ್ಬರೂ ನೋಡಲೇಬೇಕಾದ ವಿಷಯವಿರುವ ಸಿನಿಮಾ. ಸೂಕ್ಷ್ಮ ವಿಚಾರವನ್ನು ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ. ದೇವರಾಯನದುರ್ಗದ ಕಾಡು, ತುಮಕೂರು ಮತ್ತು ಬೆಂಗಳೂರಿನಲ್ಲಿ 55 ದಿನಗಳ ಒಂದೇ ಶೆಡ್ಯೂಲ್​ನಲ್ಲಿ ಶೂಟಿಂಗ್​ ನಡೆಸಿದ್ದೇವೆ. ತುಂಬ ಕುತೂಹಲಕಾರಿಯಾಗಿ ಸಿನಿಮಾ ಮೂಡಿಬಂದಿದೆ' ಎಂದು ಹೇಳಿಕೊಳ್ಳುತ್ತಾರೆ. ಚಿತ್ರದಲ್ಲಿ ಪ್ರಸಾದ್​ ವಸಿಷ್ಠಗೆ ಪ್ರಿಯಾಂಕಾ ಮಳಲಿ ನಾಯಕಿಯಾಗಿದ್ದು, ಕಿಶೋರ್​, ಅವಿನಾಶ್​, ಪ್ರಶಾಂತ್​ ಸಿದ್ದಿ, ಛಾಯಶ್ರೀ, ನಿಹಾಲ್​, ವಂದನ, ವಚನ ಮುಖ್ಯ ಭೂಮಿಕೆಯಲ್ಲಿದ್ದಾರೆ. ಉಳಿದಂತೆ ಚಿತ್ರಕ್ಕೆ ರಘೋತ್ತಮ ಮತ್ತು ಶ್ರೇಯಸ್​ ರಾವ್​ ಸಂಗೀತ, ಸತ್ಯಜಿತ್​ ಸಿದ್ಧಕಟ್ಟೆ ಸಂಕಲನ, ವಿಷ್ಣುಪ್ರಸಾದ್ ಛಾಯಾಗ್ರಹಣ ಮತ್ತು ಸಾಯಿತೇಜ ಹಿನ್ನೆಲೆ ಸಂಗೀತವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net