

ಕುಂದಾಪುರ: ಉಡುಪಿಯ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಗುರುವಾರ (ಜುಲೈ 25) ಭೇಟಿ ನೀಡಿ ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದರು. ಅಲ್ಲದೆ, ನವ ಚಂಡಿಕಾ ಯಾಗವನ್ನೂ ಮಾಡಿ, ಕೊಲೆ ಆರೋಪದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಪತಿ ದರ್ಶನ್ ಪರ ಪ್ರಾರ್ಥನೆ ಸಲ್ಲಿಸಿದರು. ಶುಕ್ರವಾರ ಬೆಳಗ್ಗೆ ವಿಜಯಲಕ್ಷ್ಮಿ ಅವರು ಕ್ಷೇತ್ರದ ಅರ್ಚಕರ ಮೂಲಕ ನಡೆದ ನವಚಂಡಿಕಾ ಯಾಗದ ಪೂರ್ಣಾಹುತಿಯಲ್ಲಿ ಭಾಗಿಯಾದರು.
ತನ್ನ ಪುತ್ರ ಹಾಗೂ ಸಂಬಂಧಿಗಳ ಜೊತೆ ಗುರುವಾರ ಕೊಲ್ಲೂರಿಗೆ ಆಗಮಿಸಿರುವ ವಿಜಯಲಕ್ಷ್ಮಿ ಅಲ್ಲಿನ ನರಸಿಂಹ ಅಡಿಗರ ಮುಂದಾಳತ್ವದಲ್ಲಿ ನವಚಂಡಿಕಾಯಾಗ ನಡೆಸಿದರು. ಚಂಡಿಕಾಯಾಗಕ್ಕೆ ಸುಬ್ರಹ್ಮಣ್ಯ ಅಡಿಗ ಸಂಕಲ್ಪ ಮಾಡಿಸಿದರು. ನಂತರ ದೇವಿ ಮೂಕಾಂಬಿಕೆಗೆ ಫಲಪುಷ್ಪ, ರೇಷ್ಮೆ ಸೀರೆಯನ್ನು ಸಲ್ಲಿಸಿದರು. ಬಳಿಕ ಸಕಲ ಸಂಕಲ್ಪಗಳನ್ನು ಮಾಡಿ ಬೆಂಗಳೂರಿಗೆ ಮರಳಿದರು.
ಏನಿದು ನವಚಂಡಿಕಾ ಹೋಮ?: ಇದು ಚಂಡಿ ದೇವಿಯನ್ನು ಆವಾಹನೆ ಮಾಡಲು ಮತ್ತು ಆಕೆಯ ದೈವಿಕ ಆಶೀರ್ವಾದವನ್ನು ಪಡೆಯಲು ಮಾಡುವ ಬಲವಾದ ಹೋಮವಾಗಿದೆ. ಈ ಚಂಡಿಕಾ ದೇವಿಯು ಮಹಾ ಸರಸ್ವತಿ, ಮಹಾಕಾಳಿ, ಮತ್ತು ಮಹಾಲಕ್ಷ್ಮಿ ಸರಸ್ವತಿಯ ರೂಪವಾಗಿದೆ. ಚಂಡಿ ಹೋಮದಿಂದಾಗಿ ಯಶಸ್ಸು, ಸಮೃದ್ಧಿ ಮತ್ತು ಬುದ್ಧಿವಂತಿಕೆ ಲಭಿಸುತ್ತದೆ. ಚಂಡಿಕಾದೇವಿಯು 18 ಕೈಗಳನ್ನು ಹೊಂದಿದ್ದು 18 ಬಗೆಯ ಆಯುಧಗಳನ್ನು ಹಿಡಿದಿರುತ್ತಾಳೆ. ಇದು ದುರ್ಗಾಸಪ್ತಶತಿಯ ಪಾರಾಯಣವಾಗಿದೆ. ಇದರಲ್ಲಿ 700 ಶ್ಲೋಕಗಳಿವೆ. ಪ್ರತಿಯೊಂದು ಶ್ಲೋಕವನ್ನು ಮಂತ್ರರೂಪಕವಾಗಿ ಚರುವಿನ ಮೂಲಕ ಮಾಡುವ ಯಜ್ಞವೇ ಚಂಡಿಕಾಯಾಗ. ಇದರ ಮೂಲಕ ಮಹಾದುರ್ಗಿಯರನ್ನು ಸ್ತೋತ್ರಭಾಗದಿಂದ ಆರಾಧಿಸಲಾಗುತ್ತದೆ. ದೇವಿಯು ಮಹಿಷಾಸುರ, ಶುಂಭ, ನಿಶುಂಭ, ಮಧುಕೈಟಭ, ರಕ್ತಬೀಜ, ಚಂಡಮುಂಡ, ರಕ್ತಬೀಜ, ಮಧುಕೈಟಭ ರಾಕ್ಷಸರನ್ನು ತ್ರಿಶಕ್ತಿಯ ರೂಪದಿಂದ ವದೆಗೈದು ಲೋಕ ಕಲ್ಯಾಣ ಮಾಡುತ್ತಾಳೆ ಎಂಬ ನಂಬಿಕೆ ಇದೆ.
ಏಕೆ ಮಾಡಿಸುತ್ತಾರೆ ಮತ್ತು ವಿಶೇಷತೆಗಳೇನು?: ಚಂಡಿಕಾಯಾಗದಿಂದ ನಕಾರಾತ್ಮಕ ಶಕ್ತಿಗಳು ದೂರವಾಗಿ ಸಕಾರಾತ್ಮಕ ಶಕ್ತಿ ಬರುತ್ತವೆ. ಶಾಪ, ಪೀಡೆಗಳು ಮಾತ್ರವಲ್ಲದೆ ಎಲ್ಲಾ ಬಗೆಯ ದುಷ್ಟ ಶಕ್ತಿಗಳು ದೂರವಾಗುತ್ತವೆ. ಮಾಟ, ಮಂತ್ರ, ವಶೀಕರಣ, ದುಷ್ಟಪೀಡೆ, ಅರಿಷ್ಟ, ಶತ್ರುಬಾಧೆ, ಗ್ರಹದೋಷ, ಜೀವ ಭಯ, ಮೃತ್ಯು ಭಯ ಇದ್ದವರು ದೇವಿಯ ಕೃಪೆಗೆ ಪಾತ್ರರಾಗಬೇಕೆನ್ನುವ ಇಚ್ಛೆಯಿದ್ದರೆ ಈ ಹೋಮವನ್ನ ಮಾಡಿಸಬಹುದು. ಶತ್ರು ಬಾಧೆ ನಿವಾರಣೆಯಾಗುತ್ತದೆ. ಇದರಿಂದ ಉತ್ತಮ ಆರೋಗ್ಯ ಹಾಗೂ ಸಂಪತ್ತು ವೃದ್ಧಿಸುತ್ತದೆ.
ಈ ಚಂಡಿಕಾ ಯಾಗದಲ್ಲಿ ಎರಡು ಬಗೆಯಿದೆ. ಪ್ರಯೂತ ಚಂಡಿಯಾಗ ಮತ್ತು ಆಯುತ ಚಂಡಿಯಾಗ. ಪ್ರಯೂತ ಚಂಡಿಯಾಗವೆಂದರೆ 700 ಶ್ಲೋಕಗಳನ್ನು ಒಂದು ದಶಲಕ್ಷ ಬಾರಿ ಜಪಿಸುತ್ತಾರೆ. ಆಯುತ ಚಂಡಿಯಾಗವೆಂದರೆ ದುರ್ಗಾಸಪ್ತಶತಿಯ 700 ಶ್ಲೋಕಗಳನ್ನು ಹತ್ತು ಸಾವಿರ ಬಾರಿ ಜಪಿಸುತ್ತಾರೆ. ಇದನ್ನು ನವರಾತ್ರಿ, ಅಷ್ಟಮಿ, ನವಮಿ, ಚತುರ್ದಶಿ, ಮಾಘ ಅಮಾವಾಸ್ಯೆ, ಜ್ಯೇಷ್ಠ ಅಮಾವಾಸ್ಯೆ, ಚೈತ್ರ ಮತ್ತು ಕಾರ್ತಿಕ ಪೌರ್ಣಮಿ ಶುಭ ದಿನಗಳಂದು ಮಾಡಲಾಗುತ್ತದೆ.