

ಬೆಂಗಳೂರು: ಧನಂಜಯ್ ಅಭಿನಯದ ನಾಲ್ಕು ಚಿತ್ರಗಳು ಬಿಡುಗಡೆಯಾಗುವುದಕ್ಕಿದೆ. ‘ಹೊಯ್ಸಳ’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ‘ಪುಷ್ಪ - 2’ ಚಿತ್ರೀಕರಣ ಇನ್ನಷ್ಟೇ ಶುರುವಾಗಬೇಕಿದೆ. ಅವೆರಡೂ ಚಿತ್ರಗಳ ನಂತರ ಮುಂದೇನು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಧನಂಜಯ್, ‘ಉತ್ತರಕಾಂಡ’ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಮಂಗಳವಾರ ಅವರ ಹುಟ್ಟುಹಬ್ಬದ ಪ್ರಯುಕ್ತ ಅಧಿಕೃತ ಘೋಷಣೆಯಾಗಿದೆ.
ಕೆಲವು ದಿನಗಳ ಹಿಂದೆಯೇ ರೋಹಿತ್ ಪದಕಿ ನಿರ್ದೇಶನದಲ್ಲಿ ಕೆಆರ್ಜಿ ಸ್ಟುಡಿಯೋಸ್ನ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್, ‘ಉತ್ತಕಾಂಡ’ ಎಂಬ ಹೊಸ ಚಿತ್ರವನ್ನು ಘೋಷಿಸಿದ್ದರು. ಉತ್ತರ ಕರ್ನಾಟಕದ ಸೊಗಡಿನ ಈ ಚಿತ್ರದ ನಾಯಕ ಯಾರು ಎಂಬ ರಹಸ್ಯವನ್ನು ಮಾತ್ರ ಬಿಟ್ಟುಕೊಟ್ಟಿರಲಿಲ್ಲ. ಧನಂಜಯ್ ಆ ಚಿತ್ರದ ನಾಯಕನಾಗಿ ನಟಿಸುತ್ತಿರುವುದಷ್ಟೇ ಅಲ್ಲ, ಅವರ ಪೋಸ್ಟರ್ ಸಹ ಬಿಡುಗಡೆಯಾಗಿದೆ.
ಧನಂಜಯ್ ಮತ್ತು ಕೆಆರ್ಜಿ ಸ್ಟುಡಿಯೋಸ್ನ ಮೂರನೆಯ ಚಿತ್ರ ಎನ್ನುವುದು ವಿಶೇಷ. ಕಳೆದ ವರ್ಷ, ಈ ಕಾಂಬಿನೇಷನ್ನ ‘ರತ್ನನ್ ಪ್ರಪಂಚ’ ಬಿಡುಗಡೆಯಾಗಿತ್ತು. ಸದ್ಯ ‘ಹೊಯ್ಸಳ’ ಚಿತ್ರಕ್ಕಾಗಿ ಧನಂಜಯ್ ಮತ್ತು ಕೆಆರ್ಜಿ ಒಟ್ಟಾಗಿದೆ. ಅದು ಮುಗಿಯುವ ಮುನ್ನ ಇನ್ನೊಂದು ಹೊಸ ಚಿತ್ರ ಘೋಷಣೆಯಾಗಿದೆ. ‘ಉತ್ತರಕಾಂಡ’ ಘೋಷಣೆಯಾಗುವುದರ ಜತೆಗೆ, ಧನಂಜಯ್ ಹುಟ್ಟುಹಬ್ಬದ ಪ್ರಯುಕ್ತ ‘ಹೊಯ್ಸಳ’ ಮತ್ತು ‘ಮಾನ್ಸೂನ್ ರಾಗ’ ಚಿತ್ರತಂಡದಿಂದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ‘ಹೆಡ್ ಬುಷ್’ ಚಿತ್ರದಿಂದ ರೌಡಿಸಂ ಹಾಡು ಬಿಡುಗಡೆಯಾಗಿದೆ.
ವರ್ಷಕ್ಕೆ ಎರಡು ಚಿತ್ರ ನಿರ್ಮಾಣ: ಇನ್ನು, ಧನಂಜಯ ಅವರ ಡಾಲಿ ಪಿಕ್ಚರ್ಸ್ ಸಂಸ್ಥೆಯಿಂದ ಒಂದು ಮಹತ್ವದ ಘೋಷಣೆ ಹೊರಬಿದ್ದಿದೆ. ಇನ್ನು ಮುಂದೆ ಪ್ರತಿ ವರ್ಷ ಡಾಲಿ ಪಿಕ್ಚರ್ಸ್ ವತಿಯಿಂದ ಕನಿಷ್ಠ ಎರಡು ಸಿನಿಮಾಗಳನ್ನಾದರೂ ನಿರ್ಮಾಣ ಮಾಡುವುದಾಗಿ ಸಂಸ್ಥೆ ಘೋಷಿಸಿದ್ದು, ಇದರಲ್ಲಿ ಒಂದು ಚಿತ್ರವನ್ನು ಕೇವಲ ಹೊಸ ಪ್ರತಿಭೆಗಳಿಗೆ ಮೀಸಲಾಗುತ್ತದಂತೆ. ಅದಕ್ಕೆ ಕಾರಣವೂ ಇದೆ. ಧನಂಜಯ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬಂದವರು. ಅನೇಕ ಅಡೆತಡೆಗಳನ್ನು ದಾಟಿ ಗುರುತಿಸಿಕೊಂಡವರು. ಅದೇ ರೀತಿ ಕನಸು ಕಟ್ಟಿಕೊಂಡು ಬಂದವರಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಹೊಸ ಪ್ರತಿಭೆಗಳ ಜತೆಗೆ ಚಿತ್ರ ನಿರ್ಮಾಣ ಮಾಡುವುದಕ್ಕೆ ಧನಂಜಯ್ ಘೋಷಿಸಿದ್ದಾರೆ.