

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಉಪೇಂದ್ರ ನಟಿಸಿ, ನಿರ್ದೇಶಿಸಿರುವ ಬಹುನಿರೀತ "ಯುಐ' ಇದೇ ಶುಕ್ರವಾರ (ಡಿ. 20) ಬಿಡುಗಡೆಯಾಗುತ್ತಿದೆ. ಸದ್ಯ ಪ್ರಚಾರದಲ್ಲಿ ಬಿಜಿಯಿರುವ ಚಿತ್ರತಂಡ ಇತ್ತೀಚೆಗಷ್ಟೆ ಹೈದರಾಬಾದ್ನಲ್ಲಿ ಪ್ರಿ&ರಿಲೀಸ್ ಕಾರ್ಯಕ್ರಮ ಆಯೋಜಿಸಿತ್ತು. ಅದರ ಬೆನ್ನಲ್ಲೇ ಸೋಮವಾರ ಬೆಂಗಳೂರಿನಲ್ಲಿ ಸೋಮವಾರ (ಡಿ. 16) ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಂಗಳವಾರ ಚೆನ್ನೈ ಹಾಗೂ ಬುಧವಾರ ಮುಂಬೈನಲ್ಲಿ "ಯುಐ' ತಂಡ ಪ್ರಚಾರ ನಡೆಸಲಿದೆ. "ಉಪ್ಪಿ 2' ಬಳಿಕ ಒಂಬತ್ತು ವರ್ಷಗಳ ನಂತರ ಉಪೇಂದ್ರ ಮತ್ತೆ ಆ್ಯಕ್ಷನ್-ಕಟ್ ಹೇಳಿರುವ ಕಾರಣ "ಯುಐ' ಬಗ್ಗೆ ಕುತೂಹಲ ಹೆಚ್ಚಿದೆ. ಶಿವರಾಜಕುಮಾರ್, ವಿಜಯ ಕುಮಾರ್, ಡಾಲಿ ಧನಂಜಯ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಪ್ರಿ&ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಚಿತ್ರತಂಡಕ್ಕೆ ಶುಭಹಾರೈಸಿದರು.
ಶಿವರಾಜಕುಮಾರ್, ""ಓಂ' ಚಿತ್ರದ ಸಮಯದಲ್ಲೇ ಹೇಳಿದ್ದೆ ಮಣಿರತ್ನಂ ಅಂಥವರನ್ನೂ ಮೀರಿಸುತ್ತಾರೆ ಉಪೇಂದ್ರ ಅಂತ. ಉಪೇಂದ್ರ ಉತ್ತಮ ನಟ, ನಿರ್ದೇಶಕ ಮಾತ್ರವಲ್ಲ ಉತ್ತಮ ವ್ಯಕ್ತಿತ್ವವಿರುವವರು. ಡಿ. 24ರಂದು ನನಗೆ ಅಮೆರಿಕದಲ್ಲಿ ಸರ್ಜರಿ ಇದೆ. ಹೀಗಾಗಿ ಅಲ್ಲಿರುತ್ತೇನೆ. ಡಿ.20ರಂದು ಅಲ್ಲೇ ಸಿನಿಮಾ ನೋಡುತ್ತೇನೆ' ಎಂದು ಉಪೇಂದ್ರ ಮತ್ತು ತಂಡಕ್ಕೆ ಶುಭಹಾರೈಸಿದರು. ನಟ ವಿಜಯ ಕುಮಾರ್, "ನಿಮ್ಮನ್ನು ನೋಡಿ ಕಲಿತು ನಿರ್ದೇಶಕನಾದವನು ನಾನು. ಒಬ್ಬ ನಿರ್ದೇಶಕನಾಗಿ, ನಟನಾಗಿ, ಅಭಿಮಾನಿಯಾಗಿ "ಯುಐ'ಗಾಗಿ ಕಾಯುತ್ತಿದ್ದೇನೆ' ಎಂದರು. ನಟ ಡಾಲಿ ಧನಂಜಯ, ""ಯುಐ' ಸಿನಿಮಾ ಅನೌನ್ಸ್ ಆದಾಗ ಹಿಂದಿನ ವಿಷಯ ಇರಬಹುದು ಅಂದುಕೊಂಡೆ. "ಟ್ರೋಲ್' ಸಾಂಗ್ ಬಂದಾಗ ಈಗಿನ ಕಥೆ ಅಂದುಕೊಂಡೆ. ಈಗ "ವಾರ್ನರ್' ಟೀಸರ್ ನೋಡಿದರೆ ಇದು ಭವಿಷ್ಯದ ಕಥೆ ಅಂತನ್ನಿಸುತ್ತಿದೆ. ಆದರೆ, ಸಿನಿಮಾ ನೋಡಲು ಹೋದಾಗ ಜನರನ್ನು ಚಿವುಟಿ ಅರಿವು ಮೂಡಿಸುವಂತ ಏನೋ ಬೇರೆ ಇರುತ್ತದೆ ಅಂತ ಗೊತ್ತು' ಎಂದರು. ಉಪೇಂದ್ರಗೆ ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿದ್ದು, ರವಿಶಂಕರ್, ನಿಧಿ ಸುಬ್ಬಯ್ಯ, ಮೇದಿನಿ ಕೆಳಮನೆ, ಕಾಕ್ರೋಚ್ ಸುಧಿ, ನೀತು ಪ್ರಮುಖ ತಾರಾಗಣದಲ್ಲಿದ್ದಾರೆ. ಸೋಮವಾರದಿಂದ ಚಿತ್ರದ ಆನ್ಲೈನ್ ಬುಕ್ಕಿಂಗ್ ಪ್ರಾರಂಭವಾಗಿದ್ದು ಬಹುತೇಕ ಶೋಗಳು ಹೌಸ್ಫುಲ್ ಆಗಿವೆ.
ಯುಐ ಗುಟ್ಟೇನು?
ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿ "ಯುಐ' ಶೀರ್ಷಿಕೆಯ ಗುಟ್ಟು ಬಿಟ್ಟುಕೊಟ್ಟ ಉಪೇಂದ್ರ, "ಒಂದು ಹೆಸರಿಡಬಹುದಿತ್ತು. ನಾನು ಟೈಟಲ್ ಇಟ್ಟರೆ, ಅದು ಅಲ್ಲಿಗೆ ಮುಗಿದುಬಿಡುತ್ತದೆ. ಆದರೆ, "ಯುಐ'ನಂತೆ ಒಂದು ಸ್ಪೇಸ್ ಕೊಟ್ಟರೆ. ಅದಕ್ಕೆ ಹೆಸರುಗಳು ಬರುತ್ತವೆ. ಉಪೇಂದ್ರ ಇಂಟೆಲಿಜೆನ್ಸ್, ಯೂನಿವರ್ಸಲ್ ಇಂಟೆಲಿಜೆನ್ಸ್, ಇ ಲವ್ ಯೂ.. ಅಂತ ಎಷ್ಟೋ ಅರ್ಥಗಳನ್ನು ಹುಡುಕುತ್ತಾರೆ' ಎಂದರು.