

ಬೆಂಗಳೂರು: ಈ ಬಾರಿ ಕರೊನಾದಿಂದ ಹಲವು ನಟರ ಹುಟ್ಟುಹಬ್ಬದ ಸಂಭ್ರಮ ಇಲ್ಲವಾಗಿದೆ. ಈ ಸಾಲಿಗೆ ಪ್ರಜ್ವಲ್ ದೇವರಾಜ್ ಸಹ ಸೇರಿಕೊಂಡಿದ್ದಾರೆ. ಶನಿವಾರ ಪ್ರಜ್ವಲ್ ತಮ್ಮ ಹುಟ್ಟುಹಬ್ಬವನ್ನು ಹೆಚ್ಚು ಸಂಭ್ರಮ ಮತ್ತು ಅಭಿಮಾನಿಗಳ ಅನುಪಸ್ಥಿತಿಯ ನಡುವೆಯೇ ಆಚರಿಸಿಕೊಂಡಿದ್ದಾರೆ.
ಕಳೆದ ಬಾರಿ ಪ್ರಜ್ವಲ್ ಹುಟ್ಟುಹಬ್ಬಕ್ಕೆ ಉತ್ತರ ಕರ್ನಾಟಕದಲ್ಲಿ ಶಾಲೆ ದತ್ತು ಪಡೆಯಲಾಗಿತ್ತು. ವಿದ್ಯಾರ್ಥಿಗಳಿಗೆ ಶಿಕ್ಷಣದ ಸಹಾಯ ಮಾಡಲಾಗಿತ್ತು. ಈ ಬಾರಿ, ಹುಟ್ಟುಹಬ್ಬದ ಪ್ರಯುಕ್ತ ‘ಇನ್ಸ್ಪೆಕ್ಟರ್ ವಿಕ್ರಂ’ ಚಿತ್ರತಂಡದ ಜತೆಗೆ ಸೇರಿ ಪೊಲೀಸರಿಗೆ 200 ಪಿ.ಪಿ.ಇ ಕಿಟ್ಗಳನ್ನು ನೀಡಿದ್ದಾರೆ ಪ್ರಜ್ವಲ್. ಶುಕ್ರವಾರ ಬೆಂಗಳೂರು ದಕ್ಷಿಣ ಡಿಸಿಪಿ ರೋಹಿಣಿ ಅವರನ್ನು ಭೇಟಿ ಮಾಡಿ, ಕಿಟ್ಗಳನ್ನು ಹಸ್ತಾಂತರಿಸಿದರು. ದಕ್ಷಿಣ ವಿಭಾಗದಲ್ಲಿ ಬರುವ 20 ಪೊಲೀಸ್ ಠಾಣೆಗಳ ಸುಮಾರು 200 ಸಿಬ್ಬಂದಿಗೆ ಈ ಕಿಟ್ ಹಂಚಲಾಗುತ್ತದೆ.
‘ವೀರಂ’ ಫೋಟೋ ಶೂಟ್: ಈ ಮಧ್ಯೆ, ಪ್ರಜ್ವಲ್ ಇತ್ತೀಚೆಗೆ ತಮ್ಮ ಹೊಸ ಚಿತ್ರ ‘ವೀರಂ’ನ ಫೋಟೋಶೂಟ್ನಲ್ಲಿ ಭಾಗವಹಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ಚಿತ್ರದ ಚಿತ್ರೀಕರಣ ಮಾರ್ಚ್ನಲ್ಲಿ ಪ್ರಾರಂಭವಾಗಬೇಕಿತ್ತು. ಇನ್ನು ಚಿತ್ರದ ಮುಹೂರ್ತಕ್ಕೆ ಕೆಲವೇ ದಿನಗಳಿವೆ ಎನ್ನುವಾಗ ಚಿತ್ರದ ಲಾಕ್ಡೌನ್ ಘೋಷಣೆಯಾಗಿದ್ದರಿಂದ, ಚಿತ್ರ ಅಲ್ಲಿಗೇ ನಿಂತಿದೆ. ಇದೀಗ ಚಿತ್ರೀಕರಣ ಚಟುವಟಿಕೆಗಳಿಗೆ ಅನುಮತಿ ಸಿಕ್ಕ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಫೋಟೋಶೂಟ್ ಮಾಡಿಸಲಾಗಿದೆ. ಚಿತ್ರದ ಛಾಯಾಗ್ರಾಹಕ ಲವಿತ್ ಅವರೇ ಈ ಫೋಟೋಶೂಟ್ ಮಾಡಿದ್ದಾರೆ.