ಸಿಕ್ಕಾಪಟ್ಟೆ ಖ್ಯಾತಿ, 5 ಮದ್ವೆ... ಒಂದು ಕಾಲದಲ್ಲಿ ಮಿಂಚಿದ ನಟನಿಗೆ ಕೊನೆಯಲ್ಲಿ ವಾಟರ್​ ಬಾಟಲ್ ಕೊಳ್ಳಲು ಹಣವಿರಲಿಲ್ಲ! Actor Life Story

Actor Life Story
Published on

Actor Life Story : ಆತ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಆಗಿದ್ದ. ಅಷ್ಟೇ ಅಲ್ಲ, ಡ್ಯಾನ್ಸರ್​ ಹಾಗೂ ಮಾಡೆಲ್ ಕೂಡ ಆಗಿದ್ದ. ಆದರೆ, ಆತನನ್ನು ಆಕರ್ಷಿಸಿದ್ದು ಮಾತ್ರ ನಟನೆ. 300ಕ್ಕೂ ಅಧಿಕ ಸಿನಿಮಾಗಳನ್ನು ಆತ ಮಾಡಿದ. ಹಿಂದಿ, ತೆಲುಗು ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಖಳನಾಯಕತ್ವದ ಖದರ್​ ಹೆಚ್ಚಿಸಿದ್ದ. ಬೆಳ್ಳಿ ಪರದೆಯ ಮೇಲೆ ಅಪ್ರತಿಮ ಕಲಾವಿದನಾಗಿ ಮಿಂಚಿದ. ಆದರೆ, ನಿಜ ಜೀವನದಲ್ಲಿ ಆತ ಒಂಟಿತನದಿಂದ ಹೋರಾಡಿ, ಕೊನೆಗೆ ಬಡತನದಲ್ಲೇ ಕೊನೆಯುಸಿರೆಳೆದ. ಇದು ನಟ ಮಹೇಶ್ ಆನಂದ್ ಅವರ ದುರಂತ ಕತೆ.

ಮಹೇಶ್​ ಆನಂದ್​, 1982ರಲ್ಲಿ ತೆರೆಕಂಡ ಸನಮ್ ತೇರಿ ಕಸಮ್ ಚಿತ್ರದಲ್ಲಿ ಹಿನ್ನೆಲೆ ಡ್ಯಾನ್ಸರ್​ ಆಗಿ ಕೆಲಸ ಶುರು ಮಾಡಿದರು. ಎರಡು ವರ್ಷಗಳ ಬಳಿಕ ಕಮಲ್ ಹಾಸನ್ ನಟನೆಯ 'ಕರಿಷ್ಮಾ' ಚಿತ್ರದ ಮೂಲಕ ನಟನಾಗಿ ಬಡ್ತಿ ಪಡೆದರು. ಸಸ್ತಿ ದುಲ್ಹನ್ ಮಹೇಂಗ ದುಲ್ಹ ಚಿತ್ರದ ಮೂಲಕ ನಾಯಕರಾದರು. ಆದರೆ, ಯಶಸ್ಸು ಸಿಗಲಿಲ್ಲ. ಬಳಿಕ ಖಳನಾಯಕನಾಗಿ ಚಿತ್ರರಂಗದಲ್ಲಿ ನೆಲೆಸಿದರು.

ಬಾಲಿವುಡ್‌ನಲ್ಲಿ ಖಡಕ್​ ಖಳನಾಯಕನಾಗಿ ಹೆಸರುವಾಸಿಯಾದ ಮಹೇಶ್ ಆನಂದ್, ಕನ್ನಡದಲ್ಲಿ ಚೆಲುವ ಸಿನಿಮಾದಲ್ಲಿ ನಟಿಸಿದರು. ಕನ್ನಡದಲ್ಲಿ ನಟಿಸಿದ್ದು ಕೇವಲ ಒಂದು ಸಿನಿಮಾ ಮಾತ್ರ. ಆದರೆ, ಹಿಂದಿ ಮತ್ತು ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಬಹುತೇಕ ಸಿನಿಮಾಗಳಲ್ಲಿ ಖಳನಾಯಕನಾಗಿ ಮಹೇಶ್​ ಆನಂದ್​ ಮಿಂಚಿದರು.

Mahesh Anand 1

ಐದು ಮದುವೆ

ಬೆಳ್ಳಿ ಪರದೆಯಿಂದ ಮಹೇಶ್​ ಆನಂದ್​ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕರು ಕೂಡ ತಮ್ಮ ವೈವಾಹಿಕ ಜೀವನದಲ್ಲಿ ವಿಫಲರಾಗುತ್ತಲೇ ಇದ್ದರು. ಮೊದಲು ಬರ್ಕಾ ರಾಯ್ ಅವರನ್ನು ವಿವಾಹವಾದರು ಮತ್ತು ಅವರಿಂದ ವಿಚ್ಛೇದನ ಪಡೆದರು. 1987 ರಲ್ಲಿ ಮಿಸ್ ಇಂಡಿಯಾ ಇಂಟರ್ನ್ಯಾಷನಲ್ ಎರಿಕಾ ಡಿ'ಸೋಜಾ ಅವರನ್ನು ವಿವಾಹವಾದರು. ಆದರೆ ಈ ಸಂಬಂಧವೂ ಹೆಚ್ಚು ಕಾಲ ಉಳಿಯಲಿಲ್ಲ. ಎರಿಕಾ ಜೊತೆಗೆ ವಿಚ್ಛೇದನ ಪಡೆದುಕೊಂಡ ಬಳಿಕ 1992ರಲ್ಲಿ ಮಧು ಮಲ್ಹೋತ್ರಾ ಅವರನ್ನು ವಿವಾಹವಾದರು. ಮೂರನೇ ಮದುವೆಯೂ ಕೇವಲ ಮೂರು ವರ್ಷಗಳ ಕಾಲ ನಡೆಯಿತು. ಬಳಿಕ ನಟಿ ಉಷಾ ಬಚ್ಚನ್ ಅವರನ್ನು ವಿವಾಹವಾದರು. ಎರಡು ವರ್ಷಗಳ ನಂತರ (2000-2002) ಬೇರ್ಪಟ್ಟರು.

ದಾಂಪತ್ಯ ಸಮಸ್ಯೆಗಳು ಮಹೇಶ್ ಅವರ ವೃತ್ತಿಜೀವನದ ಮೇಲೂ ಪರಿಣಾಮ ಬೀರಿತು. 2005ರ ನಂತರ, ಅವರಿಗೆ ಯಾವುದೇ ಚಲನಚಿತ್ರ ಅವಕಾಶಗಳು ಸಿಗಲಿಲ್ಲ. 2019ರಲ್ಲಿ ರಂಗೀಲಾ ರಾಜ ಎಂಬ ಒಂದೇ ಒಂದು ಚಿತ್ರವನ್ನು ಮಾಡಿದರು. ಇದು ಮಹೇಶ್​ ಅವರು ಕೊನೆಯ ಚಿತ್ರವಾಗಿತ್ತು. ತಮ್ಮ ವೈವಾಹಿಕ ಜೀವನದಲ್ಲಿ ನಾಲ್ಕು ಬಾರಿ ವಿಫಲರಾಗಿದ್ದ ಮಹೇಶ್, 2015ರಲ್ಲಿ ರಷ್ಯಾದ ಹುಡುಗಿ ಲಾನಾ ಅವರನ್ನು ಐದನೇ ಬಾರಿಗೆ ವಿವಾಹವಾದರು. ಆದರೆ, ನಂತರದಲ್ಲಿ ಲಾನಾ ಮಹೇಶ್​ ಅವರನ್ನು ತೊರೆದರು.

Mahesh Anand 2

ನೂರಾರು ಸಿನಿಮಾಗಳಲ್ಲಿ ನಟಿಸಿದ ಮಹೇಶ್ ಸುಮಾರು 18 ವರ್ಷಗಳ ಕಾಲ ಬಡತನದಲ್ಲಿ ಬದುಕಿದರು. ಇದನ್ನು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲೇ ಬಹಿರಂಗಪಡಿಸಿದರು. ಎಲ್ಲರೂ ನನ್ನನ್ನು ಕುಡುಕ ಎಂದು ಹೇಳುತ್ತಾರೆ. ನನಗೆ ಯಾರೂ ಇಲ್ಲ. ನನ್ನ ಮಲಸಹೋದರ ನನಗೆ 6 ಕೋಟಿ ರೂಪಾಯಿಗಳನ್ನು ವಂಚಿಸಿದ. ನಾನು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ ಈಗ ನನ್ನ ಬಳಿ ನೀರಿನ ಬಾಟಲಿಯನ್ನು ಖರೀದಿಸಲು ಸಹ ಹಣವಿಲ್ಲ. ಈ ಜಗತ್ತಿನಲ್ಲಿ ನನಗೆ ಒಬ್ಬ ಸ್ನೇಹಿತನೂ ಇಲ್ಲದಿರುವುದು ದುಃಖಕರವಾಗಿದೆ ಎಂದು ಮಹೇಶ್​ ಬರೆದುಕೊಂಡಿದ್ದರು. ಆ ಸಮಯದಲ್ಲಿ ಈ ಪೋಸ್ಟ್​ ವೈರಲ್​ ಆಗಿತ್ತು.

2019, ಫೆಬ್ರವರಿ 9ರಂದು ಮಹೇಶ್ ಅವರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಮೂರು ದಿನಗಳ ಕಾಲ ಅವರು ಫೋನ್ ಎತ್ತದಿದ್ದಾಗ ಅವರ ಸಹೋದರಿಗೆ ಅನುಮಾನ ಬಂತು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದಾಗ, ತಕ್ಷಣ ಅವರ ಮನೆಗೆ ಹೋಗಿ ಪರಿಶೀಲಿಸಿದಾಗ ನಟ ಮಹೇಸ್​ ಸೋಫಾದಲ್ಲಿ ಮೃತಪಟ್ಟಿರುವುದು ಕಂಡುಬಂದಿತು. ಅವರ ಪಕ್ಕದಲ್ಲಿ ಔಷಧಿ ಬಾಟಲಿಗಳು ಸಹ ಇದ್ದವು. ಅವರು ಸತ್ತು ಮೂರು ದಿನಗಳಾಗಿದ್ದವು. ಮಹೇಶ್​ ಅವರ ಸಾವಿನ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net