ತ್ಯಾಗರಾಜರ ಹೊಸ ಪಯಣ: ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಚಿತ್ರದಲ್ಲಿ ಒಂದಾದ ಗಣೇಶ್-ರಮೇಶ್

ram 2 (1)
Published on

ಬೆಂಗಳೂರು: ‘ಕೃಷ್ಣಂ ಪ್ರಣಯ ಸಖಿ’ ಯಶಸ್ಸಿನ ಬಳಿಕ ನಟ ಗಣೇಶ್ ಅಭಿನಯಿಸಲಿರುವ ಮುಂದಿನ ಸಿನಿಮಾ ೋಷಣೆಯಾಗಿದೆ. ಈ ಚಿತ್ರದಲ್ಲಿ ಗಣೇಶ್ ಜತೆಗೆ ನಟ ರಮೇಶ್ ಅರವಿಂದ್ ನಟಿಸುತ್ತಿರುವುದು ವಿಶೇಷ. ಚಿತ್ರಕ್ಕೆ ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಎಂದು ಹೆಸರಿಡಲಾಗಿದೆ. ‘ಸುಂದರಾಂಗ ಜಾಣ’ ಬಳಿಕ ಗಣೇಶ್-ರಮೇಶ್ ಜೋಡಿ ಮತ್ತೊಮ್ಮೆ ಒಂದಾಗಿದೆ. ‘ಯುವರ್ಸ್ ಸಿನ್ಸಿಯರ್ಲಿ ರಾಮ್’ಗೆ ಎ.ಆರ್.ವಿಖ್ಯಾತ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನ ಗೌಡನಪಾಳ್ಯದ ಶ್ರೀನಿವಾಸ್ ಚಿತ್ರಮಂದಿರದಲ್ಲಿ ಮುಹೂರ್ತ ನೆರವೇರಿಸಲಾಯಿತು. ನಟಿ, ನಿರೂಪಕಿ ಜಾನ್ವಿ ರಾಯಲ ಚಿತ್ರಕ್ಕೆ ಕ್ಲ್ಯಾಪ್ ಮಾಡಿದರೆ, ನಿರ್ದೇಶಕ ಸ್ವಾತಿ ವಿಖ್ಯಾತ್ ಕ್ಯಾಮರಾಕ್ಕೆ ಚಾಲನೆ ನೀಡಿದರು.

ನಟ ರಮೇಶ್ ಅರವಿಂದ್ ಚಿತ್ರದ ಕುರಿತು, ‘ಒಂಬತ್ತು ವರ್ಷಗಳಿಂದ ವಿಖ್ಯಾತ್ ಪರಿಚಯ ಇದೆ. ‘ಪುಷ್ಪಕ ವಿಮಾನ’ ಕಥೆ ಹೇಳಲು ಬಂದ ದಿನದಿಂದ ಇಂದಿನವರೆಗೂ ನೋಡಿಕೊಂಡು ಬರುತ್ತಿದ್ದೇನೆ. ಅವರಿಗೆ ಸೌಂದರ್ಯ ಪ್ರಜ್ಞೆ ತುಂಬ ಚೆನ್ನಾಗಿದೆ. ಅವರ ನಿರ್ಮಾಣದ ಚಿತ್ರಗಳು ಕೂಡ ಸೂಕ್ಷ್ಮ ಮನೋಭಾವ ಇರುತ್ತದೆ. ಇದೀಗ ನಿರ್ದೇಶಕರಾಗಿದ್ದು, ಇದು ಅವರ ಜತೆ ಮೊದಲ ಪಯಣ. ಗಣೇಶ್ ನನ್ನ ಕಾಂಬೋ ನಿಮಗೆ ಎಷ್ಟು ಖುಷಿ ಕೊಡುತ್ತದೆಯೋ. ನಮಗೂ ಅಷ್ಟೇ ಖುಷಿ ಕೊಡುತ್ತದೆ’ ಎಂದರು.

ನಟ ಗಣೇಶ್, ‘ಗೌರಿ-ಗಣೇಶ್ ಹಬ್ಬದ ದಿನ ರಾಮ್ ನೆನಪು ಮಾಡಿಕೊಂಡಿದ್ದೇವೆ. ಚಿತ್ರದ ಗ್ಲಿಂಪ್ಸ್‌ನಲ್ಲಿ ಇಬ್ಬರ ನಡುವಿನ ಸಂಬಂಧ ಬೇರೆ ರೀತಿಯ ಭಾವನೆ ನೀಡುವುದಲ್ಲದೇ, ಬೇರೆ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತದೆ. ಇದರ ನೂರಷ್ಟು ಸಿನಿಮಾದಲ್ಲಿ ಇರುತ್ತದೆ. ಪ್ರತಿ ದೃಶ್ಯ, ಚಿತ್ರದ ಕಥೆಯು ಅನುಭವ ಮಿಳಿತವಾಗಿದೆ’ ಎಂದರು. ಚಿತ್ರಕ್ಕೆ ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಜೆ.ಅನೂಪ್ ಸೀಳಿನ್ ಸಂಗೀತ, ಗುಣ ಕಲಾ ನಿರ್ದೇಶನ , ಪ್ರಶಾಂತ್ ರಾಜಪ್ಪ, ಯದುನಂದನ್ ಹಾಗೂ ಸಚಿನ್ ಸಂಭಾಷಣೆ ಚಿತ್ರಕ್ಕಿದೆ. ನಾಯಕಿ ಸೇರಿದಂತೆ ಉಳಿದ ಪಾತ್ರವರ್ಗವನ್ನು ಮುಂದಿನ ದಿನಗಳಲ್ಲಿ ಚಿತ್ರತಂಡ ಮಾಹಿತಿ ನೀಡಲಿದೆ.

ಯುದ್ಧ, ಸ್ನೇಹ, ಪ್ರೀತಿ:
‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಚಿತ್ರದ 3.14 ನಿಮಿಷದ ಟೀಸರ್ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಯುದ್ಧ, ಸ್ನೇಹ ಹಾಗೂ ಪ್ರೇಮ ವ್ಯಕ್ತವಾಗಿದೆ. ಮೊದಲು ಯುದ್ಧದ ಟ್ಯಾಂಕರ್‌ನಲ್ಲಿ ರಮೇಶ್-ಗಣೇಶ್ ಕಾಣಿಸಿಕೊಳ್ಳುತ್ತಾರೆ. ಬಳಿಕ ‘ಸ್ಟಾಪ್ ವಾರ್’ ಗಮನಸೆಳೆಯುತ್ತದೆ. ಇನ್ನು ಮಧುರ ಸ್ನೇಹ, ಪ್ರೀತಿ ವ್ಯಕ್ತವಾಗಿದೆ. ಈ ಮೂಲಕ ಟೀಸರ್ ಗಮನಸೆಳೆಯುತ್ತದೆ.


ಇದು ನಾಲ್ಕೈದು ವರ್ಷಗಳ ಕನಸಿನ ಹಾಗೂ ಬಿಗ್ ಬಜೆಟ್‌ನ ಪ್ರೊಜೆಕ್ಟ್ ಆಗಿದೆ. ಈ ಚಿತ್ರಕ್ಕೆ ಗಣೇಶ್-ರಮೇಶ್ ಅಭಿನಯಸಲೇಬೇಕು ಎಂದು ಮೊದಲಿಗೆ ನಿರ್ಧರಿಸಿದ್ದೆ. ಆ ಕಾರಣಕ್ಕೆ ಬಜೆಟ್‌ಗಾಗಿ ಕೆಲವು ಸಿನಿಮಾಗಳನ್ನು ನಿರ್ಮಿಸಿದೆ. ಇದೊಂದು ವಿಭಿನ್ನ ಸ್ಟೈಲ್‌ನ ಸಿನಿಮಾವಾಗಿದೆ. ಇಲ್ಲಿನ ಪಾತ್ರಗಳು, ಸ್ಥಳಗಳು ಎಲ್ಲವೂ ಕಥೆಯನ್ನು ಕಟ್ಟಿಕೊಡುತ್ತದೆ. ಈ ತಿಂಗಳಾಂತ್ಯದಿಂದ ಶೂಟಿಂಗ್ ಆರಂಭವಾಗಲಿದೆ.
ಎ.ಆರ್.ವಿಖ್ಯಾತ್, ನಿರ್ದೇಶಕ

ಮತ್ತೆ ಒಂದಾದ ಜೋಡಿ:
2016ರಲ್ಲಿ ತೆರೆಕಂಡಿದ್ದ ‘ಸುಂದರಾಂಗ ಜಾಣ’ ಸಿನಿಮಾವು ಗಣೇಶ್-ರಮೇಶ್ ಕಾಂಬಿನೇಶನ್‌ನಲ್ಲಿ ಮೂಡಿಬಂದಿದ್ದು, ಆದರೆ, ಇಲ್ಲಿ ಗಣೇಶ್ ನಾಯಕನಾಗಿದ್ದರೆ, ರಮೇಶ್ ಆ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದರು. ಎಂಟು ವರ್ಷಗಳ ಬಳಿಕ ಕನ್ನಡ ಚಿತ್ರರಂಗದ ತ್ಯಾಗರಾಜರು ಎಂದೇ ಖ್ಯಾತಿಯಾಗಿರುವ ಈ ಜೋಡಿ ಮತ್ತೆ ಒಂದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net