

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಹುಲಿ, ಸಿಂಹ, ಆನೆ, ಟಗರು, ಚಿರತೆ ಅಂತೆಲ್ಲ ಸ್ಟಾರ್ಗಳನ್ನು ಕರೆಯುತ್ತಾರೆ. ಆದರೆ, ಸ್ಯಾಂಡಲ್ವುಡ್ನಲ್ಲಿ ಸದ್ಯ ಕಾಕ್ರೋಚ್ ಎಂಬ ಹೆಸರು ಹೆಚ್ಚು ಸದ್ದು ಮಾಡುತ್ತಿದೆ. "ಪಾತ್ರದ ಹೆಸರೇ ನಮ್ಮ ಹೆಸರಿನ ಜತೆ ಸೇರಿಕೊಳ್ಳುವುದು ಜನರಿಗೆ ಹೆಚ್ಚು ಕನೆಕ್ಟ್ ಆಗಲು ಸಹಕಾರಿ. ದರ್ಶನ್ ಸರ್ ತಂದೆ ಶ್ರೀನಿವಾಸ್ ಅವರ ಹೆಸರಿಗೆ ತೂಗುದೀಪ, ವಿಜಿ ಸರ್ ಹೆಸರಿಗೆ ದುನಿಯಾ, ಧನಂಜಯ ಅವರಿಗೆ ಡಾಲಿ, ಯೋಗಿ ಅವರಿಗೆ ಲೂಸ್ ಮಾದ ಅಂತ ಸೇರಿಸಿ ಕರೆಯಲಾಗುತ್ತದೆ. ಇವು ಸ್ಟಾರ್ಗಿರಿಗಿಂತಲೂ ಪವರ್ಫುಲ್. ಪಾತ್ರವನ್ನು ಅಷ್ಟು ಚೆನ್ನಾಗಿ ಮಾಡಿದ್ದಾರೆ ಅಂತ ಅದರರ್ಥ. ನನ್ನ ಹೆಸರಿನ ಜತೆ "ಕಾಕ್ರೋಚ್' ಸೇರಿದಾಗಿನಿಂದ ಬದುಕು ಬದಲಾಗಿದೆ. ಸುಧಿ ಹೆಸರು ಪಕ್ಕದ ಮನೆಯವರಿಗೇ ಗೊತ್ತಿರಲಿಲ್ಲ. ರಾಣಿ ಅಂತ ಹೆಸರಿಟ್ಟುಕೊಂಡು ಮುಸುರೆ ತಿಕ್ಕುತ್ತಿದ್ದರೆ, ಮೃತ್ಯುಂಜಯ ಹೆಸರಿರುವವನು ಪೇಷೆಂಟ್ ಆಗಿದ್ದರೆ ಚೆನ್ನಾಗಿರುತ್ತಾ ಹೇಳಿ?' ಎಂದು ನಗುತ್ತಾ ಹೇಳಿಕೊಳ್ಳುತ್ತಾರೆ ನಟ ಕಾಕ್ರೋಚ್ ಸುಧಿ.
"ಟಗರು' ಚಿತ್ರದ ಮೂಲಕ 2018ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಸುಧಿ, ಇದುವರೆಗೆ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. "ಮಾದೇವ', "ವಾಮನ', "ಓಂ ಶಿವಂ', "ಸೂರಿ ಅಣ್ಣ', "ಕರಿಮಣಿ ಮಾಲೀಕ' ಸೇರಿ 18 ಚಿತ್ರಗಳು ರಿಲೀಸ್ಗೆ ರೆಡಿಯಿದೆ. ಜತೆಗೆ "ಕುಟೀರ', "ಕಟಾರ', "ಲೈಫ್ ಟುಡೇ', "ಓಂ ಕಾಳಿ', "ಇನ್ನೊಸೆಂಟ್', "ಚಿ.ಸೌಜನ್ಯ' ಸೇರಿ 12 ಚಿತ್ರಗಳಲ್ಲಿ ಸದ್ಯ ಬಿಜಿಯಾಗಿದ್ದಾರೆ.
"ಕಥೆಯೇ ಹೀರೋ. ನಾನು ಪ್ರಧಾನಿ ನರೇಂದ್ರ ಮೋದಿ ಅವರು ಹೇಳುವಂತೆ ಪ್ರಧಾನ ಕೆಲಸಗಾರ' ಎನ್ನುವ ಸುಧಿ, ಈಗಾಗಲೇ ಚಿತ್ರವೊಂದರಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಆದರೆ, ಕಾರಣಾಂತರಗಳಿಂದ ಆ ಸಿನಿಮಾ ತಡವಾಗಿದೆ. "15ನೇ ವಯಸ್ಸಿನಲ್ಲಿ ಸೈನ್ ಬೋರ್ಡ್ ಬರೆಯುವ ಕೆಲಸಕ್ಕೆ ಸೇರಿದವನು ನಾನು. ನಂತರ ಶ್ರೀ ಆರ್ಟ್ಸ್ ಸೈನ್ ಬೋರ್ಡ್ ಅಂಗಡಿ ಮಾಡಿದೆ. ಈಗಲೂ ಅದನ್ನು ನಡೆಸುತ್ತಿದ್ದೇನೆ. ನಟನಾಗಿದ್ದು ಆಕಸ್ಮಿಕ. ಆದರೆ, ಈಗ ಸಿನಿಮಾನೇ ನನ್ನ ಜೀವನ. ಇಲ್ಲಿ ಗೆಲುವಿನ ಮಂತ್ರ ಯಾರಿಗೂ ಗೊತ್ತಿಲ್ಲ. ಅದು ಗೊತ್ತಿದ್ದರೆ ಸಿನಿಮಾಗಳು ಸೋಲುತ್ತಿರಲಿಲ್ಲ. ಈಗೀಗ ನಾಯಕನಾಗಿ ಅವಕಾಶಗಳು ಬರುತ್ತಿವೆ. ನಾಲ್ಕು ಕಥೆಗಳನ್ನು ಕೇಳಿದ್ದೇನೆ. ಸದ್ಯ ಒಪ್ಪಿಕೊಂಡಿರುವ ಚಿತ್ರಗಳನ್ನು ಪೂರ್ಣಗೊಳಿಸಿ, ನಾಯಕನಾಗಿ ನಟಿಸಲಿರುವ ಸಿನಿಮಾ ಪ್ರಾರಂಭಿಸಲಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ ಸುಧಿ.