

ಅದೃಷ್ಟ ಎನ್ನಬೇಕೋ ಅಥವಾ ಅನಿವಾರ್ಯ ಎನ್ನಬೇಕೋ.. ?!
ಒಟ್ಟಿನಲ್ಲಿ ಬಯಸದೇ ಬಂದ ಭಾಗ್ಯ ನಟ ಸೂರಜ್ ಗೌಡ ಅವರಿಗೆ ಸಿಕ್ಕಿದೆ. ಅಷ್ಟೇ ಕಾಳಜಿ ವಹಿಸಿ ಆ ಕೆಲಸ ಮಾಡಿದ ಖುಷಿ ಅವರ ಮೊಗದಲ್ಲಿತ್ತು. ಹೌದು, ಕಳೆದ ವರ್ಷ ‘ನಿನ್ನ ಸನಿಹಕೆ’ ಸಿನಿಮಾ ಸೆಟ್ಟೇರಿತ್ತು. ನಿರ್ದೇಶಕ ಸುಮನ್ ಜಾದೂಗಾರ್ ಆ ಚಿತ್ರದ ನಿರ್ದೇಶಕರಾಗಿದ್ದರು. ಎಲ್ಲವೂ ಸರಿಯಾಗಿಯೇ ನಡೆಯುತ್ತಿದೆ ಎಂದಾಗ ನಿರ್ದೇಶಕ ಸುಮನ್ಗೆ ಅಪಘಾತವಾಗಿ ಇಡೀ ಚಿತ್ರತಂಡಕ್ಕೆ ಬರಸಿಡಿಲು ಬಡಿದಂತಾಗಿತ್ತು. ಆರು ವಾರ ವಿಶ್ರಾಂತಿಯಲ್ಲಿರಬೇಕಿತ್ತು.
ಮತ್ತೆ ಶೂಟಿಂಗ್! ಆಗ ಚಿತ್ರಕ್ಕೆ ಕಥೆ ಬರೆದು, ನಾಯಕನಾಗಿ ನಟಿಸುತ್ತಿದ್ದ ಸೂರಜ್ ಗೌಡ ನಿರ್ದೇಶನದ ಜವಾಬ್ದಾರಿ ಹೊರಬೇಕಾಯಿತು. ‘ನಾನು ನಿರ್ದೇಶನ ಮಾಡಿದ್ದರೂ, ಆ ಮಟ್ಟದ ಸಿನಿಮಾ ಮಾಡುತ್ತಿದ್ದೆನೋ ಇಲ್ಲವೋ ಗೊತ್ತಿಲ್ಲ. ಅದ್ಭುತವಾಗಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನಿಲ್ಲಿಸಲು ಮನಸಾಗಲಿಲ್ಲ. ನಿರ್ವಪಕರೆಲ್ಲರ ಜತೆ ಚರ್ಚೆ ಮಾಡಿ ಈ ನಿರ್ಧಾರಕ್ಕೆ ಬರಲಾಯಿತು. ಆ ಕೆಲಸವನ್ನು ಅಷ್ಟೇ ನಿಷ್ಠೆಯಿಂದ ಸೂರಜ್ ಮಾಡಿದ್ದಾರೆ’ ಎಂದರು ಸುಮನ್.
ಇತ್ತ ನಟನಾಗಿ, ನಿರ್ದೇಶಕನಾಗಿ ಎರಡೆರಡು ಜವಾಬ್ದಾರಿಗಳನ್ನು ನಿಭಾಯಿಸಿದ್ದ ಸೂರಜ್, ‘ಆಕ್ಸಿಡೆಂಟಲ್ ಪ್ರೖೆಮ್ ಮಿನಿಸ್ಟರ್ ಥರ ಆಕ್ಸಿಡೆಂಟಲ್ ನಿರ್ದೇಶಕನಾದೆ. ನಾನು ನಟನಾಗಬೇಕೆಂದು ಬಂದವನು. ನಿರ್ದೇಶಕನಾಗಬೇಕು ಎಂಬ ಪ್ಲಾ್ಯನ್ ಇರಲಿಲ್ಲ. ಆದರೆ, ಆ ಒಂದು ಸುಯೋಗ ‘ನಿನ್ನ ಸನಿಹಕೆ’ ಸಿನಿಮಾ ಮೂಲಕ ಸಿಕ್ಕಿತು. ಎಲ್ಲರ ಸಹಕಾರದಿಂದ ಅಚ್ಚುಕಟ್ಟಾಗಿ ಸಿನಿಮಾ ಮಾಡಿದ್ದೇವೆ. ಕಥೆ-ಚಿತ್ರಕಥೆ ನಾನೇ ಬರೆದಿದ್ದರಿಂದ ನಿರ್ದೇಶನಕ್ಕೆ ಸಹಾಯವಾಯ್ತು’ ಎನ್ನುವ ಸೂರಜ್, ಅವಕಾಶ ಸಿಕ್ಕರೆ ಮುಂದೆಯೂ ನಿರ್ದೇಶನ ಮಾಡುತ್ತೇನೆ.
ಆದರೆ, ಅದು ಈ ಸಿನಿಮಾದ ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ’ ಎಂದರು. ನಾಯಕಿಯಾಗಿ ಪದಾರ್ಪಣೆ ಮಾಡುತ್ತಿರುವ ಡಾ. ರಾಜ್ಕುಮಾರ್ ಕುಟುಂಬದ ಕುಡಿ ಧನ್ಯಾ ರಾಮ್ುಮಾರ್, ಸಿನಿಮಾ ಬಗ್ಗೆ ಹೆಚ್ಚು ಮಾತನಾಡದೆ, ಇಡೀ ಚಿತ್ರತಂಡಕ್ಕೆ ಧನ್ಯವಾದ ಅರ್ಪಿಸಿ ಮಾತು ಮುಗಿಸಿದರು.
ರಘು ದೀಕ್ಷಿತ್ ಸಂಗೀತ ನಿರ್ದೇಶನ ಮಾಡಿದ್ದು, ಮೆಲೊಡಿ ಹಾಡು ಮತ್ತು ಹಿನ್ನೆಲೆ ಸಂಗೀತದ ಮೂಲಕವೇ ಅವರು ಮೋಡಿ ಮಾಡಲಿದ್ದಾರಂತೆ. ಬೆಂಗಳೂರಿನಲ್ಲಿಯೇ ಶೇ. 95 ಶೂಟಿಂಗ್ ಮಾಡಿಕೊಂಡಿರುವ ಚಿತ್ರತಂಡ, ಮಡಿಕೇರಿಯಲ್ಲಿಯೂ ಕೆಲ ದೃಶ್ಯಗಳನ್ನು ಸೆರೆ ಹಿಡಿದಿದೆ. ಅಭಿಲಾಷ್ ಕಳತ್ತಿ ಛಾಯಾಗ್ರಹಣ, ಸುರೇಶ್ ಆಮುಗಂ ಸಂಕಲನ , ಜೆ. ಪ್ರವೀಣ್ಕುಮಾರ್ ಸಂಭಾಷಣೆ ಈ ಚಿತ್ರಕ್ಕಿದೆ. ಅಕ್ಷಯ್ ರಾಜಶೇಖರ್ ಮತ್ತು ರಂಗನಾಥ್ ಕುಡ್ಲಿ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಏಪ್ರಿಲ್ ಕೊನೇ ವಾರ ಸಿನಿಮಾ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.