

ಬೆಂಗಳೂರು: ‘ರಾಂಧವ’, ‘ಪ್ರಣಯರಾಜ’ ಚಿತ್ರಗಳು ತೆರೆಕಂಡು ನಾಲ್ಕು ವರ್ಷಗಳ ಬಳಿಕ ನಟ ಭುವನ್ ಪೊನ್ನಣ್ಣ ನಿರ್ದೇಶಕ ಯೋಗರಾಜ ಭಟ್ ನಿರ್ದೇಶಿಸುತ್ತಿರುವ ‘ಹಲೋ 123’ ಮೂಲಕ ಕಮ್‌ಬ್ಯಾಕ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರವನ್ನು ಘೋಷಿಸಲಾಯಿತು. ಇದೇ ಖುಷಿಯಲ್ಲಿ ‘ವಿಜಯವಾಣಿ’ ಜತೆ ಮಾತಿಗೆ ಸಿಕ್ಕಿದ್ದ ಭುವನ್, ‘‘ರಾಂಧವ’, ‘ಪ್ರಣಯರಾಜ’ ಬಳಿಕ ಸಣ್ಣ ಗ್ಯಾಪ್ ತೆಗೆದುಕೊಂಡೆ. ಈ ಸಮಯದಲ್ಲಿ ನನ್ನ ಉದ್ಯಮವನ್ನು ಬಲಪಡಿಸಿದೆ. ಮದುವೆಯೂ ಆಗಿ, ಮಗು ಆಯಿತು. ಕುಟುಂಬಕ್ಕಾಗಿ ಸಮಯ ಮೀಸಲಿಡಬೇಕು ಅಂತ ಯೋಚಿಸಿ ಹಲವು ಪ್ರಾಜೆಕ್ಟ್ ಬಂದರೂ ಒಪ್ಪಿಕೊಂಡಿರಲಿಲ್ಲ. ಈಗ ಮಗಳು ಸ್ವಲ್ಪ ದೊಡ್ಡವಳಾಗಿದ್ದಾಳೆ. ಕುಟುಂಬವನ್ನು ಪತ್ನಿ ಹರ್ಷಿಕಾ ನಿಭಾಯಿಸುತ್ತಿದ್ದಾಳೆ. ಹಾಗಾಗಿ, ಇದೇ ಸರಿಯಾದ ಸಮಯ ಅಂತ ಚಿತ್ರರಂಗಕ್ಕೆ ಮತ್ತೆ ಮರಳುತ್ತಿದ್ದೇನೆ. ನಿರ್ದೇಶಕ ಯೋಗರಾಜ್ ಭಟ್ ಹಾಗೂ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಕಾಂಬಿನೇಷನ್ ಚಿತ್ರದ ಮೂಲಕ ಮತ್ತೆ ಮರಳುತ್ತಿರುವುದು ಖುಷಿ ನೀಡಿದೆ. ಇಂದಿನ ಕಾಲದಲ್ಲಿ ಯೋಗರಾಜ್ ಸರ್ ಜತೆ ಕೆಲಸ ಮಾಡಬೇಕು ಎಂದು ಎಷ್ಟೋ ಕಲಾವಿದರು ಹಾತೊರೆಯುತ್ತಾರೆ. ನನಗೆ ಆ ಭಾಗ್ಯ ಸಿಕ್ಕಿದೆ. ಕನ್ನಡ ಚಿತ್ರರಂಗದಲ್ಲಿ ನನ್ನನ್ನು ನಾನು ಸಾಬೀತುಪಡಿಸಿಕೊಳ್ಳಬೇಕು ಅಷ್ಟೇ. ಇಲ್ಲಿ ನಾನು ಯಾರಿಗೂ ಸ್ಪರ್ಧೆ ಮಾಡಲು ಇಚ್ಚಿಸುತ್ತಿಲ್ಲ’ ಎನ್ನುತ್ತಾರೆ ಭುವನ್.
‘ಹಲೋ 123’ ಕುರಿತು ಭುವನ್ ಪೊನ್ನಣ್ಣ ‘ಯೋಗರಾಜ್ ಸರ್ ಏನೇ ಬರೆದರೂ ಅದು ಹೊಸತನದಿಂದ ಇರುತ್ತದೆ. ‘ಹಲೋ 123’ ಒಂದು ಮ್ಯೂಸಿಕಲ್ ಲವ್‌ಸ್ಟೋರಿ. ನನಗೆ ತಕ್ಕ ಕಥೆ ಅಂತನಿಸಿತು. ಹಾಗಾಗಿ, ಒಪ್ಪಿಕೊಂಡೆ. ನನ್ನನ್ನು ನಾನೇ ಈ ಚಿತ್ರದಲ್ಲಿ ನೋಡಬಹುದು. ಎಂಟರ್‌ಟೈನ್‌ಮೆಂಟ್ ಜತೆಗೆ ಮಲೆನಾಡ ಹಸಿರು ಹೊದಿಕೆ, ಕಾಡುವ ಪಾತ್ರಗಳು, ಎಮೋಷನಲ್ ಕ್ಷಣಗಳು ಈ ಕಥೆಯಲ್ಲಿವೆ. ಇಂದಿನ ಜೆನ್-ಜೀಗಳಿಗೆ ಇಷ್ಟವಾಗುವ ಸ್ಟೋರಿ’ ಎಂದು ಮಾಹಿತಿ ನೀಡುತ್ತಾರೆ.
ಭುವನ್ ಪೊನ್ನಣ್ಣ ಪತ್ನಿ ನಟಿ ಹರ್ಷಿಕಾ ಪೂಣಚ್ಚ ‘ಚಿ.ಸೌಜನ್ಯ’ ಚಿತ್ರದ ಮೂಲಕ ಈಗಾಗಲೇ ಡೈರೆಕ್ಷನ್‌ಗಳಿದಿದ್ದಾರೆ. ಈ ನಡುವೆ ಭುವನ್ ಡೈರೆಕ್ಷನ್ ಮಾಡುವ ಆಲೋಚನೆ ಬಗ್ಗೆ, ‘ನನ್ನ ಅಮ್ಮ ದೊಡ್ಡ ಸಾಹಿತಿ. ಹಲವು ಕಾದಂಬರಿ ಬರೆದಿದ್ದಾರೆ. ಅವರ ಪ್ರಭಾವ ನನ್ನ ಮೇಲೂ ಇದೆ. ನಾನು ಚಿಕ್ಕಂದಿನಿಂದಲೂ ಸಾಹಿತ್ಯ, ಸಂಗೀತ, ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವನು. ಎರಡು-ಮೂರು ಕಥೆಗಳನ್ನು ಬರೆದಿಟ್ಟುಕೊಂಡಿದ್ದೇನೆ. ಅದನ್ನು ತೆರೆ ಮೇಲೆ ತರಲು ಸಮಯ ಬೇಕು. ಸದ್ಯ ‘ಹಲೋ 123’ಗೆ ಮೊದಲ ಆದ್ಯತೆ. ಈ ಸಮಯದಲ್ಲಿ ಎರಡು-ಮೂರು ಕಥೆಗಳನ್ನು ಕೇಳಿದ್ದೇನೆ. ಡಿಸೆಂಬರ್ ಬಳಿಕ ಅವುಗಳ ಮಾಹಿತಿ ಸಿಗಲಿದೆ’ ಎಂದು ಹೇಳಿಕೊಳ್ಳುತ್ತಾರೆ.