

ಹೈದರಾಬಾದ್: ಮುತ್ತಿನ ನಗರಿ ಹೈದರಾಬಾದ್ನಲ್ಲಿ ಅಕ್ರಮ ಕಟ್ಟಡಗಳ ವಿರುದ್ಧ ತೆಲಂಗಾಣ ಸರ್ಕಾರ ಸಮರ ಸಾರಿದೆ. ಅಕ್ರಮವಾಗಿ ನಿರ್ಮಿಸಿದ ಕಟ್ಟಡಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಳ್ಳಲು ಹೈದರಾಬಾದ್ ವಿಪತ್ತು ನಿರ್ವಹಣೆ ಮತ್ತು ಆಸ್ತಿ ಸಂರಕ್ಷಣಾ ಸಂಸ್ಥೆ (ಹೈಡ್ರಾ) ಅನ್ನು ಮುಖ್ಯಮಂತ್ರಿ ರೇವಂತ್ ರೆಡ್ಡಿ ಸ್ಥಾಪಿಸಿದ್ದಾರೆ.
ಹೈಡ್ರಾ ಸಂಸ್ಥೆ ಈಗಾಗಲೇ ತನ್ನ ಕಾರ್ಯಾಚರಣೆ ಆರಂಭಿಸಿದ್ದು, ಮೂರು ದಿನಗಳ ಹಿಂದೆ ಅಂದರೆ, ಶನಿವಾರ (ಆ.24) ಹೈಡ್ರಾ ಅಧಿಕಾರಿಗಳು ಟಾಲಿವುಡ್ ಹೀರೋ ಅಕ್ಕಿನೇನಿ ನಾಗಾರ್ಜುನ ಅವರಿಗೆ ಸಂಬಂಧಿಸಿದ ಎನ್ ಕನ್ವೆನ್ಷನ್ ಕಟ್ಟಡವನ್ನೇ ಕೆಡವಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಗಾರ್ಜುನ, ನಾನು ಯಾವುದೇ ಅಕ್ರಮ ಎಸಗಿಲ್ಲ. ಅನುಮತಿ ಪಡೆದೇ ನಿರ್ಮಾಣ ಮಾಡಿದ್ದೆ. ಆದರೆ, ಅಧಿಕಾರಿಗಳು ಕಟ್ಟಡವನ್ನು ಕೆಡವಿದ್ದಾರೆ ಎಂದು ಅಸಮಧಾನ ಹೊರಹಾಕಿದ್ದಾರೆ. ನಾಗಾರ್ಜುನ್ ಕೂಡ ಈ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಕುರಿತು ನ್ಯಾಯಾಲಯ ಮಧ್ಯಂತರ ಆದೇಶ ನೀಡಿ, ಕಾರ್ಯಾಚರಣೆ ನಿಲ್ಲಿಸಲು ಹೇಳಿದೆ. ಕಳೆದ ಮೂರು ದಿನಗಳಿಂದ ಎನ್ ಕನ್ವೆನ್ಷನ್ಗೆ ಸಂಬಂಧಿಸಿದ ಸುದ್ದಿಗಳು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ನಗರದ ಅತ್ಯಂತ ದುಬಾರಿ ಪ್ರದೇಶವಾದ ಮಾದಾಪುರದಲ್ಲಿ ಈ ಎನ್ ಕನ್ವೆನ್ಷನ್ ಕಟ್ಟದ ಇತ್ತು. ಮದುವೆ, ಬರ್ತ್ಡೇ ಪಾರ್ಟಿ, ಗೆಟ್ ಟುಗೆದರ್ ಫಂಕ್ಷನ್, ಸಿನಿಮಾ ಪ್ರಿ-ರಿಲೀಸ್ ಕಾರ್ಯಕ್ರಮಗಳಿಗೆ ಇಲ್ಲಿ ಬುಕ್ ಮಾಡಲಾಗುತ್ತಿತ್ತು. ಅತ್ಯಂತ ದುಬಾರಿ ಪ್ರದೇಶದಲ್ಲಿ ಇರುವುದರಿಂದ ಎನ್ ಕನ್ವೆನ್ಷನ್ ಬಾಡಿಗೆಯೂ ಕೂಡ ಅದೇ ಮಟ್ಟದಲ್ಲಿತ್ತು ಎನ್ನಲಾಗಿದೆ. ಹಾಗೆ ನೋಡಿದರೆ ಒಂದೇ ದಿನಕ್ಕೆ ಲಕ್ಷಗಟ್ಟಲೆ ಬಾಡಿಗೆ ವಸೂಲಿ ಮಾಡುತ್ತಿದ್ದರು.
ನಗರದ ಅನೇಕ ದೊಡ್ಡ ಕೈಗಾರಿಕೋದ್ಯಮಿಗಳು, ಚಿತ್ರರಂಗದ ಗಣ್ಯರು ಮತ್ತು ರಾಜಕಾರಣಿಗಳು ಎನ್ ಕನ್ವೆನ್ಷನ್ ಸೆಂಟರ್ನಲ್ಲಿ ಯಾವುದೇ ಆಚರಣೆ ಮಾಡಲು ಉತ್ಸುಕರಾಗಿದ್ದರು. ಏಕೆಂದರೆ, ಎನ್ ಕನ್ವೆನ್ಷನ್ ಪಕ್ಕದಲ್ಲೇ ಸುಂದರವಾದ ಕೊಳವೂ ಇದೆ. ಹೀಗಾಗಿ ಇದು ಅತಿಥಿಗಳನ್ನು ಆಕರ್ಷಿಸುತ್ತದೆ. ನಗರ ಪ್ರದೇಶದಲ್ಲಿ ಮಧ್ಯದಲ್ಲಿ ಇರುವುದರಿಂದ ವಿಳಾಸ ಪತ್ತೆಗೂ ಸುಲಭ. ಹೀಗಾಗಿ ಈ ಎನ್ ಕನ್ವೆನ್ಷನ್ಗೆ ಭಾರಿ ಬೇಡಿಕೆ ಇತ್ತು.
ಎನ್ ಕನ್ವೆನ್ಷನ್ನಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿ ಕುಳಿತು ಸಮಾರಂಭ ವೀಕ್ಷಿಸಲು ಸೌಲಭ್ಯವಿತ್ತು. ಇದು 27 ಸಾವಿರ ಚದರ ಅಡಿ ವಿಸ್ತೀರ್ಣದೊಂದಿಗೆ ಅತ್ಯಂತ ವಿಶಾಲವಾದ ಆವರಣವನ್ನು ಹೊಂದಿದೆ. ಇಲ್ಲಿ ಕಾಲಕಾಲಕ್ಕೆ ಸಿನಿಮಾ ಕಾರ್ಯಕ್ರಮಗಳೂ ನಡೆಯುತ್ತಿದ್ದವು ಮತ್ತು ಸುತ್ತಮುತ್ತಲಿನ ಐಟಿ ಕಂಪನಿಗಳಿಗೆ ಸಂಬಂಧಿಸಿದ ವಿದೇಶಿ ಪ್ರತಿನಿಧಿಗಳ ಸಭೆಗಳು ಮತ್ತು ವಾರ್ಷಿಕ ವರ್ಷಾಚರಣೆಗಳೂ ಇಲ್ಲಿ ನಡೆಯುತ್ತಿದ್ದವು. ಎನ್ ಕನ್ವೆನ್ಷನ್ ಅನ್ನು ಸುಮಾರು 14 ವರ್ಷಗಳ ಹಿಂದೆ ಪ್ರಾರಂಭಿಸಲಾಯಿತು. ಇದರ ಬಾಡಿಗೆಯ ವಿಚಾರಕ್ಕೆ ಬಂದರೆ ಒಂದ ದಿನಕ್ಕೆ 5 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ ಎನ್ನಲಾಗಿದೆ. ಈವೆಂಟ್ ಅನ್ನು ಅವಲಂಬಿಸಿ ಬಾಡಿಗೆಯ ಮೊತ್ತವೂ ಬದಲಾಗುತ್ತಿತ್ತು ಎಂದು ಹೇಳಲಾಗಿದೆ. (ಏಜೆನ್ಸೀಸ್)