

ಬೆಂಗಳೂರು: 1995ರಲ್ಲಿ ತೆರೆ ಕಂಡ ಉಪೇಂದ್ರ ನಿರ್ದೇಶನದ ಶಿವರಾಜಕುಮಾರ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಓಂ’ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದವರು ಹರೀಶ್ ಆಚಾರ್ಯ. ‘ಓಂ’ನಲ್ಲಿನ ‘ಡಾನ್ ರಾಯ್’ ಪಾತ್ರದ ಮೂಲಕ ಹರೀಶ್ ರಾಯ್ ಎಂದೇ ಗುರುತಿಸಿಕೊಂಡ ಇವರು, ಸದ್ಯ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇದೀಗ ಇದೇ ಹರೀಶ್ ರಾಯ್ ಓಂ ಸಿನಿಮಾ 25ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ನಿಮಿತ್ತ ಆ ಚಿತ್ರದ ಜತೆಗಿನ ನಂಟನ್ನು ನೆನಪು ಮಾಡಿಕೊಂಡಿದ್ದಾರೆ. ಚಂದನವನದಲ್ಲಿ ಸ್ಥಾನಕೊಟ್ಟ ಚಿತ್ರದ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ.
‘ಶಿವಣ್ಣ ಅವರ ಸಿನಿಮಾಗಳನ್ನು ಕ್ಯೂನಲ್ಲಿ ನಿಂತು ನೋಡುತ್ತಿದ್ದೆವು. ಅಭಿಮಾನದ ಜತೆಗೆ ಭಯವೂ ಇತ್ತು. ಸಡನ್ ಆಗಿ ಅವರ ಸಿನಿಮಾದಲ್ಲಿ ನಟಿಸುವ ಅವಕಾಶವೂ ನನಗೆ ಸಿಕ್ಕಿತ್ತು. ಭಯದಲ್ಲೇ ಶೂಟಿಂಗ್ನಲ್ಲಿ ಭಾಗವಹಿಸಿದ್ದೆ. ನಮ್ಮಲ್ಲಿನ ಭಯವನ್ನು ಗಮನಿಸಿದ ಶಿವಣ್ಣ, ನನ್ನ ಬಳಿ ಬಂದು, ಹೆಗಲ ಮೇಲೆ ಕೈ ಹಾಕಿ ಮಾತನಾಡಿಸಿದರು. ಆವತ್ತು ಅವರು ಹೇಳಿದ ಒಂದು ಮಾತು ಇಂದಿಗೂ ನನಗೆ ನೆನಪಿದೆ’ ಎನ್ನುವ ಹರೀಶ್ ಆ ಮಾತನ್ನು ಹೀಗೆ ಹೇಳುತ್ತಾರೆ.
‘ನಾನು ‘ಓಂ’ ಚಿತ್ರದಲ್ಲಿ ‘ಡಾನ್ ರಾಯ್’ ಪಾತ್ರ ಮಾಡಿದೆ. ಅಲ್ಲಿಯವರೆಗೆ ಹರೀಶ್ ಆಗಿದ್ದ ನಾನು, ಶಿವಣ್ಣ ಅವರ ಮಾತು ಕೇಳಿ ಹರೀಶ್ ಜತೆ ರಾಯ್ ಸೇರಿಸಿಕೊಂಡೆ. ರಾಯ್ ಸೇರಿಸಿಕೊಂಡು ನೋಡು.. ನಿನ್ನ ಕರಿಯರೇ ಬದಲಾಗುತ್ತದೆ ಎಂದಿದ್ದರು. ಅವರ ಮಾತಿನಂತೆ ಅದೇ ಹೆಸರಿನಿಂದ ನಾನು ಗುರುತಿಸಿಕೊಂಡೆ. ಮುಂದೆ ನಡೆದಿದ್ದೆಲ್ಲವು ಇತಿಹಾಸ. ಈ ಸಿನಿಮಾ ಶೂಟಿಂಗ್ ಮುಗಿದ ಬಳಿಕ ಉಡುಪಿಗೆ ಹೋಗುವ ಪ್ಲಾನ್ನಲ್ಲಿದ್ದೆ. ಆಗ ಮತ್ತೆ ಶಿವಣ್ಣ ಜತೆ ಸಮರ ಸಿನಿಮಾದ ಅವಕಾಶ ಸಿಕ್ಕಿತ್ತು. ಇಂಡಸ್ಟ್ರಿಯಲ್ಲಿ ನನ್ನ ಗಾಡ್ಫಾದರ್ ಶಿವಣ್ಣ ಎಂದೇ ನಾನು ಹೇಳುತ್ತೇನೆ’ಎನ್ನುತ್ತಾರೆ ಹರೀಶ್ ರಾಯ್.