ಊಟ ಇಲ್ದೆ ಬರೀ ಹಣ್ಣು ತಿಂದು ಮಲಗಿದ್ದೂ ಇದೆ: ನಿರ್ದೇಶಕನಿಗೆ ಅನಿರುದ್ಧ್ ಪ್ರತ್ಯುತ್ತರ

1329171
Published on

ಬೆಂಗಳೂರು: ಜೊತೆಜೊತೆಯಲ್ಲಿ ಧಾರಾವಾಹಿಯಿಂದ ತಮ್ಮನ್ನು ಕೈಬಿಟ್ಟ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸೀರಿಯಲ್‌ನ ನಾಯಕನಟ ಅನಿರುದ್ಧ್, ತಮ್ಮ ವಿರುದ್ಧ ನಿರ್ದೇಶಕ ಆರೂರ್ ಜಗದೀಶ್ ಮಾಡಿರುವ ಆರೋಪಗಳಿಗೆ ಪ್ರತ್ಯುತ್ತರ ನೀಡಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘‘ನನ್ನ ಮಕ್ಕಳ ಮೇಲೆ ಆಣೆ ಮಾಡಿ ಹೇಳ್ತೀನಿ. ನಾನು ದುರಹಂಕಾರದಿಂದ ನಡೆದುಕೊಂಡಿಲ್ಲ. ಸೀರಿಯಲ್ ಇನ್ನೂ ಉತ್ತಮವಾಗಿ ಬರಲಿ ಎಂಬ ಉದ್ದೇಶದಿಂದ ಆಗಾಗ ಸಲಹೆಗಳನ್ನು ಕೊಟ್ಟಿದ್ದೇನೆ. ಬದಲಾವಣೆ ಮಾಡಿಸಲು ಪ್ರಯತ್ನಿಸಿದ್ದೇನೆ. ಆರಂಭದಲ್ಲಿ ನಾನು ಕ್ಯಾಮರಾಗೆ ನಮಸ್ಕಾರ ಮಾಡಿ ಶೂಟಿಂಗ್‌ಗೆ ಕಾಲಿಟ್ಟಿದ್ದೇನೆ. ದಿನಕ್ಕೆ ಒಂಬತ್ತು ಗಂಟೆ ಮಾತ್ರವಲ್ಲ, ಕೆಲವೊಮ್ಮೆ ಹಗಲೂ ರಾತ್ರಿ ದುಡಿದಿದ್ದೇನೆ’’ ಎಂದು ವಿವರಿಸಿದರು.

ನಮ್ಮ ತಂಡದ ಕಲಾವಿದರೆಲ್ಲರೂ ಒಂದೇ ಕಡೆ ಇರುತ್ತೇವೆ. ಎಲ್ಲರೂ ಸೇರಿ ಒಂದೇ ಹೋಟೆಲ್‌ಗೆ ಊಟಕ್ಕೆ ಹೋಗ್ತಿದ್ವಿ. ಅದು ತಪ್ಪಾ? ಪ್ರೊಡಕ್ಷನ್‌ನಲ್ಲೇ ಊಟ ಮಾಡಬೇಕು ಅಂತ ಹೇಳಿರಲಿಲ್ಲ. ಹೇಳಿದ್ರೆ ಅಲ್ಲೇ ಮಾಡ್ತಿದ್ವಿ. ಊಟದ ವಿಷಯವನ್ನೂ ಒಂದು ಇಷ್ಯೂ ಮಾಡೋದಾದ್ರೆ ಹೇಗೆ? ರಾಜಾನುಕುಂಟೆಯಲ್ಲಿ ಯಾವಾಗಾದರೊಮ್ಮೆ ಶೂಟಿಂಗ್ ಇರುತ್ತೆ ಅಂತ ಆರಂಭದಲ್ಲೇ ಸುಳ್ಳು ಹೇಳಿದರು. ಆದರೆ ಅದೇ ಸ್ಥಳದಲ್ಲಿ ರೆಗ್ಯುಲರ್ ಆಗಿ ಇತ್ತು. ಇಲ್ಲಿಂದ ರಾಜಾನುಕುಂಟೆ ಎಷ್ಟು ದೂರ ಗೊತ್ತೆ? ಬೆಳಗ್ಗೆ ಜಿಮ್ ಮುಗಿಸಿಕೊಂಡು 9 ಗಂಟೆಗೆ ಅಲ್ಲಿಗೆ ಹೋಗೋದು… ರಾತ್ರಿ ಮುಗಿಸೋದು ಎಷ್ಟು ಗಂಟೆಗೆ? ರಾತ್ರಿಯೆಲ್ಲ ಬೆಳಗ್ಗೆವರೆಗೆ ಶೂಟಿಂಗ್ ಮಾಡ್ತಾನೇ ಇರೋದು… ಹೀಗೆ ಒಂದೂವರೆ ವರ್ಷ ಮಾಡಿದೀನಿ. ರಾತ್ರಿ ಬರೀ ಒಂದು ಹಣ್ಣು ತಿಂದು ಮಲಗಿಕೊಳ್ಳುತ್ತಿದ್ದೆ. ಯಾಕೆಂದರೆ ರಾತ್ರಿ ಅಷ್ಟೊತ್ತಿಗೆ ಬಂದು ಊಟ ಮಾಡಲು ಆಗುತ್ತಾ?’’ ಎಂದು ಅನಿರುದ್ಧ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net