

ನಟ ಗಣೇಶ್ ಬುಧವಾರದಂದು 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಸಂಭ್ರಮದ ನಡುವೆ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ. ಹಾಗಾಗಿ, ಈ ಬಾರಿ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ಈ ಮಧ್ಯೆ, ಸಿನಿಮಾ ತಂಡಗಳಿಂದ ವಿಶೇಷ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಗಣೇಶ್‌ಗೆ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿವೆ. ಹಾಗೆಯೇ ‘ಭರ್ಜರಿ’ ಚೇತನ್ ಜತೆ ಹೊಸ ಸಿನಿಮಾ ಘೋಷಣೆಯಾಗಿರುವುದು ವಿಶೇಷ.
ಕನ್ನಡದ ‘ತ್ಯಾಗರಾಜರು’ ಎಂದೇ ಖ್ಯಾತಿಯಾಗಿರುವ ಗಣೇಶ್ ಹಾಗೂ ರಮೇಶ್ ಅರವಿಂದ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಸಿನಿಮಾ ‘ಯುವರ್ಸ್ ಸಿನ್ಸಿಯರ್ಲಿ ರಾಮ್’. ಈ ಚಿತ್ರಕ್ಕೆ ‘ಮಾನ್ಸೂನ್ ರಾಗ’ ನಿರ್ಮಾಪಕ ಎ.ಆರ್.ವಿಖ್ಯಾತ್ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಇದೀಗ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ಗಣೇಶ್ ಆಂಜನೇಯ ಅವತಾರದಲ್ಲಿದ್ದಾರೆ. ಸೈಕಲ್‌ನ ಹಿಂದೆ ಕುಳಿತಿರುವ ಅವರು, ಕೈಯಲ್ಲಿ ಅಂಚೆ ಪತ್ರ ಹಿಡಿದಿದ್ದಾರೆ. ಹಿಂಭಾಗದಲ್ಲಿ ಕಾಶ್ಮೀರದ ಕಣಿವೆ ಸಾಲು, ಪೊಲೀಸ್ ಭದ್ರತೆ ಕಾಣಿಸುತ್ತದೆ. ಗಣೇಶ್ ಈ ವಿಭಿನ್ನ ಅವತಾರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಈ ವರ್ಷಾಂತ್ಯಕ್ಕೆ ಈ ಸಿನಿಮಾ ತೆರೆಗೆ ಬರಲಿದೆ.
ನೃತ್ಯ ನಿರ್ದೇಶಕ ಧನಂಜಯ ನಿರ್ದೇಶನದ ‘ಪಿನಾಕ’ ಚಿತ್ರವು ಮೊದಲಿನಿಂದಲೂ ಸದ್ದು ಮಾಡಿದೆ. ಬಿಗ್ ಬಜೆಟ್‌ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ನಟ ಗಣೇಶ್ ಮುಖ್ಯಭೂಮಿಕೆಯಲ್ಲಿದ್ದು, ಅವರ ಹೊಸ ಲುಕ್ ರಿವೀಲ್ ಆಗಿದೆ. ಕುದುರೆಯ ಸವಾರಿಯಲ್ಲಿರುವ ಗಣೇಶ್, ಕೈಯಲ್ಲಿ ಕತ್ತಿ ಹಿಡಿದು ವೀರಾವೇಶದಲ್ಲಿದ್ದಾರೆ. ಈ ಪೋಸ್ಟರ್ ನೋಡಿದ ಪ್ರೇಕ್ಷಕರು ಇಲ್ಲಿ ಗಣೇಶ್, ರಾಜ ಅಥವಾ ದಂಡನಾಯಕನ ಪಾತ್ರದಲ್ಲಿರಬಹುದು ಎಂದು ಊಹಿಸುತ್ತಿದ್ದಾರೆ. ನೆಲಮಂಗಲದ ಬಳಿ ನಿರ್ಮಿಸಲಾಗಿರುವ ಅದ್ದೂರಿ ಸೆಟ್‌ನಲ್ಲಿ ಈ ವಿಭಿನ್ನ ಕಥಾ ಹಂದರ ಚಿತ್ರೀಕರಣ ನಡೆಯುತ್ತಿದೆ.
ಕಳೆದ ಮಾರ್ಚ್‌ನಲ್ಲಿ ರಾಮನವಮಿಯಂದು ಗಣೇಶ್ ಹಾಗೂ ನಿರ್ದೇಶಕ ಅರಸು ಅಂತಾರೆ ಕಾಂಬಿನೇಷನ್‌ನ ಸಿನಿಮಾ ಮುಹೂರ್ತ ಕಂಡಿತ್ತು. ಆದರೆ, ಚಿತ್ರದ ಟೈಟಲ್ ರಿವೀಲ್ ಆಗಿರಲಿಲ್ಲ. ಇದೀಗ ಗಣೇಶ್ ಜನ್ಮದಿನದಂದೇ ಟೈಟಲ್ ಘೋಷಣೆ ಮಾಡಲಾಗಿದ್ದು, ‘ಡಿಜಾಂಗೋ ಕೃಷ್ಣಮೂರ್ತಿ’ ಎಂದು ಹೆಸರಿಡಲಾಗಿದೆ. ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡವು ಎರಡನೇ ಹಂತದ ಶೂಟಿಂಗ್ ಸದ್ಯದಲ್ಲಿ ಆರಂಭಿಸಲಿದೆ. ಇಲ್ಲಿ ಗಣೇಶ್‌ಗೆ ‘ಹನು-ಮಾನ್’ ನಾಯಕಿ ಅಮೃತ್ ಅಯ್ಯರ್ ಜೋಡಿಯಾಗಿದ್ದಾರೆ. ರಂಗಾಯಣ ರಘು, ರವಿಶಂಕರ್ ಗೌಡ, ಕಾಕ್ರೋಚ್ ಸುಧೀ ಕಲಾ ಬಳಗದಲ್ಲಿದ್ದಾರೆ.
ಗಣೇಶ್ ಜನ್ಮದಿನಕ್ಕೆ ಹೊಸ ಸಿನಿಮಾವೊಂದು ಘೋಷಣೆಯಾಗಿರುವುದು ವಿಶೇಷ. ‘ಭರ್ಜರಿ’, ‘ಜೇಮ್ಸ್’ ನಿರ್ದೇಶಕ ಚೇತನ್ ನಿರ್ದೇಶಿಸಲಿರುವ ಚಿತ್ರದಲ್ಲಿ ಗಣೇಶ್ ನಟಿಸಲಿದ್ದಾರೆ. ಸದ್ಯಕ್ಕೆ ಟೈಟಲ್ ರಿವೀಲ್ ಮಾಡಿಲ್ಲ. ರೊಮ್ಯಾಂಟಿಕ್ ಜತೆ ಜತೆಗೆ ವಿಶೇಷವಾಗಿ ಈ ಕಥೆಯನ್ನು ನಿರೂಪಿಸಲಾಗುತ್ತಂತೆ. ಮುನೇಗೌಡ ಹಾಗೂ ಶಿವು ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಸದ್ಯದಲ್ಲೇ ತಾರಾ ಹಾಗೂ ತಾಂತ್ರಿಕ ಬಳಗವನ್ನು ಘೋಷಣೆ ಮಾಡಲಿದೆ. ಈ ನಾಲ್ಕು ಸಿನಿಮಾಗಳ ಜತೆ ‘ಕೃಷ್ಣಂ ಪ್ರಣಯಂ ಸಖಿ’ ಯಶಸ್ಸಿನ ಬಳಿಕ ಶ್ರೀನಿವಾಸರಾಜು ಜತೆ ಗಣೇಶ್ ಒಂದಾಗಿದ್ದಾರೆ. ಹೊಸ ಪೋಸ್ಟರ್ ಮೂಲಕ ಹುಟ್ಟುಹಬ್ಬಕ್ಕೆ ತಂಡ ಶುಭ ಕೋರಿದೆ. ಹಾಗೆಯೇ ಗಣೇಶ್ ಪುತ್ರ ವಿಹಾನ್ ನಟಿಸುತ್ತಿರುವ ‘ಡಿ ಡಿ ಢಿಕ್ಕಿ’ ತಂಡದಿಂದಲೂ ಗಣಿಗೆ ಬರ್ತ್‌ಡೇ ವಿಶ್ ಮಾಡಲಾಗಿದೆ.