ಗಣಿ ಸಖತ್ ಸುನಿ ಚಮಕ್: ಸದ್ದಿಲ್ಲದೆ ಶೂಟಿಂಗ್​ಗೆ ಚಾಲನೆ

Chamak
Published on

ಬೆಂಗಳೂರು: ಇತ್ತೀಚೆಗಷ್ಟೇ ‘ಚಮಕ್’ ಜೋಡಿ ಸಿಂಪಲ್ ಸುನಿ ಮತ್ತು ‘ಗೋಲ್ಡನ್ ಸ್ಟಾರ್’ ಗಣೇಶ್ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾವೊಂದು ಶುರುವಾಗಲಿದೆ ಎಂಬ ಸುದ್ದಿ ಹರಿದಾಡಿತ್ತು. ಅದರಂತೆ ಆ ಚಿತ್ರಕ್ಕೀಗ ಶೀರ್ಷಿಕೆಯೂ ಫಿಕ್ಸ್ ಆಗಿದೆ. ಈ ಬಾರಿ ಇಬ್ಬರೂ ‘ಸಖತ್’ ಆಗಿ ಬರಲು ಸಿದ್ಧತೆ ನಡೆಸಿದ್ದಾರೆ. ಅಂದರೆ, ‘ಸಖತ್’ ಎಂಬ ಶೀರ್ಷಿಕೆಯನ್ನು ಸಿನಿಮಾಗೆ ಅಂತಿಮಗೊಳಿಸಲಾಗಿದೆ. ಅಷ್ಟೇ ಅಲ್ಲ ಸರಳವಾಗಿ ಮುಹೂರ್ತವನ್ನೂ ಮಾಡಿಕೊಂಡು ಶೂಟಿಂಗ್​ಗೂ ಚಾಲನೆ ನೀಡಲಾಗಿದೆ.

ಗಣೇಶ್ ಸದ್ಯ ಯೋಗರಾಜ್ ಭಟ್ ಅವರೊಂದಿಗೆ ಎರಡನೇ ಬಾರಿ ‘ಗಾಳಿಪಟ..’ ಹಾರಿಸುತ್ತಿದ್ದಾರೆ. ಕುದುರೆಮುಖ, ಬೆಂಗಳೂರು, ಮಡಿಕೇರಿ ಸುತ್ತಮುತ್ತ ‘ಗಾಳಿಪಟ 2’ ಶೂಟಿಂಗ್ ನಡೆಯುತ್ತಿದೆ. ಇತ್ತ ಸುನಿ, ಶರಣ್ ನಾಯಕತ್ವದ ‘ಅವತಾರ ಪುರುಷ’ ಸಿನಿಮಾದ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದು, ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿದ್ದಾರೆ. ಈ ಗ್ಯಾಪ್​ನಲ್ಲೇ ‘ಸಖತ್’ ಸೌಂಡು ಮಾಡುತ್ತಿದೆ. ಕಳೆದ ವರ್ಷ ಅಕ್ಟೋಬರ್ ವೇಳೆಯಲ್ಲಿಯೇ ‘ಚಮಕ್’ ಜೋಡಿಯಿಂದ ಮತ್ತೊಂದು ಸಿನಿಮಾ ಬರಲಿದೆ ಎಂಬ ಸುದ್ದಿ ಹರಿದಾಡಿತ್ತಾದರೂ, ಅಧಿಕೃತವಾಗಿ ಎಲ್ಲಿಯೂ ಘೋಷಣೆ ಆಗಿರಲಿಲ್ಲ. ಈಗ ಮುಹೂರ್ತವನ್ನೂ ಮುಗಿಸಿಕೊಂಡು, ಚಿತ್ರೀಕರಣಕ್ಕೂ ಚಾಲನೆ ದೊರಕಿದೆ. ಹಾಗಾದರೆ ಸಿನಿಮಾ ಕಥೆ ಏನು? ‘ಚಮಕ್’ನಲ್ಲಿ ಗಂಡ -ಹೆಂಡತಿಯ ಸಂಬಂಧವನ್ನು ಹಾಸ್ಯಮಯವಾಗಿ ಹೇಳಲಾಗಿತ್ತು. ಈಗ ‘ಸಖತ್’ನಲ್ಲಿ ಹೊಸ ರೀತಿಯ ಕಥೆ ಹೇಳಲು ಹೊರಟಿದ್ದಾರಂತೆ ಸುನಿ. ಶೀರ್ಷಿಕೆಗೆ ತಕ್ಕಂತೆ ಕಥೆ, ಸಖತ್ ಆಗಿರಲಿದೆ ಎಂಬುದು ಅವರ ಮಾತು.

ಈಗಾಗಲೇ ತೆಲುಗು-ತಮಿಳಿನಲ್ಲಿ ಗುರುತಿಸಿಕೊಂಡಿರುವ ಸುರಭಿ ‘ಸಖತ್’ ಚಿತ್ರಕ್ಕೆ ನಾಯಕಿಯಾಗಿ ಆಗಮಿಸಿದ್ದು, ಕನ್ನಡದಲ್ಲಿ ಇದು ಅವರ ಮೊದಲ ಸಿನಿಮಾ. ಇನ್ನುಳಿದಂತೆ ತಾರಾಗಣದಲ್ಲಿ ಯಾರೆಲ್ಲ ಇರಲಿದ್ದಾರೆ, ತಾಂತ್ರಿಕ ವರ್ಗದವರ ಬಗ್ಗೆ ಒಂದೊಂದೇ ಮಾಹಿತಿಯನ್ನು ಚಿತ್ರತಂಡ ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸಲಿದೆ. ‘ಭರಾಟೆ’ ಸಿನಿಮಾಕ್ಕೆ ಬಂಡವಾಳ ಹೂಡಿದ್ದ ಸುಪ್ರೀತ್, ‘ಸಖತ್’ಗೂ ನಿರ್ವಪಕರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net