ಹುಡುಗರ ಡಿಪ್ರೆಷನ್​, ಕಾಮಿಡಿ ಇಂಪ್ರೆಷನ್​ಗಳ ಫ್ಯಾಂಟಸಿ ಫೈರ್​ಫ್ಲೈ

zxc
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಕೋಲಾರ ಮೂಲದ ಹುಡುಗ ವಂಶಿ ಚೊಚ್ಚಲ ಬಾರಿಗೆ ನಟಿಸಿ, ನಿರ್ದೇಶಿಸಿರುವ ಸಿನಿಮಾ ಫೈರ್​ಫ್ಲೈ. ನಟ ಶಿವರಾಜಕುಮಾರ್​ ಪುತ್ರಿ ನಿವೇದಿತಾ ನಿರ್ಮಾಣದ ಮೊದಲ ಚಿತ್ರವಿದು. ನ್ಯೂ ಏಜ್​ ಎಂಟರ್​ಟೇನಿಂಗ್​ ಡ್ರಾಮಾ ಜಾನರ್​ಗೆ ಸೇರುವ ಈ ಚಿತ್ರದಲ್ಲಿ ವಂಶಿ ಗಂಡು ಮಕ್ಕಳ ಖಿನ್ನತೆ ಮತ್ತು ಒಂಟಿತನದಂತಹ ಗಂಭೀರ ವಿಷಯಗಳನ್ನು ಹಾಸ್ಯದ ಲೇಪನದೊಂದಿಗೆ ಹೇಳಲು ಪ್ರಯತ್ನಿಸಿದ್ದಾರೆ.

"ಒಂಟಿತನ ಹುಡುಗರನ್ನು ಹೆಚ್ಚಾಗಿ ಕಾಡುತ್ತದೆ. ಗೆಳೆಯರು, ಕುಟುಂಬ, ಸಂಬಂಧಿಕರು ಎಲ್ಲ ಇದ್ದರೂ ಅವರಿಗೆ ಒಂಟಿತನ ಕಾಡುತ್ತಿರುತ್ತದೆ. ಮನೆಗೆ ಬಂದಾಗ ಜೀವನ ಮುಂದಕ್ಕೇ ಹೋಗುತ್ತಿಲ್ಲವಲ್ಲಾ ಅಂತನ್ನಿಸುತ್ತಿರುತ್ತದೆ. ಅಂದಹಾಗೆ, ಡಿಪ್ರೆಷನ್​ಗೆ ಕಾರಣವೇ ಬೇಕಿಲ್ಲ. ಅದನ್ನು ವಿಕ್ಕಿ ಎಂಬ ಪಾತ್ರ ಮತ್ತು ಆತನ ಜರ್ನಿಯ ಮೂಲಕ ಹೇಳುತ್ತಿದ್ದೇನೆ. ಡಿಪ್ರೆಷನ್​ ಶ್ರೀಮಂತರಿಗೆ ಮಾತ್ರ ಬರುತ್ತೆ ಅಂತ ಅಂದುಕೊಳ್ಳುವುದು ಸಾಮಾನ್ಯ. ಆದರೆ, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ವಿಕ್ಕಿ ಆಗಿರುತ್ತಾರೆ. ಆದರೆ, ಹೊರಗೆ ಹೇಳಿಕೊಳ್ಳುವುದಿಲ್ಲ. ಆ ಗೋಳಾಟವನ್ನೇ ಹಾಸ್ಯದ ಲೇಪನದೊಂದಿಗೆ ಹೇಳುವ ಪ್ರಯತ್ನ ಈ ಫೈರ್​ಫ್ಲೈ ಎಂದು ಮಾಹಿತಿ ನೀಡುತ್ತಾರೆ ವಂಶಿ. ಚಿತ್ರದಲ್ಲಿ ವಂಶಿಗೆ ರಚನಾ ಇಂದರ್​ ನಾಯಕಿಯಾಗಿದ್ದು ಅಚ್ಯುತ್​ ಕುಮಾರ್​, ಸುಧಾರಾಣಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಫೈರ್​ಫ್ಲೈ ಇದೇ 10ರಂದು ತೆರೆಗೆ ಬರಲಿದೆ.

ಅದೊಂದೇ ಚಾಲೆಂಜಿಂಗ್​...

ಗಂಭೀರ ವಿಷಯವನ್ನೂ ಮನರಂಜನಾತ್ಮಕವಾಗಿ ಹೇಳುವುದರ ಜತೆಗೆ ಫೈರ್​ಫ್ಲೈನಲ್ಲಿ ಒಂದು ಫ್ಯಾಂಟಸಿ ಪ್ರಪಂಚವನ್ನೇ ಸೃಷ್ಟಿಸಲಾಗಿದೆಯಂತೆ. "ಮಾಯಾಬಜಾರ್​', "ಪೆಂಟಗಾನ್​' ಸೇರಿ ಕೆಲ ಚಿತ್ರಗಳಲ್ಲಿ ನಿರ್ದೇಶನ ವಿಭಾಗದಲ್ಲಿ, "ಅವತಾರ ಪುರುಷ' ಜತೆ ಕೆಲ ಸಿನಿಮಾಗಳಲ್ಲಿ ನಟನಾಗಿಯೂ ಅನುಭವ ಪಡೆದಿರುವ ವಂಶಿ, "ನಾನು ನಿರ್ದೇಶನ ವಿಭಾಗದಲ್ಲಿ ಗಟ್ಟಿ ಇದ್ದೇನೆ. ಶೂಟಿಂಗ್​ಗೆ ಹೋಗುವ ಮುನ್ನವೇ ಪ್ರತಿ ಶಾಟ್​ ಹೀಗೆ ತೆಗೆಯಬೇಕು ಅಂತ ಸಿದ್ಧತೆ ಮಾಡಿಕೊಂಡಿದ್ದೆವು. ನಾನು ನಟನಾಗಿ ಮಾತ್ರ ಸೆಟ್​ಗೆ ಹೋಗುತ್ತಿದ್ದೆ. ಹೀಗಾಗಿ ಶೂಟಿಂಗ್​ ಸಮಯದಲ್ಲಿ ಚಾಲೆಂಜಿಂಗ್​ ಅಂತ ಅನ್ನಿಸಲಿಲ್ಲ. ಆದರೆ, ನಾನು ನಟಿಸಿದ ಬಳಿಕ ಕ್ಯಾಮರಾ ಹಿಂದೆ ಹೋಗಿ, ಈ ಟೇಕ್​ ಸೂಪರ್​ ಮುಂದಕ್ಕೆ ಹೋಗೋಣ ಅಂತ ನನಗೆ ನಾನೇ ಹೇಳಿಕೊಳ್ಳುವುದು ಕಷ್ಟ ಅನ್ನಿಸುತ್ತಿತ್ತು' ಎಂದು ನಗುತ್ತಾರೆ ವಂಶಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net