

ಬೆಂಗಳೂರು: ಹಿಂದಿಯ ‘ಸಿಯಾ ಕೆ ರಾಮ್ ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು ಕನ್ನಡದ ನಟ ಜೆಕೆ. ಈ ಧಾರಾವಾಹಿಯಲ್ಲಿ ಅವರದ್ದು ರಾವಣನ ಪಾತ್ರ. ಈಗ ಮತ್ತೊಮ್ಮೆ ಹಿಂದಿ ಕಿರುತೆರೆಯಲ್ಲಿ ಘರ್ಜಿಸುವುದಕ್ಕೆ ಜೆಕೆ ತಯಾರಾಗಿದ್ದಾರೆ. ಸೋನಿ ಸಬ್ ಟಿವಿಯಲ್ಲಿ ಆಗಸ್ಟ್ 22ರಿಂದ ಪ್ರಾರಂಭವಾಗಲಿರುವ ‘ಅಲಿಬಾಬ - ದಾಸ್ತಾನ್-ಎ-ಕಾಬುಲ್’ನಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
‘ಅಲಿಬಾಬ - ದಾಸ್ತಾನ್-ಎ-ಕಾಬುಲ್’, ಅಲಿಬಾಬ ಮತ್ತು 40 ಕಳ್ಳರ ಕಥೆಯನ್ನು ಆಧರಿಸಿದ ಧಾರಾವಾಹಿ. ಈ ಧಾರಾವಾಹಿಯಲ್ಲಿ ಜೆಕೆ, ಇಬ್ಲಿಸ್ ಎಂಬ ಜೋರರ ಗುಂಪಿನ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‘ಕೆಲವು ಪಾತ್ರಗಳು ನಮಗಾಗಿಯೇ ಸೃಷ್ಟಿಯಾಗಿರುತ್ತವೆ ಮತ್ತು ಆ ಪಾತ್ರಗಳು ನಮ್ಮ ನಿಜವಾದ ಸಾಮರ್ಥ್ಯವನ್ನು ತೆರೆದಿಡುತ್ತವೆ. ಇಬ್ಲಿಸ್ನಂತ ಪವರ್ಫುಲ್ ಪಾತ್ರ ಸಿಕ್ಕಿರುವ ಸಂತೋಷದಲ್ಲಿ ...’ ಎಂದು ಜೆಕೆ ಬರೆದುಕೊಂಡಿದ್ದಾರೆ.
ಈಗಾಗಲೇ ಈ ಧಾರಾವಾಹಿಯ ಟೀಸರ್ ಪ್ರಸಾರವಾಗುತ್ತಿದ್ದು, ಒಂದು ಹಂತದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಮುಂಬೈನಲ್ಲಿ ಇನ್ನೊಂದು ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ. ಧಾರಾವಾಹಿಗಳಲ್ಲದೆ ಒಂದೆರೆಡು ಹಿಂದಿ ಚಿತ್ರಗಳಲ್ಲೂ ಜೆಕೆ ನಟಿಸಿದ್ದಾರೆ. ‘ಪುಷ್ಪಾ ಐ ಹೇಟ್ ಟಿಯರ್ಸ್’ ಅಲ್ಲದೆ, ಮಿಥಾಲಿ ರಾಜ್ ಬಯೋಪಿಕ್ ಆದ ‘ಶಭಾಷ್ ಮಿಥು’ ಚಿತ್ರದಲ್ಲೂ ಅವರೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.