

ಬೆಂಗಳೂರು: ‘ಫೋರ್ ವಾಲ್ಸ್ - ಟೂ ನೈಟೀಸ್’ ಎಂಬ ಚಿತ್ರದ ಮೂಲಕ ಅಚ್ಯುತ್ ಕುಮಾರ್ ಹೀರೋ ಆಗುತ್ತಿದ್ದಾರೆ ಎನ್ನುವುದು ಕಳೆದ ವರ್ಷದ ಸುದ್ದಿ. ಈಗ ಆ ಚಿತ್ರ ಸದ್ದಿಲ್ಲದೆ ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಹಿಂದೆ ‘ಮಂತ್ರಂ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಸಜ್ಜನ್, ಈ ಚಿತ್ರವನ್ನು ನಿರ್ದೇಶಿಸುತ್ತಿರುವುದಷ್ಟೇ ಅಲ್ಲ, ಕಥೆ-ಚಿತ್ರಕಥೆಯನ್ನು ಸಹ ರಚಿಸಿದ್ದಾರೆ. ಹೆಸರು ಕೇಳಿ ಇದೊಂದು ಬಿ ಗ್ರೇಡ್ ಸಿನಿಮಾ ಅಂದುಕೊಂಡಿದ್ದರಂತೆ ಅಚ್ಯುತ್.
‘ಸ್ನೇಹಿತರ ಮೂಲಕ ನಿರ್ದೇಶಕರು ಬಂದು ಕಥೆ ಹೇಳಿದರು. ಇಷ್ಟ ಆಗಲಿಲ್ಲ. ಮಾಡೋದಿಲ್ಲ ಎಂದು ಹೇಳಿದೆ. ಆ ನಂತರ ಮೂರ್ನಾಲ್ಕು ತಿಂಗಳುಗಳ ನಂತರ ಬಂದು ಮತ್ತೆ ಕಥೆ ಹೇಳಿದರು. ಮಾಡಬಹುದು ಎಂದನಿಸಿ ಒಪ್ಪಿಕೊಂಡೆ. ಒಂದು ಕುಟುಂಬದಲ್ಲಿ ನಡೆಯುವ ಕಥೆ. ಒಬ್ಬ ತಂದೆ ಹಲವು ಸವಾಲುಗಳ ನಡುವೆಯೂ ಹೇಗೆ ತನ್ನ ಬದುಕನ್ನು ಕಟ್ಟಿಕೊಳ್ಳುತ್ತಾನೆ? ಎನ್ನುವುದು ಚಿತ್ರದ ಕಥೆ. ಸವಾಲು ಎಂದ ಮಾತ್ರಕ್ಕೆ ಗೋಳಿನ ಕಥೆಯಲ್ಲ. ಬಹಳ ಲವಲವಿಕೆಯಿಂದ ಇಡೀ ಕಥೆಯನ್ನು ಹೇಳಿದ್ದಾರೆ. ಇದು ಜನರ ಹೃದಯಕ್ಕೆ ಹತ್ತಿರವಾಗುತ್ತದೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಅಚ್ಯುತ್.
ಈಗಾಗಲೇ ವಿಜಯ್ ಪ್ರಕಾಶ್ ಕಂಠದಲ್ಲಿ ಮೂಡಿ ಬಂದಿರುವ ‘ಕಣ್ಮಣಿಯೇ ಕಣ್ಮಣಿಯೇ ...’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿದೆ. ಅಚ್ಯುತ್ ಕುಮಾರ್ ಸೈಕಲ್ ಹಿಡಿದು ಗೆಳತಿ ಹಿಂದೆ ಸುತ್ತುವ, ಪ್ರೇಮ ನಿವೇದನೆ ಮಾಡುವ ಈ ಹಾಡಿಗೆ ಆನಂದ ರಾಜಾವಿಕ್ರಮ್ ಸಂಗೀತ ಸಂಯೋಜಿಸಿದ್ದಾರೆ. ‘ಫೋರ್ ವಾಲ್ಸ್ - ಟೂ ನೈಟೀಸ್’ ಚಿತ್ರದಲ್ಲಿ ಅಚ್ಯುತ್ಗೆ ನಾಯಕಿಯಾಗಿ ಡಾ. ಪವಿತ್ರಾ ನಟಿಸಿದ್ದು, ಮಿಕ್ಕಂತೆ ಡಾ. ಜಾಹ್ನವಿ ಜ್ಯೋತಿ, ದತ್ತಣ್ಣ, ಭಾಸ್ಕರ್ ನೀನಾಸಂ ನಟಿಸಿದ್ದಾರೆ.