

ನಟ ಅಕ್ಷಯ್ ಕುಮಾರ್ ಬಾಲಿವುಡ್‌ನಲ್ಲೇ ಅತ್ಯಂತ ಬಿಜಿ ಸೂಪರ್‌ಸ್ಟಾರ್. ಸಿನಿಮಾ ಸಕ್ಸಸ್ ಆಗಲಿ, ಬಿಡಲಿ ಆದರೆ, ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಯಾವಾಗಲೂ ಬಿಜಿಯಿರುತ್ತಾರೆ. ಇಂತಹ ಅಕ್ಷಯ್ 2019ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಂದರ್ಶನ ನಡೆಸಿದ್ದರು. ಜತೆಗೆ ಸ್ವಚ್ಛ ಭಾರತದ ಕುರಿತು ‘ಟಾಯ್ಲೆಟ್: ಏಕ್ ಪ್ರೇಮ್‌ಕಥಾ’, ಮಂಗಳಯಾನ ಯಶಸ್ಸಿನ ಬಗ್ಗೆ ‘ಮಿಷನ್ ಮಂಗಳ್’ ಚಿತ್ರಗಳಲ್ಲಿ ನಟಿಸಿದ್ದರು.
ಆಗಿನಿಂದಲೂ ಇವರನ್ನು ಬಿಜೆಪಿ ಬೆಂಬಲಿಗ ಎಂದು ಕೆಲವರು ಹೀಗಳೆಯುತ್ತಿದ್ದರು. ಜತೆಗೆ ಕೆನಡಾ ಪೌರತ್ವ ಪಡೆದಿದ್ದ ಕಾರಣ, ಕೆನಡಿಯನ್ ಕುಮಾರ್ ಎಂದೇ ಕರೆಯುತ್ತಿದ್ದರು. ಇದೀಗ ಅಕ್ಷಯ್ ಎಲ್ಲರ ಬಾಯಿಮುಚ್ಚಿಸಿದ್ದಾರೆ. ಕಳೆದ ಆ.15ರ ಸ್ವಾತಂತ್ರ ದಿನದ ಸಂಭ್ರಮದಲ್ಲಿ ಕೆನಡಾ ಪೌರತ್ವ ತೊರೆದು ಮತ್ತೆ ಭಾರತೀಯ ಪೌರತ್ವ ಪಡೆದ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.
ಅದರ ಬೆನ್ನಲ್ಲೇ, ‘ಭಾರತ ಮುಂದುವರಿಯುತ್ತಿದೆ. ಭಾರತದ ಪಾಸ್‌ಪೋರ್ಟ್ ಹಿಡಿದು ಯಾವುದೇ ದೇಶದ ವಲಸೆ ಕಚೇರಿಗೆ ಹೋದರೂ ಅಲ್ಲಿ ಗೌರವದಿಂದ ನೋಡುತ್ತಾರೆ. ಓಹ್! ನೀವು ಮೋದಿಯ ದೇಶದಿಂದ ಬಂದವರಾ? ಎನ್ನುತ್ತಾರೆ’ ಎಂದು ಹೇಳಿಕೊಂಡಿದ್ದಾರೆ. ಜತೆಗೆ ‘ನಾನು ‘ಟಾಯ್ಲೆಟ್: ಏಕ್ ಪ್ರೇಮ್‌ಕಥಾ’ ಹಾಗೂ ‘ಮಿಷನ್ ಮಂಗಳ್’ ಜತೆಗೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದ ಘಟನೆಗಳ ಕುರಿತ ‘ಏರ್‌ಲಿಫ್ಟ್’ ಹಾಗೂ ‘ಮಿಷನ್ ರಾಣಿಗಂಝ್’ ಚಿತ್ರಗಳಲ್ಲೂ ನಟಿಸಿದ್ದೇನೆ. ಆದರೆ, ಆಗ ಯಾರೂ ಮಾತನಾಡಲಿಲ್ಲ. ಇಲ್ಲಿ ಯಾವಾಗ, ಎಲ್ಲಿ ಒಳ್ಳೆಯ ವಿಷಯಗಳ ನಡೆದವು ಎಂಬುದು ಮುಖ್ಯ. ಯಾರ ಆಡಳಿತ ಇತ್ತು ಎಂಬುದಲ್ಲ. ದೇಶದ ಒಳಿತಿಗೆ ಏನೆಲ್ಲಾ ಕೆಲಸಗಳಾದವು ಎಂಬುದು ಮುಖ್ಯವಾಗುತ್ತವೆ’ ಎಂದಿದ್ದಾರೆ.
-ಏಜೆನ್ಸೀಸ್